ಶುಕ್ರವಾರ, ನವೆಂಬರ್ 22, 2019
20 °C
ಮಳವಳ್ಳಿ ಕೇಂದ್ರ: ಪ್ರಸಕ್ತ ಸಾಲಿನಲ್ಲಿ 422 ಅರ್ಜಿ ಸಲ್ಲಿಕೆ, ಅವಧಿ ಮುಗಿಯುವ ಭೀತಿ

ಮಳವಳ್ಳಿಯಲ್ಲಿ ಆರಂಭವಾಗದ ಕೆಎಸ್‌ಆರ್‌ಟಿಸಿ ಚಾಲನಾ ತರಬೇತಿ: ಅಭ್ಯರ್ಥಿಗಳ ಆತಂಕ

Published:
Updated:
Prajavani

ಮಂಡ್ಯ: ಮಳವಳ್ಳಿಯ ಕೆಎಸ್‌ಆರ್‌ಟಿಸಿ ಚಾಲನಾ ಮತ್ತು ತಾಂತ್ರಿಕ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯಲು ಕೌಶಲ ಕರ್ನಾಟಕ ಯೋಜನೆಯಡಿ 422 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಪ್ರಸಕ್ತ ಸಾಲಿನ ತರಬೇತಿ ಆರಂಭವಾಗದ ಕಾರಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆತಂಕಗೊಂಡಿದ್ದಾರೆ.

ಸಾರಿಗೆ ಇಲಾಖೆ ನೇಮಕ ಮಾಡಿಕೊಂಡ ಚಾಲಕರಿಗೆ ಈ ಕೇಂದ್ರ ಚಾಲನಾ ತರಬೇತಿ ನೀಡುತ್ತದೆ. ಜೊತೆಗೆ ಚಾಲನಾ ಕ್ಷೇತ್ರದಲ್ಲಿ ಆಸಕ್ತಿ ಇರುವ ಯುವಜನರಿಗೆ ಕೌಶಲ ಕರ್ನಾಟಕ ಯೋಜನೆಯಡಿ ತರಬೇತಿ ನೀಡುವ ಜವಾಬ್ದಾರಿಯನ್ನೂ ಕೇಂದ್ರಕ್ಕೆ ವಹಿಸಲಾಗಿದೆ. 2019–20ನೇ ಸಾಲಿನಲ್ಲಿ ಎಚ್‌ಪಿವಿ (ಬಸ್‌/ಭಾರಿ ಪ್ರಯಾಣಿಕರ ವಾಹನ) ತರಬೇತಿ ಪ್ರಾರಂಭವಾಗದ ಕಾರಣ ಅರ್ಜಿ ಸಲ್ಲಿಸಿರುವ ಆಸಕ್ತರು ಗೊಂದಲಕ್ಕೀಡಾಗಿದ್ದಾರೆ.

ಅರ್ಜಿ ಸಲ್ಲಿಸಿರುವವರಲ್ಲಿ 100 ಅರ್ಜಿದಾರರು ಈಗಾಗಲೇ ಎಚ್‌ಪಿವಿ ಕಲಿಕಾ ಪರವಾನಗಿ (ಎಲ್‌ಎಲ್‌) ಪಡೆದಿದ್ದಾರೆ. ಸರ್ಕಾರಿ ಸಂಸ್ಥೆಯಾಗಿರುವ ಮಳವಳ್ಳಿ ಕೇಂದ್ರದಲ್ಲಿ ತರಬೇತಿಯನ್ನೂ ಪಡೆದರೆ ಅವರು ಮುಂದೆ ಚಾಲನೆಯಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ. ಸಾರಿಗೆ ಇಲಾಖೆಯಲ್ಲೇ ಉದ್ಯೋಗ ಪಡೆಯಲು ಈ ತರಬೇತಿ ಸಹಾಯಕವಾಗುತ್ತದೆ. ಹೀಗಾಗಿ ಅವರು ಅರ್ಜಿ ಸಲ್ಲಿಸಿ ತರಬೇತಿಗಾಗಿ ಕಾಯುತ್ತಿದ್ದಾರೆ. ಆದರೆ, ಕೇಂದ್ರದ ಸಿಬ್ಬಂದಿ ತರಬೇತಿ ಆರಂಭಿಸದಿರುವುದು ಅರ್ಜಿದಾರರಿಗೆ ತಲೆನೋವಾಗಿದೆ.

ಕಲಿಕಾ ಪರವಾನಗಿ ಪಡೆದ ಆರು ತಿಂಗಳಲ್ಲಿ ಡಿಎಲ್‌ ಪಡೆಯಬೇಕು. ಎಲ್‌ಎಲ್‌ಆರ್‌ ಪಡೆದು ಆಗಲೇ ಎರಡು ತಿಂಗಳಾಗಿವೆ. ಇನ್ನುಳಿದ 4 ತಿಂಗಳ ಕಾಲಾವಧಿಯಲ್ಲಿ ತರಬೇತಿ ಪಡೆದು ಚಾಲನಾ ಪರೀಕ್ಷೆ ಎದುರಿಸಬೇಕಾಗಿದೆ. ತರಬೇತಿ ಪ್ರಾರಂಭವಾಗುವುದು ತಡವಾದರೆ ಅವಧಿ ಮುಗಿಯುವ ಸಾಧ್ಯತೆ ಇದೆ. ಇದರಿಂದ ಕಲಿಕಾ ಪರವಾನಗಿ ಪಡೆದೂ ಉಪಯೋಗ ಇಲ್ಲದಂತಾಗುತ್ತದೆ ಎಂದು ತರಬೇತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದರು.

2018–19ನೇ ಸಾಲಿನ ನಿಗದಿತ ತರಬೇತಿ ಆ.19ಕ್ಕೆ ಮುಕ್ತಾಯವಾಗಿದೆ. ಆದರೆ, 2019–20ನೇ ಸಾಲಿನ ತರಬೇತಿ ಇನ್ನೂ ಆರಂಭಗೊಂಡಿಲ್ಲ. ಕೇಂದ್ರದಲ್ಲಿ 10 ಚಾಲನಾ ತರಬೇತುದಾರರು ಇದ್ದಾರೆ. ಚಾಲನಾ ತರಬೇತಿ ನೀಡುವ ಬಸ್‌ಗಳು ನಿಂತಲ್ಲೇ ನಿಂತಿದ್ದು, ಉಪಯೋಗಕ್ಕೆ ಬಾರದಂತಾಗಿವೆ.

‘ನಿತ್ಯ ಬಂದು ಏನೂ ಕೆಲಸವಿಲ್ಲದೆ ಬೆಳಿಗ್ಗೆಯಿಂದ ಸಂಜೆವರೆಗೂ ಕಾಲ ದೂಡುವುದೇ ಕಷ್ಟವಾಗುತ್ತಿದೆ. ಬೇರೆಡೆ ಕಳುಹಿಸಿ ಅಲ್ಲಿಯಾದರೂ ಕೆಲಸ ಮಾಡುತ್ತೇವೆ ಎಂದರೆ ಅದಕ್ಕೂ ಬಿಡುತ್ತಿಲ್ಲ’ ಎಂದು ಚಾಲನಾ ತರಬೇತುದಾರರೊಬ್ಬರು ದೂರಿದರು.

2017ರಿಂದ ಕೌಶಲ ಕರ್ನಾಟಕ ಯೋಜನೆಯಡಿ ಯಾವುದೇ ಆದಾಯ ಮಿತಿ, ಮೀಸಲಾತಿ ಇಲ್ಲದೆ ಎಲ್ಲಾ ವರ್ಗದ, ಧರ್ಮದವರಿಗಾಗಿ ವಸತಿ, ಊಟಸಹಿತ ಉಚಿತ ಚಾಲನಾ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆಯಲು ಅಗತ್ಯವಿರುವ ಕಲಿಕಾ ಪರವಾನಗಿ, ನಂತರ ಡಿಎಲ್‌ ಮಾಡಿಸಿಕೊಂಡ ಶುಲ್ಕವನ್ನೂ ಸರ್ಕಾರವೇ ಭರಿಸುತ್ತದೆ. 30 ದಿನಗಳ ವಸತಿ, ಊಟಸಹಿತ ಚಾಲನಾ ತರಬೇತಿಗಾಗಿ ಒಬ್ಬ
ಅಭ್ಯರ್ಥಿಗೆ ₹22 ಸಾವಿರ ವ್ಯಯಿಸಲಾಗುತ್ತದೆ.

ಈ ಸಾಲಿನಲ್ಲಿ 700 ಎಚ್‌ಪಿವಿ ತರಬೇತಿ ಗುರಿ ನೀಡುವ ನಿರೀಕ್ಷೆ ಇದೆ. ಅಷ್ಟು ಅರ್ಜಿಗಳು ಸಲ್ಲಿಕೆಯಾಗಬೇಕಾಗಿದೆ. ಜೊತೆಗೆ ಕೇಂದ್ರ ಕಚೇರಿಯಿಂದ ಆದೇಶಕ್ಕಾಗಿ ಕಾಯಲಾಗುತ್ತಿದೆ. ಆದೇಶ ಬಂದ ತಕ್ಷಣ ತರಬೇತಿ ಪ್ರಾರಂಭಿಸಲಾಗುವುದು ಎಂದು ಚಾಲನಾ ಮತ್ತು ತಾಂತ್ರಿಕ ತರಬೇತಿ ಕೇಂದ್ರದ ಪ್ರಾಚಾರ್ಯರಾದ ಎ. ವಿದ್ಯಾ ಹೇಳಿದರು.

ಪ್ರತಿಕ್ರಿಯಿಸಿ (+)