ಮಂಗಳವಾರ, ಜನವರಿ 28, 2020
21 °C
ನೀರು ಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳದ ಅಧಿಕಾರಿಗಳು

ಬೇಸಿಗೆ ಬೆಳೆ: ಆತಂಕದಲ್ಲಿ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬೇಸಿಗೆ ಬೆಳೆ ಬೆಳೆಯಲು ನಾಲೆಗಳಿಗೆ ನೀರು ಹರಿಸುವ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನೂ ಏನನ್ನೂ ಹೇಳದೇ ಇರುವುದು ರೈತರಲ್ಲಿ ಆತಂಕ ಉಂಟು ಮಾಡಿದರು.

ಜಲಾಶಯದಲ್ಲಿ ಸದ್ಯ 121.2 ಅಡಿಗಳಷ್ಟು ನೀರಿನ ಸಂಗ್ರಹವಿದೆ. ಆದರೆ, ಕಾವೇರಿ ನ್ಯಾಯಾಧೀಕರಣದ ಆದೇಶ ಬೇಸಿಗೆ ಬೆಳೆಗೆ ನೀರು ಹರಿಸಲು ಅಡ್ಡಿಯಾಗಿದ್ದು, ನೀರು ಕೊಡುತ್ತಾರೋ ಇಲ್ಲವೋ ಎಂಬ ಬಗ್ಗೆ ಗೊಂದಲ ಉಂಟಾಗಿದೆ. ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹ ಇರುವುದರಿಂದ ನೀರು ಕೊಡಬಹುದು ಎಂಬ ಭರವಸೆಯ ಮೇಲೆ ರೈತರು ತಮ್ಮ ಜಮೀನು ಹಸನು ಮಾಡುವ ಕಾರ್ಯ ಶುರು ಮಾಡಿದ್ದಾರೆ. ಕಟ್ಟು ಪದ್ಧತಿಯಲ್ಲಿ ನೀರು ಕೊಟ್ಟರೂ ಭತ್ತದ ಬೆಳೆ ಬೆಳೆಯಬಹುದು ಎಂಬ ದೂರದ ಆಸೆ ರೈತರದ್ದು. ಕಟ್ಟೆಯಲ್ಲಿ ನೀರಿದೆ ಎಂಬ ವಿಶ್ವಾಸದಿಂದ ಬೆಳಗೊಳ ಮತ್ತು ಕಸಬಾ ಹೋಬಳಿ ವ್ಯಾಪ್ತಿಯ ರೈತರು ಒಟ್ಲು ಪಾತಿಯನ್ನೂ ಸಿದ್ಧಪಡಿಸಿ ಬಿತ್ತನೆ ಬೀಜ ಹಾಕಿದ್ದಾರೆ.

ನಾಲೆಗಳಿಗೆ ನೀರು ಬಿಡುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ಬಳಿಕವಷ್ಟೇ ಖಚಿತ ಮಾಹಿತಿ ತಿಳಿಯಲಿದೆ. ಸಂಕ್ರಾಂತಿ ಹಬ್ಬಕ್ಕೆ ನಾಲೆಗಳಿಗೆ ನೀರು ಹರಿಸಿ ಎಂದು ರೈತ ಮುಖಂಡರು ಕೋರಿದ್ದಾರೆ. ಈ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಬೇಸಿಗೆಯಲ್ಲಿ ಜಲಾಶಯದಲ್ಲಿ 114 ಅಡಿಗಳಷ್ಟು ನೀರಿತ್ತು. ನಿಂತಿರುವ ಬೆಳೆ ಉಳಿಸಲು ಹಾಗೂ ಜನ, ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕೆ ನೀರು ಹರಿಸಲಾಗಿತ್ತು. ಸೋರಿಕೆ ನೀರಿನಿಂದಲೇ ಸಾಕಷ್ಟು ರೈತರು ಭತ್ತ, ರಾಗಿ ಬೆಳೆದುಕೊಂಡಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ 8 ಅಡಿ ಹೆಚ್ಚು ನೀರಿನ ಲಭ್ಯತೆ ಇದೆ. ನಾಲೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸಬೇಕು. ಆದಷ್ಟು ಶೀಘ್ರ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ದಿನಾಂಕ ಪ್ರಕಟಿಸಬೇಕು ಎಂದು ರೈತ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಬಿ.ಎಸ್‌. ರಮೇಶ್‌, ಜೆಡಿಎಸ್‌ ರೈತ ದಳದ ಅಧ್ಯಕ್ಷ ಡಿ.ಎಂ.ರವಿ ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು