ಮಂಡ್ಯ: ಮಳೆ ಕೊರತೆ, ನೀರಾವರಿ ಅಭಾವದಿಂದಾಗಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 36 ಸಾವಿರ ಹೆಕ್ಟೇರ್ ಪ್ರದೇಶ ಬೆಳೆ ಇಲ್ಲದೇ ಪಾಳು ಬಿದ್ದಿದೆ. ನೀರಾವರಿ, ಮಳೆಯಾಶ್ರಿತ ಪ್ರದೇಶ ಎರಡರಲ್ಲೂ ಬರ ಪರಿಸ್ಥಿತಿ ಇದ್ದು ಮುಂದಿನ ಪರಿಸ್ಥಿತಿ ಹೇಗೆ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.
ತಡವಾಗಿ ಆರಂಭವಾದ ಮುಂಗಾರು ಜುಲೈ ತಿಂಗಳಾದರೂ ಸಮರ್ಪಕ ರೀತಿಯಲ್ಲಿ ಸುರಿಯಲಿಲ್ಲ. ಪೂರ್ವ ಮುಂಗಾರು ಕೃಷಿಗೂ ಹೊಡೆತ ಬಿದ್ದ ಕಾರಣ ರೈತರು ಸಂಕಷ್ಟಕ್ಕೀಡಾದರು. ಆಗಸ್ಟ್ ತಿಂಗಳಲ್ಲೇ ಮಳೆ ತೀವ್ರ ಕೊರತೆಯಾದ ಕಾರಣ ಮುಂಗಾರು ಕೃಷಿ ಕೂಡ ಸಮರ್ಪಕವಾಗಿ ನಡೆಯಲಿಲ್ಲ. ನಂತರ ಸೆಪ್ಟೆಂಬರ್ ತಿಂಗಳಲ್ಲೂ ಮಳೆಯಾಗದ ಪರಿಣಾಮ ಬಿತ್ತನೆ ಕಾರ್ಯ ಹಿಂದೆ ಉಳಿಯಿತು. ಅಕ್ಟೋಬರ್ ಆರಂಭಕ್ಕೆ ಕೊಂಚ ಮಳೆ ಸುರಿದರೂ ಬಿತ್ತನೆ ಕಾಲ ಮುಗಿದು ಹೋಗಿದ್ದ ಕಾರಣ ಬಿತ್ತನೆಯಲ್ಲಿ ಹಿನ್ನಡೆಯಾಯಿತು.
ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು 1,95,513 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿತ್ತು. ಸೆಪ್ಟೆಂಬರ್ ಆರಂಭಕ್ಕೆ ಕೇವಲ ಶೇ 61ರಷ್ಟು ಮಾತ್ರ ಗುರಿ ಸಾಧನೆಯಾಗಿತ್ತು. ಆದರೆ ನಂತರ ಕೊಂಚ ಮಳೆಯಾದ ಕಾರಣ ಬಿತ್ತೆನೆಯಲ್ಲಿ ಪ್ರಗತಿ ಕಂಡು ಒಟ್ಟಾರೆ ಬಿತ್ತನೆ ಪ್ರಮಾಣ ಶೇ 81ಕ್ಕೆ ತಲುಪಿದೆ. ಆದರೂ ಜಿಲ್ಲೆಯಾದ್ಯಂತ 35,906 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯೇ ಆಗದೆ ಪಾಳು ಬಿದ್ದಿದೆ. ಒಟ್ಟಾರೆ 159607 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು ರೈತರು ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದಾರೆ. ಮಳೆಯಾಶ್ರಿತ ಪ್ರದೇಶದಲ್ಲಿ ಸಮರ್ಪಕವಾಗಿ ಹುರುಳಿ ಚೆಲ್ಲುವುದೂ ಸಾಧ್ಯವಾಗದ ಕಾರಣ ಪಾಳು ಬಿದ್ದಿರುವ ಪ್ರದೇಶದ ಪ್ರಮಾಣ ಹೆಚ್ಚಳವಾಗಿದೆ. ಹುರುಳಿ ಚೆಲ್ಲುವ ಕಾರ್ಯ ಕೂಡ ಮುಗಿದು ಹೋಗಿದ್ದು ರೈತರು ಕೈಚೆಲ್ಲಿ ಕುಳಿತಿದ್ದಾರೆ.
‘ಚಳಿ, ಕೊರೆ ಆರಂಭವಾಗುತ್ತಿದ್ದು ಮುಂದೆ ಹುರುಳಿ ಚೆಲ್ಲುವುದಕ್ಕೂ ಸಾಧ್ಯವಾಗುವುದಿಲ್ಲ. ಬರ ಪರಿಸ್ಥಿತಿಯಿಂದಾಗಿ ರೈತರು ಹೈರಾಣಾಗಿದ್ದಾರೆ. ಜಿಲ್ಲಾಡಳಿತ ಕೂಡಲೇ ಬೆಳೆ ನಷ್ಟ ಪರಿಹಾರ ನೀಡಬೇಕು’ ಎಂದು ರೈತರು ಒತ್ತಾಯ ಮಾಡುತ್ತಾರೆ.
ಮಳವಳ್ಳಿ ತಾಲ್ಲೂಕಿನ ಅತೀ ಹೆಚ್ಚು ಭೂ ಪ್ರದೇಶ ಪಾಳು ಬಿದ್ದಿದ್ದು ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಕಾವೇರಿ ನೀರಿಗೆ ಕೊನೇ ಭಾಗವಾಗಿರುವ ತಾಲ್ಲೂಕಿನ ಭೂಪ್ರದೇಶ ನೀರಾವರಿ ಸೌಲಭ್ಯವನ್ನೂ ಪಡೆಯಲು ಸಾಧ್ಯವಾಗಿಲ್ಲ. ಸುಮಾರು 6 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಭತ್ತ, 5 ಸಾವಿರ ಹೆಕ್ಟರ್ ಪ್ರದೇಶಕ್ಕೆ ರಾಗಿಯನ್ನು ಬಿತ್ತನೆ ಮಾಡಲಾಗಿದೆ.
ಜೊತೆಗೆ ಕೂಳೆ ಬಿತ್ತನೆ ಸೇರಿದಂತೆ ಸುಮಾರು 5,300 ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಒಟ್ಟಾರೆ ತಾಲ್ಲೂಕಿನಲ್ಲಿ 7 ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಹೀಗಾಗಿ ಮುಂದಿನ ಪರಿಣಾಮದ ಬಗ್ಗೆ ರೈತರು ಆತಂಕ ವ್ಯಕ್ತಪಡಿಸುತ್ತಾರೆ.
ಕೆ.ಆರ್.ಪೇಟೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಬಿತ್ತನೆ ಕಾರ್ಯ ನಡೆಯದ ಕಾರಣ 7,500 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ತಾಲ್ಲೂಕಿನ ಬಹುಭಾಗ ಮಳೆಯಾಶ್ರಿತ ಪ್ರದೇಶವಾಗಿದ್ದು ಹುರುಳಿ ಬಿತ್ತನೆಯಲ್ಲೂ ಹಿಂದೆ ಬಿದ್ದಿದೆ. ತಾಲ್ಲೂಕಿನ ಆರು ಹೋಬಳಿಗಳ ಪೈಕಿ ಅಕ್ಕಿಹೆಬ್ಬಾಳು, ಕಿಕ್ಕೇರಿ ಹೋಬಳಿಯಲ್ಲಿ ಹೇಮಾವತಿ ಅಚ್ಚುಕಟ್ಟು ನೀರಾವರಿ ಭೂಮಿ ಇದೆ ಇದೆ.ಇನ್ನುಳಿದಂತೆ ಇತರ ಹೋಬಳಿಯಲ್ಲಿ ಬಿತ್ತನೆ ಪ್ರಮಾಣ ತೀವ್ರ ಹಿಂದುಳಿದಿದೆ. ಸಂತೇಬಾಚಹಳ್ಳಿ ಹೋಬಳಿ ರೈತರು ತೀವ್ರ ಮಳೆ ಕೊರತೆ ಅನುಭವಿಸುತ್ತಿದ್ದು ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಈ ಬಾರಿ 3 ಸಾವಿರ ಹೆಕ್ಟೇರ್ ಪ್ರದೇಶ ಪಾಳು ಬಿದ್ದಿದೆ. ತಾಲ್ಲೂಕಿನಲ್ಲಿ 25,566 ಹೆಕ್ಟೇರ್ ಕೃಷಿ ಭೂಮಿ ಇದೆ. ಈ ಪೈಕಿ 19,349 ಹೆಕ್ಟೇರ್ ನೀರಾವರಿ ಮತ್ತು 6,217 ಹೆಕ್ಟೇರ್ ಮಳೆಯಾಶ್ರಿತ ಭೂಮಿ ಇದೆ. ಒಟ್ಟು 7600 ಹೆಕ್ಟೇರ್ ಭೂಮಿ ಖಾಲಿ ಇದೆಯಾದರೂ ಕೃಷಿಗೆ ಯೋಗ್ಯವಾದ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ, ಮುಂಗಾರು ಹಂಗಾಮಿನಲ್ಲಿ ಯಾವುದೇ ಬಿತ್ತನೆ ಕಾರ್ಯ ನಡೆದಿಲ್ಲ.
ಪಾಂಡವಪುರ ತಾಲ್ಲೂಕಿನಲ್ಲಿ 14 ಸಾವಿರ ಎಕರೆ ಪ್ರದೇಶದಲ್ಲಿ ಸಾಗುವಳಿ ಗುರಿ ಹೊಂದಲಾಗಿತ್ತು ಈ ಪೈಕಿ 12 ಸಾವಿರ ಎಕರೆ ಕೃಷಿ ಬೆಳೆ ಬೆಳೆಯಲಾಗುತ್ತಿದ್ದು 2 ಸಾವಿರದ್ಟು ಪ್ರದೇಶ ಪಾಳು ಬಿದ್ದಿದೆ. ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಮಳೆಯಾಗಿದ್ದರಿಂದ ಹುರುಳಿ ಬಿತ್ತಲಾಗಿದ್ದು ಪಾಳು ಬಿದ್ದಿರುವ ಭೂಮಿಯ ಪ್ರಕಾಣ ಕೊಂಚ ತಗ್ಗಿದೆ.
ಮದ್ದೂರು ತಾಲ್ಲೂಕಿನಲ್ಲಿ 25,900 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟಕೊಳ್ಳಲಾಗಿತ್ತು. ಆದರೆ ಶೇ 70ರಷ್ಟು ಮಾತ್ರ ಗುರಿ ಸಾಧಿಸಲಾಗಿತ್ತು. 4 ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಆತಗೂರು, ಕೊಪ್ಪ ಹೋಬಳಿಗಳಲ್ಲಿ ಬಿತ್ತನೆ ಕಾರ್ಯ ಕಡಿಮೆ ಯಾಗಿದ್ದು ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ.
ನಾಗಮಂಗಲ ತಾಲ್ಲೂಕಿನಲ್ಲಿ ಕೇವಲ 60ರಷ್ಟು ಬಿತ್ತನೆಯಾಗಿದ್ದು 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ. ಹಿಂಗಾರು ಹಂಗಾಮು ಬಿತ್ತನೆ ಆರಂಭಗೊಂಡಿತ್ತು ಇತ್ತೀಚೆಗೆ ಬಿತ್ತನೆಯಲ್ಲಿ ಕೊಂಚ ಸುಧಾರಣೆಯಾಗಿದೆ.
ನೀರಿನ ಕೊರತೆ; ಕೈಚೆಲ್ಲಿ ಕುಳಿತ ರೈತರು ಹುರುಳಿ ಚೆಲ್ಲುವುದಕ್ಕೂ ಬಾರದ ಮಳೆರಾಯ ಪರಿಹಾರ ನಿರೀಕ್ಷೆಯಲ್ಲಿ ಜಿಲ್ಲೆಯ ರೈತ ಸಮುದಾಯ
ಹಿಂಗಾರು ಬಿತ್ತನೆ ಆರಂಭಗೊಂಡಿದ್ದು ಬಿತ್ತನೆಯಲ್ಲಿ ಕೊಂಚ ಸುಧಾರಣೆಯಾಗಿದೆ. ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿರುವ ಕಾರಣ ಬರಪರಿಹಾರ ಕಾಮಗಾರಿ ಕೈಗೊಳ್ಳಲಾಗುವುದು –ವಿ.ಎಸ್.ಅಶೋಕ್ ಕೃಷಿ ಜಂಟಿ ನಿರ್ದೇಶಕ
ಜನಾಭಿಪ್ರಾಯ ನಷ್ಟ ಪರಿಹಾರ ಸಿಗಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಎಲ್ಲೆಡೆ ಬರದ ಛಾಯೆ ಕಾಡುತ್ತಿದೆ. ಈಗಾಗಲೇ ನಮ್ಮ ತಾಲ್ಲೂಕು ಬರ ಪೀಡಿತ ಪ್ರದೇಶವಾಗಿ ಘೋಷಣೆಯಾಗಿದ್ದು ಸರ್ಕಾರದ ಪರಿಹಾರ ಕ್ರಮಗಳು ಸಮರ್ಪಕವಾಗಿ ಜಾರಿಯಾಗುವ ನಿಟ್ಟಿನಲ್ಲಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿ. ಆದಷ್ಟು ಶೀಘ್ರ ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಣೆ ಮಾಡಲಿ –ಎಸ್.ನವೀನಾ ಮಳವಳ್ಳಿ ಈ ವರ್ಷ ಹೇಮಾವತಿ ಜಲಾಶಯದಿಂದಲೂ ಸಮರ್ಪಕವಾಗಿ ನೀರು ಹರಿಸಿಲ್ಲ. ತಕ್ಷಣವೇ ಹೇಮಾವತಿ ನಾಗಮಂಗಲ ತಾಲ್ಲೂಕಿನ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ವ್ಯವಸ್ಥೆ ಮಾಡಬೇಕು. ಜೊತೆಗೆ ಕೃಷಿ ನಂಬಿದ ಯುವ ರೈತರು ಮಳೆಯ ಕೊರತೆಯಿಂದ ಉದ್ಯೋಗ ಹರಸಿ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. – ಸಂತೋಷ್ ತಿಮ್ಮೇಗೌಡ ನಾಗಮಂಗಲ ಬಿತ್ತಿದ ಬೀಜವೇ ಮೇಲೆ ಏಳದ ಸ್ಥಿತಿ ಬರಗಾಲ ಬಂದಿದೆ. ಹಿಂಗಾರು ಮುಂಗಾರು ಮುನಿಸಿಕೊಂಡು ಕೈ ಕಾಲು ಆಡದ ಸ್ಥಿತಿ ರೈತರಿಗೆ ಆಗಿದೆ. ಪ್ರತಿ ವರ್ಷ ರಾಗಿ ಹುರುಳಿ ಬಿತ್ತುತ್ತಿದ್ದೆವು. ಈ ಬಾರಿ ಪ್ರಕೃತಿಯ ಭಾಗ್ಯವೂ ಇಲ್ಲ ಸರ್ಕಾರದ ಭಾಗ್ಯವೂ ಇಲ್ಲದೆ ರೈತರು ಬದುಕಲು ಕಷ್ಟವಾಗಿದೆ. ಸರ್ಕಾರ ಶೀಘ್ರ ರೈತರಿಗೆ ನೆರವಾಗಬೇಕು – ಬಸವರಾಜ್ ಕಿಕ್ಕೇರಿ
ವಿಮಾ ಕಂತು ಪಾವತಿಗೆ ಸೂಚನೆ ಜಿಲ್ಲೆಗೆ ಎಸ್‌ಬಿಐ ಜನರಲ್ ಇನ್ಶುರೆನ್ಸ್ ಕಂಪನಿಯನ್ನು ವಿಮಾ ಸಂಸ್ಥೆಯಾಗಿ ನಿಗದಿಪಡಿಸಲಾಗಿದೆ. ಇದರ ಅನುಸಾರ ರೈತರು ಬ್ಯಾಂಕ್ ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮಒನ್ ಕೇಂದ್ರಗಳಲ್ಲಿ ನಿಗದಿತ ದಿನಾಂಕದೊಳಗೆ ವಿಮಾ ಕಂತನ್ನು ಪಾವತಿ ಮಾಡಲು ಕೃಷಿ ಇಲಾಖೆ ಸೂಚನೆ ನೀಡಿದೆ. ಹಿಂಗಾರು ಹಂಗಾಮಿಗೆ ಮದ್ದೂರು ಮಂಡ್ಯ ನಾಗಮಂಗಲ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಅನುಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ ಹುರುಳಿ (ಮಳೆ ಆಶ್ರಿತ) ಬೆಳೆಗೆ ರೈತರು ಬೆಳೆ ವಿಮೆ ನೋಂದಾಯಿಸಿಕೊಳ್ಳಬಹುದು. ಬೇಸಿಗೆ ಹಂಗಾಮಿಗೆ ಮಂಡ್ಯ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ ಭತ್ತ (ನೀರಾವರಿ) ಬೆಳೆಗೆ ರೈತರು ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಬಹುದು. ಹೋಬಳಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ) ರಾಗಿ (ನೀರಾವರಿ) ರಾಗಿ (ಮಳೆ ಆಶ್ರಿತ) ಮತ್ತು ಹುರುಳಿ (ಮಳೆ ಆಶ್ರಿತ) ಬೆಳೆಗಳಿಗೆ ರೈತರು ಬೆಳೆ ವಿಮೆ ನೋಂದಾಯಿಸಿಕೊಳ್ಳಬೇಕು. ಪಾಂಡವಪುರ ತಾಲ್ಲೂಕಿನ ಚಿನುಕುರುಳಿ ಮೇಲುಕೋಟೆ ಮತ್ತು ಕಸಬಾ ಹೋಬಳಿಗಳಲ್ಲಿ ಟೊಮೆಟೊ ಬೆಳೆಗೆ ವಿಮೆ ನೋಂದಾಯಿಸಿಕೊಳ್ಳಬಹುದು.
- ಹುರುಳಿ ಬಿತ್ತನೆಯಲ್ಲಿ ಕುಂಠಿತ ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಮಳೆಯಾಶ್ರಿತ ಪ್ರದೇಶದಲ್ಲಿ ಹುರುಳಿ ಬಿತ್ತನೆಯೂ ಸಮರ್ಪಕವಾಗಿ ಆಗಿಲ್ಲ. ಜಿಲ್ಲೆಯಾದ್ಯಂತ 13689 ಹೆಕ್ಟೇರ್ ಪ್ರದೇಶದಲ್ಲಿ ಹುರುಳಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ ಕೇವಲ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹುರುಳಿ ಬಿತ್ತನೆಯಾಗಿದ್ದು ಶೇ 15ರಷ್ಟು ಮಾತ್ರ ಗುರಿ ಸಾನೆ ಮಾಡಲಾಗಿದೆ. ಮಳೆಯಾಶ್ರಿತ ಪ್ರದೇಶ ಹೆಚ್ಚಿರುವ ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲ್ಲೂಕುಗಳಲ್ಲೇ ಹುರುಳಿ ಬಿತ್ತನೆಯಲ್ಲಿ ತೀವ್ರ ಕುಂಠಿತವಾಗಿ ಆತಂಕಕಾರಿಯಾಗಿದೆ. ಕೆ.ಆರ್.ಪೇಟೆಯಲ್ಲಿ ಶೇ 1ರಷ್ಟು ಮಾತ್ರ ಬಿತ್ತನೆಯಾಗಿದೆ ನಾಗಮಂಗಲ ತಾಲ್ಲೂಕಿನಲ್ಲಿ ಶೇ 2ರಷ್ಟು ಬಿತ್ತನೆಯಾಗಿದೆ. ಹುರುಳಿಯೂ ಬಿತ್ತನೆಯಾಗದಿರುವ ಕಾರಣ ಅಪಾರ ಪ್ರಮಾಣದ ಭೂಮಿ ಪಾಳುಬಿದ್ದಿದೆ. ‘ಬಿತ್ತನೆಯಾಗದಿದ್ದರೂ ಭೂಮಿಯನ್ನು ಪಾಳು ಬಿಡುವುದಕ್ಕೆ ಇಷ್ಟವಿಲ್ಲ. ಹೀಗಾಗಿ ಅಪಾರ ಹಣ ಖರ್ಚು ಮಾಡಿ ಉಳುಮೆ ಮಾಡಿಸಿದ್ದೇವೆ. ಪಾಳುಬಿದ್ದ ಭೂಮಿಯ ನಿರ್ವಹಣೆ ರೈತರಿಗೆ ಹೊರೆಯಾಗಿದೆ’ ಎಂದು ಸಂತೇಬಾಚಹಳ್ಳಿಯ ರೈತರ ನಾಗೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.