ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ದೀಪ ಬೆಳಗಲು ಕೋವಿಡ್‌ ಭಯವಿಲ್ಲ

ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ದೀಪಗಳ ಆಕರ್ಷಣೆ, ಸ್ಥಳೀಯ ಕುಂಬಾರರ ಮಣ್ಣಿನ ಹಣತೆಗೂ ಬೇಡಿಕೆ
Last Updated 13 ನವೆಂಬರ್ 2020, 14:51 IST
ಅಕ್ಷರ ಗಾತ್ರ

ಮಂಡ್ಯ: ಕೋವಿಡ್‌ ಸಂಕಷ್ಟ ಸಮಯದಲ್ಲಿ ನಡೆಯುತ್ತಿರುವ ಈ ವರ್ಷದ ದೀಪಾವಳಿ ಹಬ್ಬದ ಸಂಭ್ರಮ, ಸಡಗರ ತಗ್ಗಿದೆ. ಆದರೆ ಬೆಳಕಿನ ಹಬ್ಬಕ್ಕೆ ಬೇಕಿರುವ ದೀಪಗಳ ಮಾರಾಟ, ಖರೀದಿಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಮಾರುಕಟ್ಟೆಗೆ ಬಗೆಬಗೆಯ ಹಣತೆಗಳು ಲಗ್ಗೆಯಿಟ್ಟಿದ್ದು ಬೇಡಿಕೆಯೂ ಸೃಷ್ಟಿಯಾಗಿದೆ.

ನಗರದ ವಿವಿ ರಸ್ತೆ, ನೂರು ಅಡಿ ರಸ್ತೆ, ತರಕಾರಿ ಮಾರುಕಟ್ಟೆ, ಪೇಟೆಬೀದಿ, ಗುತ್ತಲು ಮುಂತಾದೆಡೆ ವ್ಯಾಪಾರಿಗಳು ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಹಣತೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಬ್ಬಕ್ಕಾಗಿ ಈ ಬಾರಿ ದೊಡ್ಡ ಮಟ್ಟದಲ್ಲಿ ಖರೀದಿ ಭರಾಟೆ ಇಲ್ಲದಿದ್ದರೂ ಪೂಜೆಗೆ ಅಗತ್ಯವಾಗಿರುವ ವಸ್ತುಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ. ಮುಖ್ಯವಾಗಿ ಮಣ್ಣಿನ ದೀಪಗಳ ಖರೀದಿ ಕಳೆದ ವರ್ಷದಂತೆಯೇ ಇದ್ದು ದೀಪ ತಯಾರಿಸಿದ ಕುಶಲಕರ್ಮಿಗಳ ಮೊಗದಲ್ಲಿ ಸಂತಸ ಮೂಡಿದೆ.

ಜಿಲ್ಲೆಯಲ್ಲಿ ಮಳವಳ್ಳಿ ತಾಲ್ಲೂಕಿನ ಚಿಕ್ಕಮುಲಗೂಡು, ಹೊನಗಾನಹಳ್ಳಿ, ಬಳಗೆರೆ, ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕನಕೆರೆ, ಮಾಕವಳ್ಳಿ, ಮದ್ದೂರು ತಾಲ್ಲೂಕಿನ ಕೊಕ್ಕರೆಬೆಳ್ಳೂರು ಗ್ರಾಮದಲ್ಲಿ ಕುಂಬಾರರು ಮಣ್ಣಿನ ಹಣತೆ ತಯಾರಿಸುತ್ತಾರೆ.ಹಬ್ಬಕ್ಕೆ ತಿಂಗಳಿದ್ದಾಗಲೇ ಶುದ್ಧ ಜೇಡಿಮಣ್ಣು ತಂದು ಹದ ಮಾಡಿಕೊಂಡು ಹಣತೆಗಳ ತಯಾರಿಕೆ ಆರಂಭಿಸುತ್ತಾರೆ. ಯಾವುದೇ ಅಚ್ಚು ಬಳಸದೇ ಶುದ್ಧ ಮಣ್ಣಿನಿಂದಲೇ ತಯಾರಿಸುತ್ತಾರೆ. ದೀಪಕ್ಕೆ ಯಾವುದೇ ರೀತಿಯಿಂದಲೂ ಬಣ್ಣ ತಾಕಿಸುವುದಿಲ್ಲ.

ಸಾಂಪ್ರದಾಯಿಕವಾಗಿ ದೀಪಾವಳಿ ಆಚರಣೆ ಮಾಡುವವರು ಶುದ್ಧ ಮಣ್ಣಿನ ದೀಪಗಳನ್ನೇ ಮನೆಯಲ್ಲಿ ಬೆಳಗುತ್ತಾರೆ. ದೀಪಾವಳಿ ಮುಗಿಸಿ ಕಾರ್ತೀಕ ಮಾಸ ಮುಗಿಯುವವರೆಗೂ ಮನೆಯ ಮುಂದೆ, ಕಾಂಪೌಂಡ್‌ ಮುಂದೆ ಮಣ್ಣಿನ ದೀಪಗಳನ್ನೇ ಹಚ್ಚುತ್ತಾರೆ. ಆದರೆ ಕೆಲವರು ಅಚ್ಚುಬಳಸಿ, ಬಣ್ಣ ಹಚ್ಚಿರುವ ದೀಪಗಳನ್ನು ಹಚ್ಚುತ್ತಾರೆ. ಟೆರಾಕೋಟದಿಂದ ಮಾಡಿರುವ ದೀಪಗಳೂ ಮಾರುಕಟ್ಟೆಗೆ ಬಂದಿದ್ದು ನೋಡಲು ಸುಂದರವಾಗಿ ಕಾಣುತ್ತವೆ.

‘ಬಣ್ಣದ ದೀಪಗಳನ್ನು ವ್ಯಾಪಾರಿಗಳು ತಮಿಳುನಾಡು, ಆಂಧ್ರಪ್ರದೇಶದಿಂದ ತರಿಸುತ್ತಾರೆ. ಅಂತಹ ದೀಪಗಳನ್ನು ಸ್ಥಳೀಯ ಕುಂಬಾರರು ತಯಾರಿಸುವುದಿಲ್ಲ. ಕೋವಿಡ್‌ ಇದ್ದರೂ ಕಳೆದ ವರ್ಷದಂತೆಯೇ ಜನರು ಮಣ್ಣಿನ ದೀಪಗಳನ್ನೇ ಖರೀದಿ ಮಾಡುತ್ತಿದ್ದಾರೆ. ಈ ಬಾರಿ ಕಡಿಮೆ ಮಾರಾಟವಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಜನರು ಪೂಜೆಗಾಗಿ ಎಂದಿನಂತೆ ದೀಪ ಕೊಳ್ಳುತ್ತಿದ್ದಾರೆ’ ಎಂದು ಚಿಕ್ಕಮುಲಗೂಡು ಗ್ರಾಮದ ನಾಗೇಶ್‌ ಹೇಳಿದರು.

ದೀಪಾಕರ್ಷಣೆ: ಹೊರರಾಜ್ಯಗಳಿಂದ ಬಂದ ಯಂತ್ರದಿಂದ ತಯಾರಿಸಿದ ಮಣ್ಣಿನ ದೀಪಗಳು, ಪಿಂಗಾಣಿಗಳು ಮಾರುಕಟ್ಟೆಗೆ ಬಂದಿವೆ. ಮಳೆ ಗಾಳಿಯಿಂದ ದೀಪ ಕೆಡದಂತೆ ರಕ್ಷಣೆ ಪಡೆಯಲು ಲ್ಯಾಂಪ್‌, ತೆಂಗಿನ ಕಾಯಿ ದೀಪ, ಸ್ವಾಗತಿಸುವ ಹುಡುಗಿಯ ಪಿಂಗಾಣಿ ದೀಪಗಳು ಹೆಚ್ಚು ಆಕರ್ಷಿಸುತ್ತಿದೆ. ವಿವಿಧ ಗಾತ್ರದ ದೀಪಗಳ ನಡುವೆ ಓಂ, ಸ್ವಸ್ತಿಕ್‌, ರಂಗೋಲಿ ಬರಹಗಳು ಸೇರಿದಂತೆ ಬಗೆ ಬಗೆಯ ಚಿತ್ತಾರ ಮೂಡಿವೆ. ಸ್ಟ್ಯಾಂಡ್‌, ಹೃದಯ, ಕಮಲ, ನಕ್ಷತ್ರ, ಬಟ್ಟಲು, ಶಂಖ ಆಕಾರದ ವಿವಿಧ ಗಾತ್ರದ ಹಣತೆಗಳು ಸಿಗುತ್ತಿವೆ.

ಪಟಾಕಿ ಮಾರಾಟಕ್ಕಿಲ್ಲ ತಡೆ: ಕೋವಿಡ್‌ ಅವಧಿಯಲ್ಲಿ ಹಸಿರು ಪಟಾಕಿಗಳನ್ನಷ್ಟೇ ಬಳಸಬೇಕು ಎಂದು ಸರ್ಕಾರದ ನಿರ್ದೇಶನವಿದ್ದರೂ ನಗರದ ಒಳಾಂಗಣ ಕ್ರೀಡಾಂಗಣದ ಪಕ್ಕದ ಮೈದಾನದಲ್ಲಿ ಎಲ್ಲಾ ಬಗೆಯ ಪಟಾಕಿ ಮಾರಾಟ ಮಾಡಲಾಗುತ್ತಿದೆ. ಆದರೆ ಕಡಿಮೆ ಪ್ರಮಾಣದಲ್ಲಿ ಪಟಾಕಿ ತಂದಿಟ್ಟಿದ್ದಾರೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಪಟಾಕಿ ತರಲಾಗುವುದು ಎಂದು ಅಂಗಡಿ ಮಾಲೀಕರು ತಿಳಿಸಿದರು

ಹಬ್ಬದ ಅಂಗವಾಗಿ ಹೂವಿನ ಬೇಡಿಕೆ ಗಗನಕ್ಕೇರಿದೆ. ಸೇವಂತಿಗೆ ಹೂವು ಮಾರಿಗೆ ₹ 50– ₹ 80ರವರೆಗೆ ಮಾರಾಟವಾಗುತ್ತಿದೆ. ಭಾನುವಾರ, ಸೋಮವಾರ ಹೂವಿನ ಬೆಲೆ ₹ 100ರವರೆಗೆ ತಲುಪುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದರು.

ಕಾರ್ತೀಕ: ದೀಪೋತ್ಸವ ಇಲ್ಲ

ದೀಪಾವಳಿ ಮುಗಿದು ಕಾರ್ತೀಕ ಮಾಸ ಆರಂಭವಾಗುತ್ತಿದ್ದಂತೆ ವಿವಿಧ ದೇವಾಲಯಗಳಲ್ಲಿ ಸಾವಿರ, ಲಕ್ಷ ದೀಪೋತ್ಸವ ನಡೆಯುತ್ತಿದ್ದವು. ಆದರೆ ಕೋವಿಡ್‌ ಭೀತಿಯಲ್ಲಿ ದೀಪೋತ್ಸವ ಆಚರಣೆ ಮಾಡುವುದನ್ನು ಬಹುತೇಕ ದೇವಾಲಯಗಳಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ದೀಪೋತ್ಸವಕ್ಕೆ ಸಗಟು ದೀಪಗಳ ಖರೀದಿ ಇಲ್ಲವಾಗಿದೆ.

‘ಜನರು ದೀಪಾವಳಿಗಾಗಿ ದೀಪ ಖರೀದಿ ಮಾಡುತ್ತಿದ್ದು ಕುಂಬಾರರಿಗೆ ತೊಂದರೆ ಆಗಿಲ್ಲ. ಆದರೆ ದೀಪೋತ್ಸವ ನಡೆಯದೇ ಇರುವ ಕಾರಣ ಹೆಚ್ಚಿನ ಪ್ರಮಾಣದ ದೀಪ ಖರೀದಿ ಇಲ್ಲವಾಗಿದೆ’ ಎಂದು ದೀಪ ತಯಾರಕ ಶಿವಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT