ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ: ಲಾಠಿ ಚಾರ್ಜ್

ಅಂಗಡಿ, ಟೈರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ
Published : 11 ಸೆಪ್ಟೆಂಬರ್ 2024, 17:32 IST
Last Updated : 11 ಸೆಪ್ಟೆಂಬರ್ 2024, 17:32 IST
ಫಾಲೋ ಮಾಡಿ
Comments

ನಾಗಮಂಗಲ (ಮಂಡ್ಯ ಜಿಲ್ಲೆ): ಪಟ್ಟಣದ ಮೈಸೂರು ರಸ್ತೆಯ ದರ್ಗಾದ ಬಳಿ ಬುಧವಾರ ರಾತ್ರಿ ಗಣೇಶ ಮೂರ್ತಿಗಳ ಮೆರವಣಿಗೆ ಸಾಗುತ್ತಿದ್ದ ವೇಳೆ ಗುಂಪೊಂದು ಕಲ್ಲು ತೂರಾಟ ಮಾಡಿದ ಪರಿಣಾಮ ಕೆಲವರಿಗೆ ಗಾಯಗಳಾಗಿವೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಪಟ್ಟಣದ ಬದ್ರಿಕೊಪ್ಪಲು ಗ್ರಾಮದ ಯುವಕರು ಪಟ್ಟಣದ ಹೆದ್ದಾರಿಯಲ್ಲಿ ಗಣೇಶ ವಿಸರ್ಜನೆ ಅಂಗವಾಗಿ ಮೆರವಣಿಗೆ ನಡೆಸುತ್ತಿದ್ದರು. ಆ ಸಂದರ್ಭ ಹಿಂದೂ– ಮುಸ್ಲಿಂ ಯುವಕರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ಕಲ್ಲು ತೂರಾಟದಿಂದ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಗಾಯಗಳಾಗಿವೆ. ಮಾತಿನ ಚಕಮಕಿ ವೇಳೆ ಗುಂಪೊಂದು ಕತ್ತಿ, ತಲ್ವಾರ್‌ ಜಳಪಿಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಇದೇ ದರ್ಗಾ ಬಳಿ ಗಣೇಶ ಮೆರವಣಿಗೆ ಸಂದರ್ಭ ಗಲಾಟೆ ನಡೆದಿತ್ತು.

ಕಲ್ಲು ತೂರಾಟದಿಂದ ಕೋಪಗೊಂಡ ಯುವಕರು ಮೆರವಣಿಗೆಯನ್ನು ಪೊಲೀಸ್‌ ಠಾಣೆಯ ಮುಂಭಾಗ ನಿಲ್ಲಿಸಿ, ‘ನ್ಯಾಯ ಬೇಕು’ ಎಂದು ಘೋಷಣೆ ಕೂಗಿದರು. ನಂತರ ಮಾಹಿತಿ ತಿಳಿದ ನೂರಾರು ಯುವಕರು ಘಟನಾ ಸ್ಥಳದಲ್ಲಿ ಜಮಾಯಿಸಿದರು‌. ಪಟ್ಟಣದ ಮಂಡ್ಯ ವೃತ್ತದ ಮೈಸೂರು ರಸ್ತೆಯಲ್ಲಿ ಮೆರವಣಿಗೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

ಅಂಗಡಿಗಳಿಗೆ ಬೆಂಕಿ: ಉದ್ರಿಕ್ತ ಗುಂಪೊಂದು ಅಂಗಡಿಗಳಿಗೆ ಬೆಂಕಿ ಹಚ್ಚಿ, ಟೈರುಗಳನ್ನು ಸುಟ್ಟು ಹಾಕಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಅಗ್ನಿ ನಂದಿಸಲು ಕಾರ್ಯಾಚರಣೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಮೈಸೂರು–ನಾಗಮಂಗಲ–ಬೆಳ್ಳೂರು ಕ್ರಾಸ್‌ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಬದಲಿ ಮಾರ್ಗವಾದ ಬಿಂಡಿಗನವಿಲೆ, ಬೋಗಾದಿ ಮಾರ್ಗವಾಗಿ ಚಲಿಸುತ್ತಿದ್ದುದು ಕಂಡು ಬಂದಿತು.

ಘಟನೆಯಿಂದ ಪಟ್ಟಣದ ವ್ಯಾಪ್ತಿಯ ನಿವಾಸಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ಬಿಗಿ ಬಂದೋಬಸ್ತ್‌ ಒದಗಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT