ಸೋಮವಾರ, ಜನವರಿ 25, 2021
27 °C
ಸ್ವತಂತ್ರವಾಗಿ ಗೆದ್ದವರಿಗೂ ಪಕ್ಷದಿಂದ ಅಭಿನಂದನೆ, ಅದ್ಧೂರಿ ಸಮಾರಂಭ, ಭರ್ಜರಿ ಊಟ

ಗ್ರಾ.ಪಂ ಸದಸ್ಯರ ಸನ್ಮಾನಕ್ಕೆ ಪಕ್ಷಗಳ ಪೈಪೋಟಿ

ಎಂ.ಎನ್‌.ಯೋಗೇಶ್ Updated:

ಅಕ್ಷರ ಗಾತ್ರ : | |

ಮಂಡ್ಯ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸದಸ್ಯರನ್ನು ಸನ್ಮಾನಿಸಲು ರಾಜಕೀಯ ಪಕ್ಷಗಳ ಮುಖಂಡರು ಪೈಪೋಟಿ ನಡೆಸುತ್ತಿದ್ದಾರೆ. ಸ್ವತಂತ್ರವಾಗಿ ಗೆದ್ದವರನ್ನೂ ಸನ್ಮಾನಿಸಿ ತಮ್ಮ ಪಕ್ಷದ ಬೆಂಬಲದಿಂದಲೇ ಗೆಲುವು ಸಾಧಿಸಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ.

ಕಳೆದ 2–3 ದಿನಗಳಿಂದ ಎಲ್ಲಾ ಪಕ್ಷಗಳೂ ತಮ್ಮ ಬೆಂಬಲಿತ ನೂತನ ಗ್ರಾ.ಪಂ ಸದಸ್ಯರನ್ನು ಸನ್ಮಾನಿಸುತ್ತಿವೆ. ಜೆಡಿಎಸ್‌ ಮುಖಂಡರು ತಾಲ್ಲೂಕು ವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದಲ್ಲಿ ಸನ್ಮಾನ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಎಂ.ಶ್ರೀನಿವಾಸ್‌, ಪಾಂಡವಪುರದಲ್ಲಿ ಸಿ.ಎಸ್‌.ಪುಟ್ಟರಾಜು ಸದಸ್ಯರನ್ನು ಅಭಿನಂದಿಸಿ ಭರ್ಜರಿ ಊಟ ಹಾಕಿಸಿದ್ದಾರೆ. ಇದೇ ರೀತಿ ಎಲ್ಲಾ ಪಕ್ಷಗಳ ಮುಖಂಡರು ಅದ್ಧೂರಿ ಸಮಾರಂಭಗಳನ್ನು ಆಯೋಜಿಸಿ ಅಭಿನಂದಿಸುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷದ ಮುಖಂಡರು ಆಯಾ ತಾಲ್ಲೂಕು ಮಟ್ಟದಲ್ಲಿ ನೂತನ ಸದಸ್ಯರನ್ನು ಸನ್ಮಾನ ಮಾಡುತ್ತಿದ್ದಾರೆ. ಜೆಡಿಎಸ್‌, ಕಾಂಗ್ರೆಸ್‌ಗಿಂತಲೂ ಒಂದು ಹೆಜ್ಜೆ ಮುಂದಿಟ್ಟಿರುವ ಬಿಜೆಪಿ ಜ.12ರಂದು ವೈಭವದ ಸಮಾರಂಭವನ್ನೇ ಆಯೋಜನೆ ಮಾಡಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರೇ ಬಿಜೆಪಿ ಬೆಂಬಲಿತ ನೂತನ ಗ್ರಾ.ಪಂ ಸದಸ್ಯರನ್ನು ಅಭಿನಂದಿಸುತ್ತಿದ್ದಾರೆ.

ಮೈಸೂರು ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಸಚಿವರಾದ ಆರ್‌.ಅಶೋಕ್‌, ಕೆ.ಸಿ.ನಾರಾಯಣಗೌಡ, ಎಸ್‌.ಟಿ.ಸೋಮಶೇಖರ್‌ ಬಾಗವಹಿಸುತ್ತಿದ್ಧಾರೆ. ಬಿಜಿಎಸ್‌ ಸಮುದಾಯ ಭವನದಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ಸಮಾರಂಭ ನಡೆಯಲಿದೆ.

‘ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಸದಸ್ಯರೊಬ್ಬರು ಈಚೆಗೆ ಜೆಡಿಎಸ್‌ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಮಾಡಿಸಿಕೊಂಡಿದ್ದಾರೆ. ಶಾಸಕ ಎಂ.ಶ್ರೀನಿವಾಸ್‌ ಕರೆ ಮಾಡಿ ಆಹ್ವಾನ ನೀಡಿದರು ಎಂಬ ಕಾರಣಕ್ಕೆ ಅವರು ಸಮಾರಂಭಕ್ಕೆ ತೆರಳಿದ್ದರು’ ಎಂದು ಹಳ್ಳಿಯೊಂದರ ಮುಖಂಡರು ತಿಳಿಸಿದರು.

ಲೆಕ್ಕಕ್ಕೆ ಸಿಗದ ಅಂಕಿ– ಸಂಖ್ಯೆ

ಒಟ್ಟು ಗ್ರಾ.ಪಂ ಸದಸ್ಯ ಸ್ಥಾನಗಳಲ್ಲಿ ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಮುಖಂಡರು ಅತ್ಯಧಿಕ ಸಂಖ್ಯೆಗಳನ್ನೇ ಹೇಳುತ್ತಿದ್ದಾರೆ. ಎಲ್ಲರೂ ನಮ್ಮ ಬೆಂಬಲಿತರೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರು ನೀಡಿರುವ ಎಲ್ಲಾ ಅಂಕಿಗಳನ್ನು ಕೂಡಿಸಿದರೆ ಅದು ಒಟ್ಟು ಸಂಖ್ಯೆಯನ್ನು ಮೀರುತ್ತದೆ. ರಾಮ–ಕೃಷ್ಣ ಲೆಕ್ಕ ಕೊಟ್ಟು ಪಕ್ಷದ ಸಾಧನೆ ಎಂದು ಬಿಂಬಿಸಿಕೊಳ್ಳಲು ಎಲ್ಲಾ ಪಕ್ಷಗಳ ಮುಖಂಡರು ಮುಂಚೂಣಿಯಲ್ಲಿದ್ದಾರೆ.

3,793 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಅದರಲ್ಲಿ 2 ಸಾವಿರಕ್ಕೂ ಹೆಚ್ಚು ಸದಸ್ಯರು ಜೆಡಿಎಸ್‌ ಬೆಂಬಲದಿಂದ ಗೆಲುವು ಸಾಧಿಸಿದ್ದಾರೆ ಎಂದು ಜೆಡಿಎಸ್‌ ಮುಖಂಡರು ಹೇಳಿಕೊಂಡಿದ್ದಾರೆ. ಕಾಂಗ್ರೆಸ್‌ ಮುಖಂಡರ ಅಂಕಿಗಳು ಕೂಡ 2 ಸಾವಿರ ದಾಟುತ್ತಿದೆ. ತಾವೇನೂ ಕಮ್ಮಿ ಇಲ್ಲ ಎನ್ನುತ್ತಿರುವ ಬಿಜೆಪಿ ಮುಖಂಡರ ಸಂಖ್ಯೆಯೂ ಸಾವಿರದ ಅಂಚು ತಲುಪಿದೆ. ರಾಜಕೀಯ ಪಕ್ಷದ ಚಿನ್ಹೆಯಡಿ ಗ್ರಾ.ಪಂ ಚುನಾವಣೆ ನಡೆಯದ ಕಾರಣ ವಿವಿಧ ಪಕ್ಷಗಳ ಮುಖಂಡರ ಬಳಿ ಸ್ಪಷ್ಟ ಮಾಹಿತಿ ಇಲ್ಲವಾಗಿದೆ.

‘ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ಮುಗಿದ ಬಳಿಕ ಪಕ್ಷಗಳ ಬಲಾಬಲದ ಸ್ಪಷ್ಟತೆ ದೊರೆಯಲಿದೆ. ಅಧ್ಯಕ್ಷರ ಆಯ್ಕೆ ನಂತರ ಕಾಂಗ್ರೆಸ್‌ ವತಿಯಿಂದ ಮಂಡ್ಯದಲ್ಲಿ ಬೃಹತ್‌ ಸಮಾವೇಶ ಆಯೋಜಿಸಿ ಎಲ್ಲಾ ಸದಸ್ಯರನ್ನು ಅಭಿನಂದಿಸಲಾಗುವುದು. ಸದ್ಯ ಸ್ಥಳೀಯ ಮಟ್ಟದಲ್ಲಿ ಸನ್ಮಾನ ಸಮಾರಂಭ ನಡೆಯುತ್ತಿವೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ತಿಳಿಸಿದರು.

ಜಾತಿ ಸಂಘಟನೆಯಿಂದಲೂ ಸನ್ಮಾನ

ವಿವಿಧ ಜಾತಿ, ಸಮುದಾಯಗಳ ಸಂಘಟನೆಗಳು ಕೂಡ ತಮ್ಮ ಸಮಾಜದ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭ ಆಯೋಜನೆ ಮಾಡಿವೆ. ಹಿಂದುಳಿದ ವರ್ಗಗಳ ಸಂಘಟನೆಗಳಿಂದ ಹಿಂದುಳಿದ ವರ್ಗದಿಂದ ಆಯ್ಕೆಯಾಗಿರುವ ಸದಸ್ಯರನ್ನು ಅಭಿನಂದಿಸಲಾಗುತ್ತಿದೆ.

ಪರಿಶಿಷ್ಟ ಜಾತಿ, ಪಂಗಡಗಳ ಸಂಘಟನೆಗಳು ಆಯಾ ಸಮುದಾಯಗಳ ಸದಸ್ಯರನ್ನು ಸನ್ಮಾನ ಮಾಡುತ್ತಿವೆ. ಎಲ್ಲಾ ಸಣ್ಣಪುಟ್ಟ ಸಮುದಾಯಗಳು ಆಯಾ ಜಾತಿಗಳ ಸದಸ್ಯರನ್ನು ಸನ್ಮಾನಿಸಲು ಮುಂದಾಗಿವೆ. ಈಗ ಜಿಲ್ಲೆಯಲ್ಲಿ ನೂತನ ಸದಸ್ಯರಿಗೆ ಸನ್ಮಾನಗಳ ಮಹಾಪೂರವೇ ಹರಿಯುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು