ಸೋಮವಾರ, ಏಪ್ರಿಲ್ 12, 2021
28 °C
ಮಳವಳ್ಳಿಯಲ್ಲಿ ನಡೆದ ಪಟ್ಟಲದಮ್ಮನ ಹಬ್ಬದಲ್ಲಿ ತಾಲ್ಲೂಕು ಆಡಳಿತದ ಆದೇಶ ಉಲ್ಲಂಘನೆ

ಕೊಂಡೋತ್ಸವದ ಮೂಲಕ ಸಿಡಿಹಬ್ಬಕ್ಕೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ಸಂಪ್ರದಾಯಬದ್ಧವಾಗಿ, ಸರಳ ರೀತಿಯಲ್ಲಿ ನಡೆದ ಪಟ್ಟಣದ ಪಟ್ಟಲ ದಮ್ಮನ ಐತಿಹಾಸಿಕ ಸಿಡಿಹಬ್ಬಕ್ಕೆ ಕೊಂಡೋತ್ಸವದ ಮೂಲಕ ತೆರೆ ಬಿದ್ದಿದೆ.

ಕೋವಿಡ್-19 ಮಾರ್ಗಸೂಚಿ ಪ್ರಕಾರ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂಬ ನಿಯಮ ಜಾರಿಗೊಳಿಸಿದ್ದರಿಂದ ಭಕ್ತರ ಸಂಖ್ಯೆ ಕಡಿಮೆ ಇತ್ತು. ದೇವಸ್ಥಾನದ ಆವರಣದ ಅಕ್ಕ-ಪಕ್ಕ ಬಿಟ್ಟರೆ ಉಳಿದೆಡೆ ಹಬ್ಬದ ವಾತಾವರಣ ಕಂಡು ಬರಲಿಲ್ಲ. ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿತ ವತಿಯಿಂದ ಸಿಹಿ ವಿತರಿಸಲಾಯಿತು.

ಪದ್ಧತಿಯಂತೆ ಘಟ್ಟದ ಮೆರ ವಣಿಗೆಯು ಪೇಟೆ ಒಕ್ಕಲಿಗೇರಿ ಬೀದಿ ಯಿಂದ ಆರಂಭವಾಯಿತು. ನಂತರ ಸಿದ್ಧಾರ್ಥನಗರ, ಕೀರ್ತಿನಗರ, ಗಂಗಾ ಮತಸ್ಥ ಬೀದಿ, ಅಶೋಕನಗರ ದೊಡ್ಡಪಾಲು, ಚಿಕ್ಕಪಾಲು, ಬಸವ ಲಿಂಗಪ್ಪ ನಗರದಿಂದ ನಿಗದಿತ ಸಮಯಕ್ಕೆ ಘಟ್ಟ ಹೊತ್ತ ಮಹಿಳೆಯರು ಮಂಗಳವಾದ್ಯದೊಂದಿಗೆ ಮೆರವಣಿಗೆ ಯಲ್ಲಿ ಸಾಗಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಐತಿಹಾಸಿಕ ಸಿಡಿ ಆಚರಣೆ: ಕೋಟೆ ಪಟೇಲ್ ಚಿಣ್ಣೇಗೌಡರ ಮನೆಯ ಮುಂದೆ ಕಟ್ಟಿದ ಸಿಡಿಯನ್ನು ಎಳೆಯಲು ಸಿದ್ಧಾರ್ಥನಗರ ನಿವಾಸಿಗಳು ನೀಡಿದ ಹಗ್ಗವನ್ನು ಸಿಡಿ ಎಳೆಯಲು ಕಟ್ಟಲಾಯಿತು. ಗಂಗಾಮತಸ್ಥ ಬೀದಿಯ ಪಟ್ಟಲದಮ್ಮ ದೇವಸ್ಥಾನದಲ್ಲಿ ಸಿಡಿರಣ್ಣನ ಗೊಂಬೆಯನ್ನು ತಂದು ಸಿಡಿ ಮರಕ್ಕೆ ಕಟ್ಟಿದ್ದರು. ರಾತ್ರಿ 12ರ ಸಮಯಲ್ಲಿ ಸಿಡಿಗೆ ಪೂಜೆ ಸಲ್ಲಿಸಿ ಸಿಡಿ ಎಳೆಯುವುದಕ್ಕೆ ಚಾಲನೆ ನೀಡಲಾಯಿತು.

ಕೋಟೆ ಬೀದಿಯ ಯುವಕರು ಪಟ್ಟಣದಾದ್ಯಂತ ಸಿಡಿ ಬಂಡಿಯನ್ನು ಎಳೆದುಕೊಂಡು ಬಂದರು. ಶಾರ್ಙಪಾಣಿ ಬೀದಿ, ಕೋಟೆ ಬೀದಿ, ಮೈಸೂರು ರಸ್ತೆ ಮೂಲಕ ಪೇಟೆ ಬೀದಿ, ಗಂಗಾಮತ ಬೀದಿ ಮೂಲಕ ಅನಂತರಾಮ್ ಸರ್ಕಲ್ ನಿಂದ ಸುಲ್ತಾನ್ ರಸ್ತೆಯ ಪಟ್ಟಲದಮ್ಮ ದೇವಾಲಯಕ್ಕೆ ಸಾಗಿ ಮೂರು ಸುತ್ತು ಸುತ್ತಿದ ನಂತರ ಸಿಡಿಯನ್ನು ಅಂತಿಮಗೊಳಿಸಲಾಯಿತು. ನೂತನ ದಂಪತಿ ಸೇರಿದಂತೆ ಹಲವರು ಹಣ್ಣು ಜವನ ಎಸೆದು ಸಿಡಿಗೆ ನಮಿಸಿದರು.

ಕೊಂಡಕ್ಕೆ ಚಾಲನೆ: ಪಟ್ಟಲದಮ್ಮ ದೇವಸ್ಥಾನದ ಉಸ್ತುವಾರಿ ಸಮಿತಿ ಕೊಂಡ ಹಾಯಲು ಬೇಕಾದ ಅಗತ್ಯ ಕ್ರಮದ ನಡುವೆ ಗಂಗಾಮತಸ್ಥ ಬೀದಿಯ ಅಡ್ಡೆನಿಂಗಯ್ಯನ ಕೇರಿ ನಿವಾಸಿಗಳಾದ ರವಿ, ಮಾದೇಶ್ ಸೇರಿದಂತೆ ಐದು ಮಂದಿ ಉಪವಾಸ ಮಾಡಿ ಮೊದಲು ಕೊಂಡ ಹಾದರು. ನಂತರ ಹರಕೆಹೊತ್ತ ಹಲವರು ಕೊಂಡ ಹಾಯುವುದರ ಮೂಲಕ ಹರಕೆ ತೀರಿಸಿದರು.

ಆದೇಶ ಉಲ್ಲಂಘನೆ: ಸಿಡಿಹಬ್ಬದ ಹಿನ್ನಲೆಯಲ್ಲಿ ದೇವಸ್ಥಾನದ ಆವರಣ ಮತ್ತು ಅಕ್ಕ-ಪಕ್ಕದಲ್ಲಿ ಯಾವುದೇ ಅಂಗಡಿ ಮುಂಗಟ್ಟು ಕಟ್ಟಬಾರದು ಎಂದು ತಾಲ್ಲೂಕು ಆಡಳಿತ ಆದೇಶ ಹೊರಡಿಸಿತ್ತು. ಆದರೆ, ಆದೇಶಕ್ಕೆ ಬೆಲೆ ನೀಡದೆ ಹಲವು ಮಂದಿ ವ್ಯಾಪಾರದಲ್ಲಿ ತೊಡಗಿದ್ದರು. ದರ್ಶನಕ್ಕೆ ಬಂದ ಭಕ್ತರು ಕೋವಿಡ್ ಮಾರ್ಗಸೂಚಿ ಪಾಲಿಸಿರಲಿಲ್ಲ. ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ಎಚ್.ಲಕ್ಷ್ಮಿನಾರಾಯಣ್ ಪ್ರಸಾದ್ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು.

ಲಾಠಿ ಬೀಸಿದ ಪೊಲೀಸರು: ಕೊಂಡ ಹಾಯುವುದನ್ನು ನೋಡಲು ಸಾವಿರಾರು ಮಂದಿ ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು. ಅವರನ್ನು ನಿಯಂತ್ರಿಸಲಾಗದೆ ಪೊಲೀಸರು ಏಕಾಏಕಿ ಲಾಠಿ ಬೀಸಿದರು. ಇದರಿಂದಾಗಿ ಸ್ಪಲ್ಪ ಕಾಲ ಗೊಂದಲವಾಗಿತು.

ಭಕ್ತರಿಂದ ತುಂಬಿ ತುಳುಕುತ್ತಿದ್ದ ದೇವಸ್ಥಾನದ ಆವರಣದಲ್ಲಿ ಲಾಠಿ ಬೀಸಿದ್ದು, ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ಗಣ್ಯರಿಂದ ದರ್ಶನ: ದೇವಸ್ಥಾನದ ಆವರಣದ ಪಟ್ಟಲದಮ್ಮ, ಚಿಕ್ಕಮ್ಮತಾಯಿ, ದೊಡ್ಡಮ್ಮ ತಾಯಿ, ಹುಲಗೆರೆ ಹುಚ್ಚಮ್ಮ ದೇವರ ದರ್ಶನವನ್ನು ಶಾಸಕ ಡಾ.ಕೆ.ಅನ್ನದಾನಿ, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಟಿ.ನಂದಕುಮಾರ್ ಸೇರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.