ಮಂಗಳವಾರ, ಅಕ್ಟೋಬರ್ 27, 2020
22 °C

ಸರ್ಕಾರಿ ಜಾಗದಲ್ಲಿ ಕಾಂಪೌಂಡ್: ತೆರವುಗೊಳಿಸಿದ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಿಕ್ಕೇರಿ: ಹೋಬಳಿಯ ಲಕ್ಷ್ಮೀಪುರ ಗಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಸವನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಿಕೊಳ್ಳಲು ಮುಂದಾಗಿದ್ದವರನ್ನು ತರಾಟೆ ತೆಗೆದುಕೊಂಡ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ಪೊಲೀಸರ ಸಹಾಯದಿಂದ ಅದನ್ನು ತೆರವುಗೊಳಿಸಿದರು.

ಸರ್ಕಾರಿ ಗೋಮಾಳ ಸರ್ವೆ ನಂ. 92/1ರಲ್ಲಿ ತಮ್ಮ ಸ್ವಂತ ಜಾಗ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಸಹೋದರ ಬಸವರಾಜು ಕಾಂಪೌಂಡ್ ನಿರ್ಮಿಸಲು ಮುಂದಾಗಿದ್ದರು. ಅರ್ಧಕ್ಕೂ ಹೆಚ್ಚಿನ ಭಾಗದಲ್ಲಿ ಸಿಮೆಂಟು ಇಟ್ಟಿಗೆಗಳಿಂದ ಕಾಂಪೌಂಡ್ ನಿರ್ಮಿಸಿಕೊಂಡಿದ್ದರು. ಭರದಿಂದ ಕಾಮಗಾರಿ ಮುಗಿಸಲು ಮುಂದಾಗಿದ್ದರು. ಇದೇ ಜಾಗವನ್ನು 2011ರಲ್ಲಿ ಗ್ರಾ.ಪಂನಿಂದ ಖಾತೆ ಮಾಡಿಸಿಕೊಂಡಿದ್ದೇವೆ ಎಂದು ಗ್ರಾಮದ ಲಕ್ಷ್ಮಮ್ಮ ತಗಾದೆ ತೆಗೆದಿದ್ದರು.

ಕಾಂಪೌಂಡ್ ನಿರ್ಮಿಸದಂತೆ ಇಬ್ಬರಿಗೂ ಗ್ರಾ.ಪಂ ಅಧಿಕಾರಿಗಳು ತಿಳಿ ಹೇಳಿದ್ದರು. ಪ್ರಯೋಜನವಾಗದೆ ಬಸವರಾಜು ಕಾಂಪೌಂಡ್ ನಿರ್ಮಿಸಲು ಮುಂದಾಗಿರುವುದನ್ನು ತಾಪಂ. ಕಾರ್ಯನಿರ್ವಹಕಾಧಿಕಾರಿ ಚಂದ್ರಮೌಳಿಗೆ ತಿಳಿಸಲಾಗಿತ್ತು.
ಅಧಿಕಾರಿಗಳು ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ಸೂಕ್ತ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿದರು. ಸ್ಥಳದಲ್ಲಿದ್ದ ಬಸವರಾಜು ಕುಟುಂಬದವರು ಅಧಿಕಾರಿಗಳ ಮೇಲೆ ಗಲಾಟೆ ಮಾಡಲು ಆರಂಭಿಸಿದರು. ಏರುಧ್ವನಿಯಲ್ಲಿ ಒತ್ತುವರಿದಾರರ ಸಹಪಾಠಿಗಳು ಅಧಿಕಾರಿಗಳ ಮೇಲೆ ಎಗರಿದರು. ಪೊಲೀಸರು ಗಲಾಟೆಯನ್ನು ತಹಬಂದಿಗೆ ತಂದು, ನಿರ್ಮಿಸಲಾಗುತ್ತಿದ್ದ ಕಾಂಪೌಂಡನ್ನು ಜೆಸಿಬಿ ಯಂತ್ರದಿಂದ ತೆರವುಗೊಳಿಸಿದರು.

ನರೇಗಾ ಸಹಾಯಕ ನಿರ್ದೇಶಕಿ ಮೇನಕಾದೇವಿ, ಗ್ರಾಪಂ. ಆಡಳಿತಾಧಿಕಾರಿ ಗುರುಪ್ರಸಾದ್, ಪಿಡಿ‌ಒ ರಾಧಮ್ಮ, ಪಿ‌ಎಸ್‌ಐ ನವೀನ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.