ಶ್ರೀರಂಗಪಟ್ಟಣ: ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ಬಳಿ ಕಾವೇರಿ ನದಿಯಲ್ಲಿ ಕಿರು ಜಲ ವಿದ್ಯುತ್ ಘಟಕ ಸ್ಥಾಪಿಸಿರುವ ಸೋಹಂ ಕಂಪನಿ ರೈತರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ರೈತ ಸಂಘದ ಮುಖಂಡರು ಹಾಗೂ ಸಂತ್ರಸ್ತ ರೈತರು ಸೋಮವಾರ ಕಂಪನಿಯ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆಯಿಂದ ಕೃಷಿ ಜಮೀನಿಗೆ ಉಂಟಾಗುತ್ತಿರುವ ಹಾನಿಯನ್ನು ರೈತ ಮುಖಂಡರು ಹಾಗೂ ಸಂತ್ರಸ್ತ ರೈತರು ಬಿಡಿಸಿಟ್ಟರು. ರೈತರಿಗೆ ಸಮಜಾಯಿಷಿ ನೀಡಲು ಬಂದ ಕಂಪನಿಯ ಪ್ರತಿನಿಧಿ ಶರತ್‌ಚಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು. ವಿದ್ಯುತ್ ಉತ್ಪಾದನಾ ಕಂಪನಿಯಿಂದ ದೊಡ್ಡಪಾಳ್ಯ, ಮರಳಾಗಾಲ ಮತ್ತು ಮೇಳಾಪುರ ಗ್ರಾಮದ ರೈತರಿಗೆ ತೊಂದರೆಯಾಗುತ್ತಿದೆ. ಕೃಷಿ ಜಮೀನಿಗೆ ನೀರು ಹರಿದು ಬೆಳೆ ಬೆಳೆಯದ ಸ್ಥಿತಿ ನಿರ್ಮಾಣವಾಗಿದೆ. ಇಂಥ ಜಮೀನು ಬೇಡ. ಅದನ್ನು ಕಂಪನಿಯೇ ವಹಿಸಿಕೊಂಡು ಸೂಕ್ತ ಪರಿಹಾರ ನೀಡಲಿ. ಇಲ್ಲದಿದ್ದರೆ ವಿಷ ಕೊಟ್ಟು ಬಿಡಲಿ ಎಂದು ರೈತರಾದ ನಾಗೇಶ್, ಚಂದ್ರು ಅಳಲು ತೋಡಿಕೊಂಡರು. ಪೊಲೀಸರು ಕಂಪನಿಯ ಪರ ಮಾತನಾಡುತ್ತಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದರು.
ಸೋಹಂ ಹೆಸರಿನ ವಿದ್ಯುತ್ ಉತ್ಪಾದನಾ ಕಂಪನಿಯು ತನ್ನ ಘಟಕ ಸ್ಥಾಪಿಸಲು ಪರವಾನಗಿ ಪಡೆದಿರುವ ಸ್ಥಳಕ್ಕೆ ಬದಲಾಗಿ ಬೇರೆ ಸ್ಥಳದಲ್ಲಿ ಘಟಕ ಸ್ಥಾಪಿಸಿ ಅಧಿಕಾರಿಗಳನ್ನೇ ವಂಚಿಸಿದೆ. ರೈತರನ್ನೂ ದಿಕ್ಕು ತಪ್ಪಿಸಿದೆ. ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಉದ್ದೇಶಕ್ಕೆ ನದಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಿದ್ದು, ಕೃಷಿ ಜಮೀನು ಶೀತಮಯವಾಗಿದೆ. ಯಾವ ಬೆಳೆಯನ್ನೂ ಬೆಳೆಯಲು ಆಗದ ಸ್ಥಿತಿ ಬಂದೊದಗಿದೆ. ಸಣ್ಣ, ಅತಿ ಸಣ್ಣ ರೈತರು ಬೀದಿಗೆ ಬಿದ್ದಿದ್ದಾರೆ. ಸಚಿವರು ಮತ್ತು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸಂತ್ರಸ್ತ ರೈತರಿಗೆ ಕಂಪನಿ ಪ್ರತಿನಿಧಿಗಳು ಬೆದರಿಕೆ ಒಡ್ಡುತ್ತಿದ್ದಾರೆ. ರೈತರಿಗೆ ರಕ್ಷಣೆ ನೀಡಬೇಕು, ಪರಿಹಾರ ಕೊಡಬೇಕು. ಬೇಡಿಕೆ ಈಡೇರಿಕೆಗಾಗಿ ಮಂಗಳವಾರದಿಂದ ತಾಲ್ಲೂಕು ಕೇಂದ್ರದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶಗೌಡ ತಿಳಿಸಿದರು.
ಡಿವೈಎಸ್ಪಿ ಎಚ್.ಎಸ್.ಮುರಳಿ, ಸಿಪಿಐ ಬಿ.ಜಿ.ಕುಮಾರ್ ನೇತೃತ್ವದಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ನಾಗೇಂದ್ರಸ್ವಾಮಿ, ಮುಂಡುಗದೊರೆ ಮೋಹನ್, ತಮ್ಮಣ್ಣ, ಡಿ.ಎಸ್.ಚಂದ್ರಶೇಖರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.