ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜು, ಮಳೆ: ಕೊಯ್ಲು, ಒಕ್ಕಣೆಗೆ ತೊಂದರೆ

ತಡವಾಗಿ ನಾಟಿ ಮಾಡಿದ ರೈತರಿಗೆ ಸಮಸ್ಯೆ, ಹುಲ್ಲು ರಕ್ಷಣೆ ಮಾಡಿಕೊಳ್ಳಲು ಹರಸಾಹಸ
Last Updated 4 ಜನವರಿ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ಕಳೆದೊಂದು ವಾರದಿಂದ ಮಂಜು ಮುಸುಕಿದ ವಾತಾವರಣ, ತುಂತುರು ಮಳೆ ಹನಿಯುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಕೆಲಸಗಳಿಗೆ ಅಡ್ಡಿಯಾಗಿದೆ. ಭತ್ತ, ರಾಗಿ ಕೊಯ್ಲು, ಒಕ್ಕಣೆ ಕಾರ್ಯ ಸ್ಥಗಿತಗೊಂಡಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ನಾಲೆಯ ಕೊನೆಯ ಭಾಗದ ರೈತರು ತಡವಾಗಿ ಭತ್ತ ನಾಟಿ ಮಾಡಿದ ಕಾರಣ ಇನ್ನೂ ಕೊಯ್ಲು ಪೂರ್ಣಗೊಳಿಸಿಲ್ಲ. ಮಳೆಯಾಶ್ರಿತ ಪ್ರದೇಶದ ರೈತರು ರಾಗಿ ಕೊಯ್ಲು ಮಾಡುತ್ತಿದ್ದಾರೆ. ಆದರೆ ಬೆಳ್ಳಂಬೆಳಿಗ್ಗೆ ಮಳೆ ಸುರಿಯುತ್ತಿರುವ ಕಾರಣ ಕಟಾವಿಗೆ ತೊಂದರೆಯಾಗುತ್ತಿದೆ. ಶೀತ ವಾತಾವರಣದಿಂದಾಗಿ ಕೊಯ್ಲು ಮಾಡಿಟ್ಟ ಭತ್ತ, ರಾಗಿಯ ಗುಣಮಟ್ಟ ಹಾಳಾಗುತ್ತಿದ್ದು ಇಳುವರಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಬೆಳಿಗ್ಗೆ 10 ಗಂಟೆಯಾದರೂ ರೈತರು ಹೊಲಕ್ಕೆ ತೆರಳಲು ಸಾಧ್ಯವಾಗದ ವಾತಾವರಣ ಇದೆ. ಮಂಜು ಮುಸುಕಿದ ಸ್ಥಿತಿಯಲ್ಲಿ ರೈತರು ಕೃಷಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿ ಕಾರ್ಮಿಕರೂ ಕೆಲಸಕ್ಕೆ ಬರುತ್ತಿಲ್ಲ. ಮಳೆ ಹಾಗೂ ಶೀತದಿಂದಾಗಿ ಭತ್ತದ ಕಾಳು ಕೊಳೆಯುವ ಅಪಾಯ ಸೃಷ್ಟಿಯಾಗಿದೆ. ಇದರಿಂದ ರೈತರು ಭತ್ತ ಕೊಯ್ಲು ಸ್ಥಗಿತಗೊಳಿಸಿದ್ದಾರೆ. ಕೊಯ್ಲು ಅವಧಿ ಮೀರುತ್ತಿದ್ದು ಭತ್ತದ ಕಾಳು ಉದುರಿ ಹೋಗುವ ಅಪಾಯ ಸೃಷ್ಟಿಯಾಗಿದೆ.

‘ಭತ್ತ ಕಟಾವು ಕಾರ್ಯ ಅರ್ಧಕ್ಕೆ ನಿಂತಿದೆ, ಕಂತೆ ಕಟ್ಟಿರುವ ಭತ್ತವನ್ನೂ ಒಕ್ಕಣೆ ಮಾಡಲು ಸಾಧ್ಯವಾಗಿಲ್ಲ. ಮಳೆ ಹಾಗೂ ಇಬ್ಬನಿಗೆ ಸಿಕ್ಕಿದ ಭತ್ತವನ್ನು ಮೂಟೆ ಕಟ್ಟಿದರೆ ಗುಣಮಟ್ಟ ಹಾಳಾಗುತ್ತದೆ, ಇಳುವರಿಯೂ ಕಡಿಮೆಯಾಗುತ್ತದೆ. ಹೀಗಾಗಿ ಶೀತ ವಾತಾವರಣ ಕಡಿಮೆಯಾಗಿ, ಬಿಸಿಲು ಬರುವುದನ್ನೇ ಕಾಯುತ್ತಿದ್ದೇವೆ. ಇನ್ನೊಂದು ವಾರ ಇದೇ ಪರಿಸ್ಥಿತಿ ಮುಂದುವರಿದರೆ ನಷ್ಟ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ತಾಲ್ಲೂಕಿನ ಹೊಳಲು ಗ್ರಾಮದ ರೈತ ಸುರೇಶ್‌ಗೌಡ ಹೇಳಿದರು.

ಭತ್ತಕ್ಕೆ ಗೊನೆ ರೋಗ: ಕಳೆದ ವರ್ಷದ ಜೂನ್‌, ಜುಲೈ ತಿಂಗಳಲ್ಲಿ ನಾಟಿ ಮಾಡಿದ ರೈತರಲ್ಲಿ ಬಹುಪಾಲು ಮಂದಿ ಭತ್ತ ಕಟಾವು ಪೂರ್ಣಗೊಳಿಸಿದ್ದಾರೆ. ಆದರೆ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ನಾಟಿ ಮಾಡಿದ ರೈತರು ಈಗಷ್ಟೇ ಕೊಯ್ಲು ಆರಂಭಿಸಿದ್ದಾರೆ. ಇಂಹತ ರೈತರು ಹೆಚ್ಚು ನಷ್ಟ ಅನುಭವಿಸುತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಶೀತ ವಾತಾವರಣದಿಂದಾಗಿ ಕೆಲವೆಡೆ ಭತ್ತಕ್ಕೆ ‘ಗೊನೆರೋಗ’ ಕಾಣಿಸಿಕೊಂಡಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಭತ್ತ ನೆಲದ ಪಾಲಾಗುತ್ತಿದೆ. ಆದಷ್ಟು ಬೇಗ ಭತ್ತ ಕಟಾವು ಮಾಡಲು ಸಾಧ್ಯವಾಗದಿದ್ದರೆ ನಷ್ಟದ ಪ್ರಮಾಣ ಹೆಚ್ಚಾಗುವ ಅಪಾಯ ಇದೆ. ಕಟಾವಿಗೆ ಕಾರ್ಮಿಕರನ್ನು ಸಿದ್ಧ ಮಾಡಿಕೊಂಡಿದ್ದರೂ ವಾತಾವರಣದ ವ್ಯತಿರಿಕ್ತ ಪರಿಣಾಮದಿಂದಾಗಿ ನಷ್ಟ ಅನುಭವಿಸಬೇಕಾಗಿದೆ.

‘ಇಂತಹ ಪರಿಸ್ಥಿತಿಯಲ್ಲಿ ಭತ್ತದ ಹುಲ್ಲು ಸಿಗುವುದಿಲ್ಲ. ಮಳೆಗೆ ಸಿಲುಕಿದರೆ ಹುಲ್ಲು ಸಂಪೂರ್ಣವಾಗಿ ನಾಶವಾಗಲಿದೆ. ಇದರಿಂದ ಜಾನುವಾರುಗಳನ್ನು ನೋಡಿಕೊಳ್ಳಲು ಕಷ್ಟವಾಗುತ್ತದೆ. ಇಂತಹ ವಾತಾವರಣದಲ್ಲಿ ಹುಲ್ಲು ರಕ್ಷಣೆ ಮಾಡಿಕೊಳ್ಳುವುದೇ ಸವಾಲಾಗಿದೆ’ ಎಂದು ರೈತ ಮಹಿಳೆ ಶಿಲ್ಪಾ ಹೇಳಿದರು.

ಕೆ.ಆರ್.ಪೇಟೆ, ನಾಗಮಂಗಲ ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದಲ್ಲಿ ರಾಗಿ ಬೆಳೆಗಾರರು ಕೂಡ ಇದೇ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಒಂದು ರೀತಿಯ ಸೈಕ್ಲೋನ್‌ (ಶೀತ ಗಾಳಿ) ಪರಿಸ್ಥಿತಿ ಇದ್ದು ಕೃಷಿ ಕೆಲಸಗಳು ಸ್ಥಗಿತಗೊಂಡಿವೆ.

‘ಜಿಲ್ಲೆಯಲ್ಲಿ ಹೆಚ್ಚಿನ ರೈತರು ಈಗಾಗಲೇ ಕಟಾವು ಪೂರ್ಣಗೊಳಿಸಿದ್ದಾರೆ. ತಡವಾಗಿ ನಾಟಿ ಮಾಡಿದ ರೈತರಿಗೆ ಮಾತ್ರ ತೊಂದರೆಯಾಗಿದೆ. ವಾತಾವರಣ ಬದಲಾದರೆ ಎಲ್ಲವೂ ಸರಿಯಾಗುತ್ತದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್‌.ಚಂದ್ರಶೇಖರ್‌ ಹೇಳಿದರು.

ತರಕಾರಿ ಕಟಾವಿಗೂ ತೊಂದರೆ

ಮೋಡ ಮುಸುಕಿದ ವಾತಾವರಣದಿಂದಾಗಿ ತರಕಾರಿ ಕಟಾವಿಗೂ ತೊಂದರೆಯಾಗಿದೆ. ಟೊಮೆಟೊ, ಬೀನ್ಸ್‌ ಬಣ್ಣ ಬದಲಾಗುತ್ತಿದ್ದು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇಂತಹ ತರಕಾರಿಗೆ ಬೆಲೆ ಇಲ್ಲವಾಗಿದೆ. ಚಳಿ ವಾತಾವರಣ ಹೆಚ್ಚಾದ ನಂತರ ಮಾರುಕಟ್ಟೆಗೆ ಗುಣಮಟ್ಟದ ಟೊಮೆಟೊ, ಬೀನ್ಸ್‌ ಬರುತ್ತಿಲ್ಲ.

‘ಇದೇ ಪರಿಸ್ಥಿತಿ ಮುಂದುವರಿದರೆ ತರಕಾರಿ ಬೆಳೆಗೆ ತರಗುರೋಗ ಕಾಣಿಸಿಕೊಳ್ಳುವ ಅಪಾಯವಿದೆ. ಬಾಳೆಗೆ ಚುಕ್ಕಿರೋಗ ಕಾಡುತ್ತದೆ. ಆದಷ್ಟು ಬೇಗ ವಾತಾವರಣ ಬದಲಾಗಬೇಕಿದೆ’ ಎಂದು ರೈತ ಶಂಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT