ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕದ್ದುಮುಚ್ಚಿ ತಮಿಳುನಾಡಿಗೆ ನೀರು; ಆಕ್ರೋಶ

Published 13 ಮೇ 2024, 14:00 IST
Last Updated 13 ಮೇ 2024, 14:00 IST
ಅಕ್ಷರ ಗಾತ್ರ

ಮಂಡ್ಯ: ಬಿರು ಬೇಸಿಗೆಯಲ್ಲೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದು ಮುಚ್ಚಿ ಕಾವೇರಿ ನೀರು ಹರಿಸಿರುವುದು ಖಂಡನೀಯ. ರೈತರು ಬೇಸಿಗೆಯಲ್ಲಿ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದು ನಷ್ಟಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸರ್‌ಎಂ.ವಿ.ಪ್ರತಿಮೆ ಎದುರು 15ನೇ ವಾರದ ಸೋಮವಾರದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ನಾವು ನಿರಂತರ ಧರಣಿ, ಉಪವಾಸ ಸತ್ಯಾಗ್ರಹ, ರಸ್ತೆ ತಡೆ ಮುಂತಾದ ಹೋರಾಟ ನಡೆಸಿಕೊಂಡು ರಾಜ್ಯ ಸರ್ಕಾರದ ಗಮನ ಸೆಳೆದಿದ್ದೇವೆ. ಆದರೂ ರೈತರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಕೆಆರ್‌ಎಸ್ ಜಲಾಶಯದಲ್ಲಿ ತಮಿಳುನಾಡಿಗೆ ಹರಿಸುವುದಕ್ಕಾಗಿಯೇ ನೀರು ಸಂಗ್ರಹ ಮಾಡಲಾಗಿದೆ ಎನ್ನುವ ಮನಸ್ಥಿತಿ ಸರ್ಕಾರಕ್ಕಿದೆ. ಕಳೆದ ಸಾಲಿನ ಬೆಳೆ ನಷ್ಟ, ಈಗ ಆಗಿರುವ ಬೆಳೆ ನಷ್ಟ ಮತ್ತು ಮುಂದೆ ಬೆಳೆ ಒಡ್ಡಲಾಗದಿರುವ ನಷ್ಟಕ್ಕೂ ಸರ್ಕಾರ ಸೂಕ್ತ ಪರಿಹಾರ ಭರಿಸಿಕೊಡಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿ ಹೊತ್ತು ಮಾತನಾಡಬೇಕಿದೆ. ಇದು ಬದುಕಿನ ಪ್ರಶ್ನೆ ಎಂಬುದನ್ನು ಸಚಿವರು ಮರೆಯಬಾರದು ಎಂದರು.

ಪ್ರಸ್ತುತ ಸುರಿದಿರುವ ಮಳೆಯಿಂದ ರೈತರ ಬೆಳೆಗಳಿಗೆ ಯಾವುದೇ ಪ್ರಯೋಜನವಾಗಿಲ್ಲ. ಆದರೆ, ಕೆಲವರು ಮಂಡ್ಯದಲ್ಲಿ ಮಳೆಯಾಗುತ್ತಿದೆ, ಇನ್ನೇನು ಸಮಸ್ಯೆ ಇಲ್ಲ ಎಂದು ಭಾವಿಸಿದ್ದಾರೆ. ಈಗಾಗಲೇ ಅಪಾರ ಬೆಳೆ ನಷ್ಟವಾಗಿದ್ದು ವಾಸ್ತವವನ್ನು ಪರಿಗಣಿಸಿ ಮಾತನಾಡಬೇಕು. ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳೂ ಭಾಗವಿಸಿದ್ದರು. ಮುಖಂಡರಾದ ಸುನಂದಾ ಜಯರಾಂ, ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಕೆ.ಸುಧೀರ್, ಕೃಷ್ಣಪ್ರಕಾಶ್, ಮುದ್ದೇಗೌಡ, ಕೆ.ಟಿ.ಶಂಕರೇಗೌಡ, ಎಸ್.ನಾರಾಯಣ್, ಬೋರಲಿಂಗೇಗೌಡ, ನಾರಾಯಣಸ್ವಾಮಿ, ಮಂಜುನಾಥ್, ಎ.ಎಲ್.ಬಸವೇಗೌಡ, ಇಂಡುವಾಳು ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT