ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆಯಲ್ಲಿ ಹೆಣ್ಣು ಭ್ರೂಣ ಹತ್ಯೆ: ಪ್ರಕರಣ ದಾಖಲು

Published 31 ಮೇ 2024, 14:10 IST
Last Updated 31 ಮೇ 2024, 14:10 IST
ಅಕ್ಷರ ಗಾತ್ರ

ಮೇಲುಕೋಟೆ: ಹೋಬಳಿಯ ಹೊಸಕೋಟೆ ಗ್ರಾಮದ ಮನೆಯೊಂದರಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆದಿರುವ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ.

ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ   ಮಾಲಾಶ್ರೀ ರವಿಕುಮಾರ್(34)   ಹೊಟ್ಟೆ ನೋವು, ತೀವ್ರ ರಕ್ತಸ್ರಾವ ಚಿಕಿತ್ಸೆಗಾಗಿ ತಾಯಿಯೊಂದಿಗೆ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಒಳರೋಗಿಯಾಗಿ ದಾಖಲಾಗಿದ್ದರು.  ಪರೀಕ್ಷಿಸಿದ ಮಹಿಳಾ ತಜ್ಞೆ ಡಾ.ಎಂ.ಕೆ.ಶಿಲ್ಪಶ್ರೀ ಅವರು ರಕ್ತಸ್ರಾವದ ಬಗ್ಗೆ ಮಾಲಾಶ್ರೀ ಅವರನ್ನು ವಿಚಾರಿಸಿದಾಗ, ‘ಏ.16 ರಂದು ಹಿರೇಮರಳಿಯ ಗೀತಾ ಹಾಗೂ ಕೆಆರ್ ಪೇಟೆಯ ಶೃತಿ ಎಂಬುವರು ತಮ್ಮನ್ನು ಹೊಸಕೋಟೆ ಗ್ರಾಮದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ  ಅನಧಿಕೃತ ಮಾತ್ರೆ  ಕೊಟ್ಟು ನುಂಗಲು ತಿಳಿಸಿದ್ದರು.ಮಾತ್ರೆ ಸೇವಿಸಿದ ಬಳಿಕ ಗರ್ಭಪಾತವಾಗಿತ್ತು.  ಭ್ರೂಣವನ್ನು ಪಾಂಡವಪುರ ತಾಲ್ಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ಹೂತು ಹಾಕಲಾಗಿದೆ. ಗರ್ಭಪಾತ ಮಾಡಿದ್ದಕ್ಕಾಗಿ ಚೇತನ್ ಕುಮಾರ್, ಆಶಾ ಶಿವರಾಜ್, ಗೀತಾ ಎಂಬುವರ ಖಾತೆಗಳಿಗೆ ಫೋನ್ ಪೇ ಮೂಲಕ ಹಣ ಹಾಕಲಾಗಿದೆ’ ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ.

 ಡಾ.ಶಿಲ್ಪಶ್ರೀ ಅವರು ಪಾಂಡವಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಿ.ಎ. ಅರವಿಂದ್ ಅವರಿಗೆ ವಿಷಯ ತಿಳಿಸಿದ್ದಾರೆ.  ಅರವಿಂದ್ ಅವರಿಂದ ಮಾಹಿತಿ ಪಡೆದ ಡಾ.ಬೆಟ್ಟಸ್ವಾಮಿ ಅವರು ವೈದ್ಯೆ ಡಾ.ಶಿಲ್ಪಶ್ರೀ ಹಾಗೂ ಗರ್ಭಪಾತಕ್ಕೆ ಒಳಗಾದ ಮಾಲಾಶ್ರೀ ಅವರೊಂದಿಗೆ ಮಾತನಾಡಿ ಸಮಗ್ರ ಮಾಹಿತಿಯನ್ನು ಪಡೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಗಳಾದ ಗೀತಾ, ಶ್ರುತಿ, ಚೇತನ್ ಕುಮಾರ್, ಆಶಾ ಶಿವರಾಜ್, ಗರ್ಭಪಾತಕ್ಕೆ ಒಳಗಾಗಿರುವ ಮಾಲಾಶ್ರೀ, ಈಕೆಯ ಪತಿ ರವಿಕುಮಾರ್ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಮಂಡ್ಯ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ ಅವರು ನೀಡಿದ ದೂರಿನ ಮೇರೆಗೆ ಮೇಲುಕೋಟೆ ಪೊಲೀಸರು ಐಪಿಸಿ ಸೆಕ್ಷನ್ 1860(u/s 312, 313, 315, 316, 34) ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ 2007(u/s-19), ದಿ ಮೆಡಿಕಲ್ ಟಾಮಿನೇಷನ್ ಆಫ್ ಪ್ರೆಗ್ನನ್ಸಿ ಆಕ್ಟ್ 1971(u/s4) ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT