ಮಂಡ್ಯ: ಕೊಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘದ (ಖಾಸಗಿ ಮತ್ತು ಸರ್ಕಾರಿ ವೈದ್ಯರು) ಸದಸ್ಯರು ಒಪಿಡಿ ಬಂದ್ ಮಾಡುವ ಮೂಲಕ ಶನಿವಾರ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ ಬಂದ್ ಆಗಿದ್ದವು, ಜಿಲ್ಲಾಸ್ಪತ್ರೆಯಲ್ಲಿಯೂ ಬಂದ್ ಮಾಡಲಾಗಿತ್ತು. ಮಿಮ್ಸ್ ಆವರಣದಿಂದ ಮೆರವಣಿಗೆ ಹೊರಟ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ವೈದ್ಯ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಘೋಷಣೆ ಕೂಗಿ, ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಈ ಘಟನೆಯು ವೈದ್ಯಕೀಯ ಸಮೂಹವನ್ನು ಆಘಾತಕ್ಕೀಡು ಮಾಡಿದೆ. ಪ್ರಕರಣ ಕುರಿತಂತೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿಲ್ಲವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲಿನ ಹೈಕೋರ್ಟ್ ಕೂಡ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಛೀಮಾರಿ ಹಾಕಿರುವುದು ಸಾಕ್ಷಿ ಎಂದು ಕಿಡಿಕಾರಿದರು.
ಕೊಲ್ಕತ್ತಾ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಿದ್ದು, ಪೊಲೀಸರ ವೈಫಲ್ಯವನ್ನು ತೋರ್ಪಡಿಸಿದೆ. ಸ್ವಾತಂತ್ರ್ಯೋತ್ಸವ ದಿನದಂದು ದುಷ್ಕರ್ಮಿಗಳು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ ಸಾಕ್ಸ್ಯ ನಾಶ ಮಾಡಲು ಮುಂದಾಗಿದ್ದಾರೆ, ಅಲ್ಲದೆ ಪ್ರತಿಭಟನಾನಿರತ ಕಿರಿಯ ವೈದ್ಯಾಧಿಕಾರಿಗಳ ಮೇಲೆ ದಾಳಿ ಮಾಡಿ ದೌರ್ಜನ್ಯ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಮರ್ಜೆನ್ಸಿ(ತುರ್ತು ಚಿಕಿತ್ಸಾ ಘಟಕ) ಸೇವೆ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಉಳಿದಂತೆ ಹೊರ ರೋಗಿಗಳ ಚಿಕಿತ್ಸೆ ಇಲ್ಲದಾಗಿತ್ತು, ವಿಷಯ ತಿಳಿಯದೆ ಬಂದ ಗ್ರಾಮೀಣ ಭಾಗದ ರೋಗಿಗಳು ಸಂಜೆವರೆಗೂ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಕಾಯಿಲೆ ತಪಾಸಣೆಗೆ ಬಂದಿದ್ದ ಅಜ್ಜ–ಅಜ್ಜಿಯರು ದೂರದ ಊರಿಂದ ಬಸ್‌ನಲ್ಲಿ ಪರದಾಡಿಕೊಂಡು ಬಂದಿದ್ದೇವೆ. ಇಲ್ಲಿ ವೈದ್ಯರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಟಿ.ಎನ್. ಮರಿಗೌಡ, ಡಾ.ವಸುಮತಿ, ಡಾ.ಮಂಜುನಾಥ್, ಡಾ.ಯೋಗೇಂದ್ರ ಕುಮಾರ್, ಡಾ.ಗೋಪಾಲಕೃಷ್ಣ ಗುಪ್ತ, ಡಾ.ವಿನಯ್, ಡಾ.ಜಗದೀಶ್ ಕುಮಾರ್, ಡಾ.ಮೋಹನ್ ಕುಮಾರ್, ಡಾ.ಜಾಹ್ನವಿ, ಡಾ.ಶೀತಲ್, ಡಾ.ಅಶ್ವಿನಿ, ಡಾ.ಆಶಾಲತಾ, ಡಾ.ಬಿಂದ್ಯಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.