ಮಂಡ್ಯ: ‘ಬಾಂಗ್ಲಾದೇಶದಂತೆ ಭಾರತದಲ್ಲೂ ಕ್ಷೋಭೆ, ಸಂಘರ್ಷ ಉಂಟಾಗಬಹುದು ಮತ್ತು ಬಾಂಗ್ಲಾದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೂ ಜನ ನುಗ್ಗುತ್ತಾರೆ’ ಎಂದು ಕಾಂಗ್ರೆಸ್ ನಾಯಕರಾದ ಸಲ್ಮಾನ್ ಖುರ್ಷಿದ್ ಮತ್ತು ಸಜ್ಜನ್ ಸಿಂಗ್ ಅವರು ನೀಡಿರುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಇವರಿಬ್ಬರ ವಿರುದ್ಧ ಮೊಕದ್ದಮೆ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಒತ್ತಾಯಿಸಿದರು.
ಇವರಿಬ್ಬರ ಹೇಳಿಕೆಗಳನ್ನು ಗಮನಿಸಿದರೆ, ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಂಚು ನಡೆದಿದೆ ಮತ್ತು ಜನರಿಂದ ಆಯ್ಕೆಯಾದ ಎನ್‌ಡಿಎ ಸರ್ಕಾರವನ್ನು ಬೀಳಿಸಲು ತಂತ್ರ ಹೂಡಿದ್ದಾರೆ ಅನಿಸುತ್ತದೆ. ಈ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳೋ? ಅಥವಾ ಪಕ್ಷದ ನಿಲುವೋ?ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಬೇಕು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ರೇಟ್ ಕಾರ್ಡ್ ಫಿಕ್ಸ್:
ಕಾಂಗ್ರೆಸ್ ಸರ್ಕಾರದಲ್ಲಿ ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸೇರಿದಂತೆ ಹಲವಾರು ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆದಿವೆ. ಅಹಿಂದ ನಾಯಕ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಇಲಾಖೆಯಲ್ಲೂ ಅನ್ಯಾಯ ಎಸಗಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಆರೋಗ್ಯ ತಪಾಸಣೆ ಹೆಸರಿನಲ್ಲಿ ಅನುದಾನ ದುರ್ಬಳಕೆಯಾಗಿದೆ. ಬಿಬಿಎಂಪಿಯಲ್ಲಿ ಟೆಂಡರ್ ಹಗರಣವಾಗಿದೆ. ವಿವಿಧ ಇಲಾಖೆಗಳಲ್ಲಿ ‘ರೇಟ್ ಕಾರ್ಡ್ ಫಿಕ್ಸ್’ ಆಗಿದೆ. ಇದರಿಂದಾಗಿಯೇ ಚಂದ್ರಶೇಖರ್, ತಿಮ್ಮೇಗೌಡ, ಪರಶುರಾಮ ಚಲವಾದಿ ಮುಂತಾದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರು ಎಂದು ದೂರಿದರು.
ಲೂಟಿಯ ಪಾಲು ಹೈಕಮಾಂಡ್‌ಗೆ:
‘ಎಸ್.ಸಿ.ಎಸ್.ಪಿ– ಟಿಎಸ್‌ಪಿ’ ದಲಿತರ ಅನುದಾನ ದುರ್ಬಳಕೆಯಾದರೂ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಏಕೆ ಮೌನವಾಗಿದ್ದಾರೆ. ಇದರ ಅರ್ಥ ಲೂಟಿಯ ಪಾಲು ಕಾಂಗ್ರೆಸ್ ಹೈಕಮಾಂಡ್‌ಗೆ ಹೋಗಿದೆ ಎಂಬುದನ್ನು ತೋರಿಸುತ್ತದೆ’ ಎಂದು ಆರೋಪಿಸಿದರು.
ಪಾಪ ವಿಮೋಚನೆಗೆ ಪಾದಯಾತ್ರೆ ಎಂಬ ಕಾಂಗ್ರೆಸ್ ಟೀಕೆಗೆ, ‘ಪುಣ್ಯದ ಪರಿಣಾಮವಾಗಿಯೇ ಕೆಲವರು ತಿಹಾರ್ ಜೈಲಿಗೆ ಹೋಗಿದ್ದರು ಮತ್ತು ಕೆಲವು ಪ್ರಕರಣಗಳಲ್ಲಿ ಜಾಮೀನಿನ ಪಡೆದು ಓಡಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೆಸರು ಹೇಳದೇ ತಿರುಗೇಟು ನೀಡಿದರು.
ಭ್ರಷ್ಟಾಚಾರಕ್ಕೆ ಲೈಸೆನ್ಸ್ ಕೊಟ್ಟಿಲ್ಲ:
ಮುಡಾ ಹಗರಣದಲ್ಲಿ ಕಾಂಗ್ರೆಸ್ಸಿಗರು ಭಯಗೊಂಡಿರುವ ಕಾರಣದಿಂದಾಗಿಯೇ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದಾರೆ. ‘ಬಿಜೆಪಿಯ ಭ್ರಷ್ಟಾಚಾರಗಳನ್ನೂ ಬಿಚ್ಚಿಡುತ್ತೇವೆ’ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
ಜನ ಅಧಿಕಾರ ಕೊಟ್ಟಿರುವುದನ್ನು ‘ಭ್ರಷ್ಟಾಚಾರಕ್ಕೆ ಲೈಸೆನ್ಸ್’ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಪ್ಪಾಗಿ ಭಾವಿಸಿದ್ದಾರೆ. ಬಿಜೆಪಿ ಭ್ರಷ್ಟಾಚಾರ ಹಗರಣಗಳನ್ನು ಬಿಚ್ಚಿಡುವುದಷ್ಟೇ ಅಲ್ಲ, ತನಿಖೆ ನಡೆಸುವ ಅವಕಾಶವೂ ಇದೆ. ಸಾಕ್ಷ್ಯಾಧಾರಗಳಿದ್ದರೆ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
‘ಹಿಂದೂಗಳು ಬಹುಸಂಖ್ಯಾತರಾಗಿರುವವರೆಗೆ ಪ್ರಜಾಪ್ರಭುತ್ವ ಜೀವಂತ’ ‘ಭಾರತವನ್ನು ಇಸ್ಲಾಮೀಕರಣ ಮಾಡುವ ಪ್ರಯತ್ನ ಇವತ್ತಿನದಲ್ಲ. ದೇಶದ ಮೇಲೆ ನಿರಂತರ ಆಕ್ರಮಣ ನಡೆಯುತ್ತಲೇ ಇದೆ. ಎಲ್ಲಿಯವರೆಗೆ ಹಿಂದೂಗಳು ಬಹುಸಂಖ್ಯಾತರಾಗಿರುತ್ತಾರೋ ಅಲ್ಲಿಯವರೆಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿದಿರುತ್ತದೆ. ಜಾತಿ ರಾಜಕಾರಣ ಮೀರಿ ದೇಶ ಹಿತದ ರಾಜಕಾರಣ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತವಾಗಿರುತ್ತದೆ. ವೈಯಕ್ತಿಕ ಲಾಭ ಮತ್ತು ಅಧಿಕಾರದ ಆಸೆಗಾಗಿ ಮತೀಯ ಶಕ್ತಿಗಳಿಗೆ ಕುಮ್ಮಕ್ಕು ಕೊಟ್ಟರೆ ದೇಶದ ಹಿತಕ್ಕೆ ಧಕ್ಕೆಯಾಗುತ್ತದೆ’ ಎಂದು ಹೇಳುವ ಮೂಲಕ ಸಿ.ಟಿ.ರವಿ ಅವರು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.