ಬುಧವಾರ, ಏಪ್ರಿಲ್ 14, 2021
31 °C

ವೈರಲ್‌ ವಿಡಿಯೊ | ಪರಕಾಯ ಪ್ರವೇಶ: ತ್ರಿಶೂಲದಿಂದ ತಿವಿಯಲು ಮುಂದಾದ ಕಲಾವಿದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕಾಳಿ ಅವತಾರದ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದ ಕಲಾವಿದೆಯೊಬ್ಬರು ಸಹಪಾತ್ರದಾರಿಗೆ ತ್ರಿಶೂಲದಿಂದ ನಿಜವಾಗಿ ತಿವಿಯಲು ಮುಂದಾಗುವ ದೃಶ್ಯ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರಲ್ಲಿ ಫೆ.4ರಂದು ನಡೆದ ‘ಕೌಂಡಲೀಕನ ವಧೆ’ ಪೌರಾಣಿಕ ನಾಟಕದಲ್ಲಿ ಈ ಘಟನೆ ನಡೆದಿದೆ. ಕಲಾವಿದೆ ಶ್ವೇತಾ ಅವರು ತಮ್ಮ ಪತಿ, ಕಲಾವಿದ ದಿವಂಗತ ಸಿ.ರವಿಕುಮಾರ್‌ ಅವರ ಸ್ಮರಣೆಯಲ್ಲಿ 12 ದಿನಗಳ ನಾಟಕೋತ್ಸವ ಆಚರಿಸಿದ್ದರು.

ರಾಮನಗರದ ಕಲಾವಿದರು ಕೌಂಡಲೀಕನ ವಧೆ ನಾಟಕ ಪ್ರದರ್ಶನ ನೀಡಿದ್ದರು. ಮಹಿಳಾ ಪಾತ್ರಗಳಿಗೆ ಹೊರಗಿನಿಂದ ಕಲಾವಿದರನ್ನು ಆಹ್ವಾನಿಸಿದ್ದರು. ಪ್ರೌಪದಿ ಪಾತ್ರದಲ್ಲಿ ಬೆಂಗಳೂರಿನ ದೊಡ್ಡಶ್ರುತಿ ಅಭಿನಯಿಸಿದ್ದರು. ಪ್ರೌಪದಿ ಕಾಳಿ ಅವತಾರ ತಾಳಿ ಕೌಂಡಲೀಕನನ್ನು ಸಂಹಾರ ಮಾಡುತ್ತಾಳೆ. ಈ ದೃಶ್ಯದಲ್ಲಿ ಅಭಿನಯಿಸುವಾಗ ಕಲಾವಿದೆ ದೊಡ್ಡಶ್ರುತಿ ಅವರು ಕ್ರೋದದಿಂದ ಕುದಿಯುತ್ತಿದ್ದರು.

ಸಂಹಾರ ದೃಶ್ಯದಲ್ಲಿ  ಕೌಂಡಲೀಕ ಪಾತ್ರಧಾರಿ ನೆಲಕ್ಕೆ ಬಿದ್ದರೂ ಬಿಡದ ಕಾಳಿ ಪಾತ್ರದಾರಿ ತ್ರಿಶೂಲದಿಂದ ನಿಜವಾಗಿಯೂ ತಿವಿಯಲು ಬರುತ್ತಾರೆ. ಇದನ್ನು ಗಮನಿಸಿದ ಸಹಕಲಾವಿದರು, ಜನರು ಅವರನ್ನು ಹಿಡಿದು ಸೈಡ್‌ವಿಂಗ್‌ನತ್ತ ಕರೆದೊಯ್ಯುತ್ತಾರೆ. ಅವರನ್ನು ಸಂತೈಸುತ್ತಿದ್ದರೂ ಕಲಾವಿದೆಯ ಕ್ರೋದ ತಣ್ಣಗಾಗಿರಲಿಲ್ಲ.

ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ದೊಡ್ಡಶ್ರುತಿ ಅವರ ಮೇಲೆ ಸಾಕ್ಷಾತ್‌ ಕಾಳಿಯೇ ಪ್ರವೇಶಿಸಿದ್ದಾಳೆ ಎಂದು ಕೆಲವರು ಸಂದೇಶ ಹಾಕಿದ್ದಾರೆ.

‘ಯಾರೇ ಈ ಪಾತ್ರ ಮಾಡಿದರೂ ಹೀಗಾಗುವುದು ಸಹಜ, ಇದರಲ್ಲಿ ಆಶ್ಚರ್ಯ ಪಡುವುದು ಏನೂ ಇಲ್ಲ. ದೊಡ್ಡಶ್ರುತಿ ಉತ್ತಮ ಕಲಾವಿದೆ, ಮಗನ ಆನಾರೋಗ್ಯದಿಂದಾಗಿ ಕಷ್ಟದಲ್ಲಿದ್ದಾರೆ. ಅವರ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬಾರದು’ ಎಂದು ನಾಟಕ ಸಂಘಟಕಿ ಶ್ವೇತಾ ಮನವಿ ಮಾಡಿದರು.

‘ಒಂದು ಕ್ಷಣ ಏನಾಗುತ್ತಿದೆ ಎಂಬುದೇ ತಿಳಿಯಲಿಲ್ಲ. ಜಾಲತಾಣಗಳಲ್ಲಿ ಕೆಲವರು ಕೆಟ್ಟದಾಗಿ ಸಂದೇಶ ಹಾಕುತ್ತಿದ್ದಾರೆ. ಮಗನ ಭವಿಷ್ಯದ ದೃಷ್ಟಿಯಿಂದ ಇನ್ನುಮುಂದೆ ಆ ಪಾತ್ರ ಮಾಡದಿರಲು ನಿರ್ಧರಿಸಿದ್ದೇನೆ’ ಎಂದು ಕಲಾವಿದೆ ದೊಡ್ಡಶ್ರುತಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.