ಸೋಮವಾರ, ಸೆಪ್ಟೆಂಬರ್ 20, 2021
20 °C
ನೀರು ಕಲುಷಿತ; ಮೀನು, ಕೊಕ್ಕರೆಗಳಿಗೆ ಅಪಾಯ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಿರಿದಾಗುತ್ತಿರುವ ಸೂಳೆಕೆರೆ

ಅಂಬರಹಳ್ಳಿ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಭಾರತೀನಗರ: ಮದ್ದೂರು ತಾಲ್ಲೂಕು, ಚಿಕ್ಕರಸಿನಕೆರೆ ಹೋಬಳಿಯ 6,630 ಎಕರೆ ಭೂಮಿಗೆ ನೀರುಣಿಸುವ ಐತಿಹಾಸಿಕ ಸೂಳೆಕೆರೆ ಒತ್ತುವರಿಯಿಂದಾಗಿ ಕಿರಿದಾಗುತ್ತಿದೆ. ಹೂಳು ತುಂಬಿದ ಕಾರಣ
ಸಾಮರ್ಥ್ಯ ಕಡಿಮೆಯಾಗುತ್ತಿದ್ದು, ಮುಂದೊಂದು ದಿನ ಕರೆ ಮರೆಯಾಗುವ ಸ್ಥಿತಿ ನಿರ್ಮಾಣವಾಗಿದೆ.

ಮದ್ದೂರು ತಾಲ್ಲೂಕಿನಲ್ಲೇ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಸೂಳೆಕೆರೆ, ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಗಾಗಿ ಕುಖ್ಯಾತಿಗೊಳ್ಳುತ್ತಿದೆ. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಸೇರಿದ ಕೆರೆ ಈಗ ಸಮರ್ಪಕ ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ಎಂದೂ ಬರಿದಾಗದೆ ಇದ್ದ ಕೆರೆ ಈಗ ಪ್ರತಿ ಬೇಸಿಗೆಗೂ ಬರಿದಾಗುತ್ತಿದ್ದು, ಈ ಕೆರೆಯ ನೀರನ್ನೇ ನಂಬಿ ದಿನವೆಲ್ಲ ಬಿಡುವಿಲ್ಲದೆ ವ್ಯವಸಾಯ ಮಾಡುತ್ತಿದ್ದ ರೈತರು ಹಲವು ತಿಂಗಳ ಕಾಲ ಕೈ
ಕಟ್ಟಿ ಕೂರುವಂತಾಗಿದೆ.

948 ಎಕರೆ ವಿಸ್ತೀರ್ಣವಿದ್ದ ಕೆರೆ ಒತ್ತುವರಿಯಿಂದಾಗಿ ಕಿರಿದಾಗುತ್ತಿದೆ. ಮುಟ್ಟನಹಳ್ಳಿ ಗ್ರಾಮದ ಹಲವು ರೈತರು ಒಗ್ಗೂಡಿ ಸೂಳೆಕೆರೆ ಹಿತರಕ್ಷಣಾ ಸಮಿತಿ ಸ್ಥಾಪಿಸಿದ್ದಾರೆ. ಈ ಸಮಿತಿ ಮೂಲಕ ಸೂಳೆಕೆಯ ಉಳಿವಿಗಾಗಿ, ಒತ್ತುವರಿ ತೆರವಿಗಾಗಿ, ಕೋಡಿ ಹೆಚ್ಚಿಸಲು ಪ್ರಯತ್ನಗಳು ನಡೆದಿವೆ. ಪರಿಣಾಮವಾಗಿ ಕೆರೆಯ ಗಡಿ ಗುರುತಿಸಲು ತಾಲ್ಲೂಕು ಆಡಳಿತ ಮುಂದಾಗಿತ್ತು. ಕಾಲಕ್ರಮೇಣ ಗಡಿಯೂ ಮುಚ್ಚಿ ಹೋಗಿರುವುದು ಒತ್ತುವರಿಗೆ ಸಾಕ್ಷಿಯಾಗಿದೆ.

ಮಳೆಗಾಲ ಸಂದರ್ಭ ಸೂಳೆಕೆರೆಗೆ ಅತಿ ಹೆಚ್ಚು ನೀರು ಹರಿದು ಬಂದಾಗ, ಮಾದರಹಳ್ಳಿ, ಹೆಮ್ಮಿಗೆ, ಅಂಬರಹಳ್ಳಿ ಗ್ರಾಮಗಳ ಹಲವು ರೈತರ ವ್ಯವಸಾಯ ಜಮೀನುಗಳು ಹಿನ್ನೀರಿಗೆ ಸಿಲುಕಿ ಬೆಳೆ ನಷ್ಟವಾಗುವ ಪರಿಸ್ಥಿತಿಯೂ ಕೆಲವೊಮ್ಮೆ ಉಂಟಾಗುತ್ತದೆ. ಮಂಡ್ಯ ನಗರದ ಬಹುತೇಕ ತ್ಯಾಜ್ಯ ನೀರು ಹೆಬ್ಬಾಳದ ಮೂಲಕ ಹರಿದು ಸೂಳೆಕೆರೆ ಸೇರುತ್ತಿದೆ. ಪರಿಣಾಮವಾಗಿ ಆಗಾಗ ಕೆರೆಯಲ್ಲಿನ ಮೀನು, ಕೊಕ್ಕರೆ ಸಾವಿಗೀಡಾಗುತ್ತವೆ.

ಸೂಳೆಕೆರೆಗೆ ನೀರು ತರುವ, ಅಗಲವಿದ್ದ ಹೆಬ್ಬಾಳವೂ ಕಿರಿದಾಗಿದೆ. ಆಳವಿದ್ದ ಕೆರೆಯಲ್ಲಿ ಹತ್ತಾರು ಅಡಿ ಹೂಳು ತುಂಬಿದೆ. ಕಡು ಬೇಸಿಗೆಯಲ್ಲೂ ನೀರು ನಿಲ್ಲುತ್ತಿದ್ದ ಕೆರೆಯಲ್ಲಿ ಬೇಸಿಗೆ ಬಂತೆಂದರೆ ಬರಿದಾಗುತ್ತದೆ. ಕೆರೆ ಏರಿ ಸುತ್ತ ಗಿಡಗಂಟಿ ಬೆಳೆದು ಕಾಲಿಡದಂತಾಗಿದೆ. ಏರಿಯ ಮೇಲೆ ಗುಂಡಿಗಳು ನಿರ್ಮಾಣವಾಗಿ ತಿರುಗಾಡಲು ಕಷ್ಟವಾಗಿದೆ.

2,605 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಸೂಳೆಕೆರೆ 17 ಕಿ.ಮೀ ಉದ್ದದ ಉತ್ತರ ನಾಲೆ, 3,725 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ 11.50 ಕಿ.ಮೀ ಉದ್ದದ ಸೂಳೆಕೆರೆಯ ದಕ್ಷಿಣ ನಾಲೆಗಳು ಶಿಥಿಲಗೊಂಡಿವೆ. ನಾಲೆಯ ನಿರ್ಮಾಣಕ್ಕೆ ಬಳಸಿದ್ದ ದಿಂಡುಗಲ್ಲುಗಳು ಕಳಚಿ ಕಾಲುವೆಯೊಳಗೆ ಬಿದ್ದಿದೆ. ಹಲವು ಕಡೆ ತೂಬುಗಳು ಶಿಥಿಲಗೊಂಡು ನೀರು ಪೋಲಾಗುತ್ತಿದೆ. ನಾಲೆಯಲ್ಲಿ ಗಿಡಗಂಟಿಗಳು ಬೆಳೆದು, ಕಸ ಕಡ್ಡಿಗಳು ನಿಂತು ಗಬ್ಬುನಾರುತ್ತಿವೆ.

‘ಶಿಥಿಲಗೊಂಡಿದ್ದ ಸೂಳೆಕೆರೆಯ ಮುಖ್ಯ 2 ತೂಬುಗಳನ್ನು ಸುಮಾರು ₹1 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ಸೂಳೆಕೆರೆಯ ಉತ್ತರ ಮತ್ತು ದಕ್ಷಿಣ ನಾಲೆಗಳ ನವೀಕರಣಕ್ಕಾಗಿ ₹34 ಕೋಟಿ ಅಂದಾಜು ವೆಚ್ಚವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಕೊರತೆಯಿಂದಾಗಿ ಕೆಲಸ ಸಾಧ್ಯವಾಗಿಲ್ಲ’ ಎಂದು ಕಾವೇರಿ ನೀರಾವರಿ ನಿಗಮದ ಎಇ ಚಂದ್ರೇಗೌಡ ಹೇಳುತ್ತಾರೆ.

ಪದೆಪದೇ ಒತ್ತುವರಿ ಸಮಸ್ಯೆ ಎದುರಿಸುತ್ತಿರುವ ಸೂಳೆಕೆರೆಯನ್ನು ರಕ್ಷಿಸಿ, ಯಥೇಚ್ಛ ನೀರು ಸಂಗ್ರಹಗೊಳ್ಳಲು ಹೂಳು ತೆಗೆಸಬೇಕು. ಕಲುಷಿತ ನೀರು ಬಾರದಂತೆ ಶುದ್ಧೀಕರಿಸಬೇಕು. ಕೆರೆಯನ್ನು ಪ್ರವಾಸಿತಾಣವಾಗಿ ರೂಪಿಸಬೇಕು ಎಂಬುದು ಈ ಭಾಗದ ರೈತರ ಒತ್ತಾಯವಾಗಿದೆ.

ಅಭಿವೃದ್ಧಿಗೆ ₹ 5 ಕೋಟಿ ಪ್ರಸ್ತಾವ

‘ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಹಂತದಲ್ಲಿ ಕೆರೆ ಅಭಿವೃದ್ಧಿಗೆ ಪ್ರಯತ್ನಗಳು ಸಾಗಿವೆ. ಸೂಳೆಕೆರೆ ಏರಿ ವಿಸ್ತರಣೆ, ಉದ್ಯಾನ ನಿರ್ಮಾಣಕ್ಕಾಗಿ ₹5 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಿಸಲು ಪ್ರಯತ್ನಗಳು ಸಾಗಿದೆ’ ಎಂದು ಸೂಳೆಕೆರೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎನ್.ಶಿವಲಿಂಗೇಗೌಡ ಹೇಳಿದರು.

‘ಸೂಳೆಕೆರೆಯು ಚಿಕ್ಕರಸಿನಕೆರೆ ಹೋಬಳಿ ರೈತರ ಜೀವನಾಡಿ. ಒತ್ತವರಿಯಿಂದಾಗಿ ನಶಿಸಿ ಹೋಗುತ್ತಿದೆ. ಸರ್ಕಾರ ಸೂಳೆಕೆರೆಯನ್ನು ಉಳಿಸುವ ನಿಟ್ಟಿನಲ್ಲಿ ಮೊದಲು ಒತ್ತುವರಿ ತೆರವುಗೊಳಿಸಬೇಕು. ಹೂಳು ತೆಗೆಸಿ ವಿಸ್ತರಣೆ ಮಾಡಬೇಕು. ಕೆರೆಯನ್ನು ಆಧುನೀಕರಣಗೊಳಿಸಿ, ಪ್ರವಾಸಿ ತಾಣವನ್ನಾಗಿ ಮಾಡಬೇಕು’ ಎಂದು ಗ್ರಾ.ಪಂ.ಮಾಜಿ ಸದಸ್ಯ ಮನು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು