ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳವಳ್ಳಿ | ಕಚೇರಿಗೆ ಬೀಗ ಜಡಿದು, ಪ್ರತಿಭಟನೆ

ಮಾತು ತಪ್ಪಿದ ಅಧಿಕಾರಿಗಳು: ರೈತರ ಆಕ್ರೋಶ
Published 8 ಆಗಸ್ಟ್ 2024, 14:23 IST
Last Updated 8 ಆಗಸ್ಟ್ 2024, 14:23 IST
ಅಕ್ಷರ ಗಾತ್ರ

ಮಳವಳ್ಳಿ: ನೀಡಿದ್ದ ಭರವಸೆಯಂತೆ ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಸದ ಅಧಿಕಾರಿಗಳ ವರ್ತನೆ ಖಂಡಿಸಿ ರೈತರು ತಾಲ್ಲೂಕಿನ ಟಿ.ಕಾಗೇಪುರ ಬಳಿಯ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಬೀಗ ಜಡಿದು ಗುರುವಾರ ಪ್ರತಿಭಟನೆ ನಡೆಸಿದರು.

ಕಚೇರಿ ಎದುರು ಸೇರಿದ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಹಾಗೂ ರೈತರು ನೀರು ಹರಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಸಂಚಾಲಕ ಎನ್.ಎಲ್.ಭರತ್ ರಾಜ್ ಮಾತನಾಡಿ, ‘ಅಧಿಕಾರಿಗಳಿಗೆ ಕಾಮಗಾರಿಗಳ ಮೇಲೆ ಇರುವ ಪ್ರೀತಿ ರೈತರ ಮೇಲಿಲ್ಲ, ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದರೂ ತಾಲ್ಲೂಕಿನ ನಾಲೆಗಳಿಗೆ ಇದುವರೆಗೂ ನೀರು ಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಜೂನ್ ಮತ್ತು ಜುಲೈನಲ್ಲಿ ಭತ್ತದ ಒಟ್ಟಲು ಹಾಕುವಂತೆ ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಭತ್ತದ ಬಿತ್ತನೆ ಮಾಡಲು ನಾಲೆಗೆ ನೀರು ಹರಿಸುತ್ತಿಲ್. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇಲ್ಲ’ ಎಂದು ಕಿಡಿ ಕಾರಿದರು.

‘ಸೋಮವಾರ ರೈತರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ತಕ್ಷಣದಿಂದಲೇ ನೀರು ಹರಿಸುವ ಭರವಸೆ ನೀಡಿದ ಅಧಿಕಾರಿಗಳು ಹೋರಾಟಗಾರರನ್ನು ದಿಕ್ಕು ತಪ್ಪಿಸಿ ವಂಚಿಸಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಾಬುಕೃಷ್ಣದೇವ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಭರತೇಶ್ ಕುಮಾರ್, ತಾ.ಪಂ ಇಒ ಶ್ರೀನಿವಾಸ್ ಅವರು ಸಮಸ್ಯೆ ಆಲಿಸಿ, ಭಾನುವಾರದಿಂದ ನೀರು ಹರಿಸುವ ಭರವಸೆ ನೀಡಿದರು.

ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಗ್ರಾ.ಪಂ ಸದಸ್ಯ ಸಿದ್ದರಾಜು, ಮುಖಂಡರಾದ ಆರ್.ಸತೀಶ್, ವಿಜೇಂದ್ರ, ಪ್ರಸನ್ನ, ಶಿವಕುಮಾರ್, ಮಲ್ಲೇಶ್, ನಾಗಮಣಿ, ಮರಿಲಿಂಗೇಗೌಡ, ಅನಿಲ್, ಜಗದೀಶ್ ಭಾಗವಹಿಸಿದ್ದರು.

ಪಿಎಸ್ಐ ಶ್ರವಣ ದಾಸರಡ್ಡಿ ಹಾಗೂ ಸಿಬ್ಬಂದಿ ಭದ್ರತೆ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT