ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ | ಜೋಲಾಡುತ್ತಿವೆ ವಿದ್ಯುತ್‌ ತಂತಿಗಳು: ರೈತರ ಆತಂಕ

Published 8 ಜುಲೈ 2024, 15:17 IST
Last Updated 8 ಜುಲೈ 2024, 15:17 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಚಿಕ್ಕಪಾಳ್ಯ ಗ್ರಾಮದ ಬಳಿ, ಕೃಷಿ ಜಮೀನಿನ ಮೇಲೆ ವಿದ್ಯುತ್‌ ತಂತಿಗಳು ಜೋಲಾಡುತ್ತಿದ್ದು, ರೈತರು ಆತಂಕ ಎದುರಿಸುತ್ತಿದ್ದಾರೆ.

ಚಿಕ್ಕಪಾಳ್ಯ ಬಳಿ ಡಿ.ಎಂ. ರವಿ, ವನಜಾಕ್ಷಿ ಕೃಷ್ಣಮೂರ್ತಿ ಇತರ ರೈತರ ಜಮೀನಿನ ಮೇಲೆ ಹಾದು ಹೋಗಿರುವ ವಿದ್ಯುತ್‌ ತಂತಿಗಳು ಜೋಲಾಡುತ್ತಿವೆ. ಭೂಮಿಯಿಂದ ಕೇವಲ 10–12 ಅಡಿಗಳಷ್ಟು ಎತ್ತರದಲ್ಲಿ ಅವು ತೂಗಾಡುತ್ತಿವೆ. ಕಬ್ಬು ಬೆಳೆ ತಾಕುವಷ್ಟು ಹತ್ತಿರದಲ್ಲೇ ಈ ತಂತಿಗಳಿವೆ. ಈ ತಂತಿಗಳ ಕೆಳಗೆ ಇರುವ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಲು ರೈತರು ಭಯಪಡುತ್ತಿದ್ದಾರೆ.

‘ವಿದ್ಯುತ್‌ ತಂತಿಗಳು ಭೂಮಿಗೆ ತೀರ ಹತ್ತಿರದಲ್ಲೇ ಜೋಲಾಡುತ್ತಿರುವುದರಿಂದ ಜಮೀನಿಗೆ ಹೋಗಲು ಹೆದರಿಕೆಯಾಗುತ್ತದೆ. ಹಸಿ ಕಡ್ಡಿಗಳು ತಾಕಿದರೆ ವಿದ್ಯುತ್‌ ಪ್ರವಹಿಸುವ ಸಂಭವವೂ ಇದೆ. ಈ ಸಮಸ್ಯೆ ಕುರಿತು ಸೆಸ್ಕ್‌ ಎಂಜಿನಿಯರ್‌ಗಳು ಮತ್ತು ಸಿಬ್ಬಂದಿಗೆ ಹಲವು ಬಾರಿ ಹೇಳಿದ್ದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಭಾಗದ ಜೂನಿಯರ್‌ ಎಂಜಿನಿಯರ್‌ ಸಂಪರ್ಕಕ್ಕೆ ಸಿಗುತ್ತಿಲ್ಲ’ ಎಂದು ರೈತರಾದ ಡಿ.ಎಂ. ರವಿ, ಪುರುಷೋತ್ತಮ ಇತರ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಮ್ಮ ಜಮೀನಿನ ಮೇಲೆ ವಿದ್ಯುತ್‌ ತಂತಿಗಳು ಹಾದು ಹೋಗಿದ್ದು, ಭತ್ತ ಕಟಾವು ಸಮಯದಲ್ಲಿ ಯಂತ್ರಗಳು ಬರುತ್ತಿಲ್ಲ. ಹೆಚ್ಚುವರಿ ದುಡ್ಡು ಕೊಡುತ್ತೇವೆ ಎಂದರೂ ಯಂತ್ರಗಳ ಮಾಲೀಕರು ಒಪ್ಪುತ್ತಿಲ್ಲ. ಕೂಲಿಕಾರರೂ ಸಿಗುತ್ತಿಲ್ಲ. ದೂರದ ಊರುಗಳಿಂದ ದುಪ್ಪಟ್ಟು ಕೂಲಿ ಕೊಟ್ಟು ಕೂಲಿ ಕಾರ್ಮಿಕರನ್ನು ಕರೆತಂದು ಭತ್ತದ ಬೆಳೆ ಕಟಾವು ಮಾಡಿಸುವ ಪರಿಸ್ಥಿತಿ ಬಂದಿದೆ’ ಎಂದು ರೈತ ಮಹಿಳೆ ವನಜಾಕ್ಷಿ ಕೃಷ್ಣಮೂರ್ತಿ ಸಮಸ್ಯೆ ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT