ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ: ತ್ಯಾಜ್ಯದಿಂದ ತುಂಬಿದ ಕೊಪ್ಪ ಕಾಲುವೆ

ಘನ ತ್ಯಾಜ್ಯ, ಮದ್ಯದ ಬಾಟಲಿಗಳ ರಾಶಿ, ದುರ್ವಾಸನೆ ಬೀರುವ ಕಾಲುವೆ; ಸಾರ್ವಜನಿಕರ ಆಕ್ರೋಶ
Last Updated 5 ಮಾರ್ಚ್ 2021, 4:09 IST
ಅಕ್ಷರ ಗಾತ್ರ

ಕೊಪ್ಪ: ಕಾಲುವೆಯ ಉದ್ದಕ್ಕೂ ಘನ ತ್ಯಾಜ್ಯದ ರಾಶಿ. ದುರ್ವಾಸನೆಯಿಂದ ಕಂಗೆಟ್ಟ ಜನ. ಕಾಲುವೆ ಸ್ವಚ್ಛಗೊಳಿಸುವಲ್ಲಿ ಅಧಿಕಾರಿಗಳು ವಿಫಲ. ಸಂಕಷ್ಟದಲ್ಲಿ ರೈತರು... ಇದು ಕೊಪ್ಪ ಕಾಲುವೆಯ ಸ್ಥಿತಿ.

ಕೊಪ್ಪ ಕೆರೆಯಿಂದ ಟಿ.ಬಳ್ಳಕೆರೆ, ತಗ್ಗಹಳ್ಳಿ, ಅರಗಿನಮೇಳೆ ಸೇರಿದಂತೆ ಇತರ ಗ್ರಾಮಗಳ ರೈತರ ಜಮೀನಿಗೆ ಕೊಪ್ಪ ಕಾಲುವೆ ಸಂಪರ್ಕ ಕಲ್ಪಿಸುತ್ತಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳಿಗೆ ಈ ಕಾಲುವೆಯ ನೀರು ಆಧಾರವಾಗಿದೆ. ಶಿಂಷಾ ನದಿಗೆ ಕಾಲುವೆಯ ನೀರು ಸೇರುತ್ತದೆ.

ಈ ಕಾಲುವೆಯಲ್ಲಿ ಮದ್ಯದ ಬಾಟಲಿಗಳು, ಟೀ, ಕಾಫಿ ಲೋಟಗಳು, ಘನ ತ್ಯಾಜ್ಯ, ಮಾಂಸದಂಗಡಿಗಳ ತ್ಯಾಜ್ಯ ಮತ್ತು ಕೊಪ್ಪದ ಅಂಗಡಿ, ಮಳಿಗೆಗಳ ಕಸವನ್ನು ಕಾಲುವೆಗೆ ಸುರಿಯಲಾಗುತ್ತಿದೆ. ಕಾಲುವೆ ಕಸದ ತೊಟ್ಟಿಯಾಗಿ ಬದಲಾಗಿದೆ. ಕಾಲುವೆಯ ಉದ್ದಕ್ಕೂ ಕಸದ ರಾಶಿ ಹಾಕಿರುವುದರಿಂದ ನೀರು ಸರಾಗವಾಗಿ ಹರಿಯದೆ ರೈತರಿಗೆ ಮತ್ತು ನಾಗರಿಕರಿಗೆ ತೊಂದರೆಯಾಗಿದೆ.

ಕಾಲುವೆಯ ಇಕ್ಕೆಲಗಳಲ್ಲಿ ಕಳೆ ಸಸ್ಯಗಳು ಬೆಳೆದುಕೊಂಡಿವೆ. ಕಸದ ರಾಶಿ ಯಿಂದ ಶುದ್ಧ ನೀರು ಕೊಳಚೆ ನೀರಾಗಿ ಪರಿವರ್ತನೆಯಾಗುತ್ತಿದೆ. ಕೊಳಚೆ ನೀರನ್ನು ಬೆಳೆಗಳಿಗೆ ಹರಿಸಬೇಕಾದ ಅನಿವಾರ್ಯತೆ ರೈತರಿಗೆ ಎದುರಾಗಿದೆ. ರೋಗ, ರುಜಿನಗಳ ಭಯದಲ್ಲಿ ಕೊಪ್ಪ ಜನತೆ ವಾಸ ಮಾಡುತ್ತಿದ್ದಾರೆ. ಕೂಗಳತೆ ದೂರದಲ್ಲಿರುವ ಗ್ರಾಮ ಪಂಚಾಯಿತಿ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ತಕ್ಷಣ ಸಂಬಂಧಿಸಿದವರು ಸಮಸ್ಯೆ ಬಗೆಹರಿಸಲಿ ಎನ್ನುತ್ತಾರೆ ಕರುನಾಡ ಸೇನಾನಿಗಳ ವೇದಿಕೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಜಬಿವುಲ್ಲಾ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪರ್ವೀಜ್, ಮುಖಂಡರಾದ ಉಮೇಶ್, ಜಗದೀಶ್ ಇತರರು.

ಸಾರ್ವಜನಿಕರು ಕಾಲುವೆಯನ್ನು ಶುಚಿಯಾಗಿ ಇಟ್ಟುಕೊಳ್ಳಲು ಸಹಕರಿಸಬೇಕು. ವರ್ಷಕ್ಕೆ ಎರಡು ಬಾರಿ ಕಾಲುವೆ ಶುಚಿಗೊಳಿಸಲಾಗುತ್ತಿದೆ. ಕೊಪ್ಪ ಕೆರೆಯಿಂದ ಸಂಪರ್ಕ ಕಲ್ಪಿಸಿರುವ ನಾಲೆ ಬಸ್ ನಿಲ್ದಾಣ ಬಳಿ ಹಾದು ಹೋಗಿರುವುದರಿಂದ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಕಾಲುವೆಯ ಸ್ವಚ್ಛತೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ ದೇವಾನಂದ.

ಕೊಪ್ಪದ ವ್ಯಾಪಾರಿಗಳು ಕಾಲುವೆಗೆ ಕಸ ಸುರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನೀಡಲಾಗಿದೆ. ಗ್ರಾ.ಪಂ.ಸಾಮಾನ್ಯ ಸಭೆಯ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪ ಗ್ರಾ.ಪಂ ಕಾರ್ಯದರ್ಶಿ ಸುಮಾವತಿ ತಿಳಿಸಿದರು.

ಗ್ರಾ.ಪಂ.ಆಡಳಿತ ಮಂಡಳಿಯ ಒಪ್ಪಿಗೆ ಪಡೆದು ಸಮಸ್ಯೆ ಬಗೆಹರಿಸ ಲಾಗುವುದು. ಅಲ್ಲಲ್ಲಿ ಕಸದ ಬುಟ್ಟಿ ಗಳನ್ನು ಇಟ್ಟು ಸಮಸ್ಯೆಯನ್ನು ಬಗೆಹ ರಿಸಲು ಚಿಂತಿಸಲಾಗಿದೆ ಎಂದು ಪಿಡಿಒ ಎಂ.ಪಿ.ಮಹೇಶ್ ಬಾಬು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT