ಶುಕ್ರವಾರ, ಜನವರಿ 28, 2022
25 °C

ಅಷ್ಟತೀರ್ಥೋತ್ಸವ; ತೆಲುಗು ಚಿತ್ರ ತಂಡದಿಂದ ಅಡಚಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೇಲುಕೋಟೆ: ತೆಲುಗು ಚಲನಚಿತ್ರ ತಂಡವು ಚೆಲುವನಾರಾಯಣ ಸ್ವಾಮಿಯ ಅಷ್ಟತೀರ್ಥೋತ್ಸವದ ವೇಳೆ ಅಡಚಣೆ ಉಂಟುಮಾಡಿದ್ದರಿಂದ ನಾಗರಿಕರು ಮತ್ತು ಕೈಂಕರ್ಯಪರರ ಅಸಮಾಧಾನಗೊಂಡರು.

ನಾಗಾರ್ಜುನ ನಟಿಸುತ್ತಿರುವ ಬಂಗಾರರಾಜು-2 ತೆಲುಗು ಚಲನಚಿತ್ರದ ತಂಡ ಕಲ್ಯಾಣಿಗೆ ಹೋಗುವ ರಸ್ತೆಯ ಮಧ್ಯೆ ದ್ವಾರದ ರೀತಿಯಲ್ಲಿ ಸೆಟ್ ನಿರ್ಮಾಣಮಾಡಿತ್ತು. ಇದರಿಂದ ಚೆಲುವನಾರಾಯಣಸ್ವಾಮಿಯ ಉತ್ಸವ ಸಾಗಲು ಅಡಚಣೆ ಆಗಿ ಸಿನಿಮಾಸೆಟ್ ದ್ವಾರದಲ್ಲಿ ಬಗ್ಗಿಸಿಕೊಂಡು ನಡುಚಪ್ಪರವಿಲ್ಲದೆ ಮೆರವಣಿಗೆ ಮಾಡಲಾಯಿತು.

ಚಲನಚಿತ್ರ ತಂಡ ಕಲ್ಯಾಣಿಯ ಸುತ್ತ ರಂಗೋಲಿ ಬಿಡಿಸಿ, ಸಾಲು ಮಂಟಪಗಳಿಗೆ ಹೂವಿನ ಅಲಂಕಾರ ಮಾಡಿತ್ತು. ಅಲ್ಲಿ ಹಾಕಿದ್ದ ರಂಗೋಲಿಯ ಬಣ್ಣಗಳು ಕಲ್ಯಾಣಿಗೆ ಸೇರುವ ಅಪಾಯವಿತ್ತು. ದೇವಾಲಯದ ಆಡಳಿತ ರಾಜಮುಡಿ ಉತ್ಸವ ಮುಕ್ತಾಯವಾಗಿ ಕಲ್ಯಾಣಿಯಿಂದ ಸ್ವಾಮಿಯ ಉತ್ಸವ ದೇವಾಲಯಕ್ಕೆ ಸೇರುವವರೆಗೆ ಚಿತ್ರೀಕರಣ ತಂಡಕ್ಕೆ ನಿರ್ಬಂಧ ವಿಧಿಸಬೇಕಿತ್ತು ಎಂದು ಭಕ್ತರು ಬೇಸರ ಪ್ರತಿಕ್ರಿಯಿಸಿದರು.

ತೆಲುಗು ಭಾಷೆಯಲ್ಲಿ ಫಲಕ; ಭಕ್ತರಲ್ಲಿ ಗೊಂದಲ: ಸ್ಮಾರಕಗಳನ್ನು ಬದಲಾವಣೆ ಮಾಡದೆ ಚಿತ್ರೀಕರಣ ನಡೆಸಬೇಕು ಎಂಬ ನಿಯಮವಿದ್ದರೂ ಕಲ್ಯಾಣಿಯ ಸುತ್ತ ಕಂಬಗಳಿಗೆ ಹೂವು ಹಾಗೂ ಬಟ್ಟೆಸುತ್ತಲಾಗಿತ್ತು. ಕೃಷ್ಣಜನ್ಮಾಷ್ಟಮಿ ಎಂದು ತೆಲುಗು ಭಾಷೆಯ ಫಲಕ ಮತ್ತು ಸ್ವಾಗತಕಮಾನುಗಳನ್ನು ಅಳವಡಿಸಲಾಗಿತ್ತು. ಇದರಿಂದ ಉತ್ಸವಕ್ಕೆ ಬಂದ ಭಕ್ತರಿಗೆ ಇಲ್ಲಿ ಕೃಷ್ಣಜನ್ಮಾಷ್ಠಮಿ ನಡೆಯುತ್ತಿದೆಯೋ ಅಥವ ಅಷ್ಟತೀರ್ಥೋತ್ಸವ ನಡೆಯುತ್ತಿದೆಯೋ ಎಂಬ ಗೊಂದಲ ಉಂಟಾಗಿತ್ತು. ಚಿತ್ರೀಕರಣದ ನೆಪದಲ್ಲಿ ಭಕ್ತರನ್ನು ತಡೆದು ನಿಲ್ಲಿಸಲಾಗಿತ್ತು.

ಉತ್ಸವದಲ್ಲಿ ಭಾಗಿಯಾಗಿದ್ದ ಕೈಂಕರ್ಯಪರರು ಮತ್ತು ದೇವಾಲಯದ ಸಿಬ್ಬಂದಿ ಪತ್ರಕರ್ತರೊಂದಿಗೆ ಮಾತನಾಡಿ, ಮೇಲುಕೋಟೆಯ ಸ್ಮಾರಕಗಳ ರಕ್ಷಣೆ ಮತ್ತು ದೇವಾಲಯದ ಸಂಪ್ರದಾಯ ಕಾಪಾಡುವ ನಿಟ್ಟಿನಲ್ಲಿ ಚಲನಚಿತ್ರೀಕರಣವನ್ನು ನಿಷೇಧಿಸಬೇಕು. ಈ ಸಂಬಂಧ ದೇವಾಲಯದ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದರು.

ಇತ್ತೀಚೆಗೆ ನಡೆದಿದ್ದ ಸಿನಿಮಾ ಚಿತ್ರೀಕರಣದಿಂದ ಪವಿತ್ರ ತೀರ್ಥ ತಂಗಿಯಕೊಳದ ನೀರು ಕಲುಷಿತಗೊಂಡಿದ್ದ ಆರೋಪ ವ್ಯಕ್ತವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು