ಭಾನುವಾರ, ಸೆಪ್ಟೆಂಬರ್ 19, 2021
23 °C
ಗೊಂದಲದ ಗೂಡಾದ ‘ದಿಶಾ’ ಸಭೆ

ಸಂಸದೆ ಸುಮಲತಾ ಜತೆ ಶಾಸಕರ ಜಟಾಪಟಿ- ಎರಡೂವರೆ ಗಂಟೆ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸಂಸದೆ ಸುಮಲತಾ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಜೆಡಿಎಸ್‌ ಶಾಸಕರು ಸಂಸದರ ಕಾರ್ಯವೈಖರಿ ಪ್ರಶ್ನಿಸಿದರು. ಎರಡೂವರೆ ಗಂಟೆ ಕಾಲ ವಾಗ್ವಾದ, ಜಟಾಪಟಿ ನಡೆಯಿತು.

ಸಭೆ ಆರಂಭಗೊಳ್ಳುತ್ತಿದ್ದಂತೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ ‘ಅನಧಿಕೃತವಾಗಿ ದಿಶಾ ಸಭೆ ನಡೆಸಲಾಗುತ್ತಿದೆ. ಸಂಸದರ ಲೆಟರ್‌ಹೆಡ್‌ ದುರುಪಯೋಗವಾಗಿದ್ದು ಅನಧಿಕೃತ ವ್ಯಕ್ತಿಗಳು ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ಆಪ್ತ ಕಾರ್ಯದರ್ಶಿಯೊಬ್ಬ ಸಂಸದರ ಸಹಿ ಮಾಡಿ ಅವ್ಯವಹಾರ ನಡೆಸಿದ್ದಾನೆ. ಸಂಸದರು ಇಷ್ಟ ಬಂದ ಹಾಗೆ ಜಿಲ್ಲೆಯ ಆಡಳಿತ ನಡೆಸಲು ನಾವು ಬಿಡುವುದಿಲ್ಲ’ ಎಂದು ಏರುಧ್ವನಿಯಲ್ಲಿ ಮಾತನಾಡಿದರು.

‘ಸಂಸದರಾಗಿ ಆಯ್ಕೆಯಾದ ನಂತರ ನೀವು ಜಿಲ್ಲೆಯಲ್ಲಿ ಒಂದು ಚರಂಡಿಯನ್ನೂ ಮಾಡಿಸಿಲ್ಲ. ಮೈಸೂರು ಸಂಸದರು ಮಂಡ್ಯಕ್ಕೆ ಬಂದು ಬೆಂಗಳೂರು–ಮೈಸೂರು ದಶಪಥ ಕಾಮಗಾರಿ ಮಾಡಿಸುತ್ತಿದ್ದಾರೆ, ನೀವೇನು ಮಾಡಿದ್ದೀರಿ’ ಎಂದು ಪ್ರಶ್ನಿಸಿದರು. ಇದಕ್ಕೆ ಶಾಸಕರಾದ ಸುರೇಶ್‌ಗೌಡ, ಎಂ.ಶ್ರೀನಿವಾಸ್‌, ಸಿ.ಎಸ್‌.ಪುಟ್ಟರಾಜು ಧ್ವನಿಗೂಡಿಸಿದರು.

ಸುಮಲತಾ ಉತ್ತರಿಸಿ ‘ಕಳೆದ ಎರಡು ವರ್ಷಗಳಿಂದ ನನ್ನ ಯಾವುದೇ ಸಭೆಗೆ ಬಾರದ ನೀವು ಈಗ ಬಂದಿರುವುದಕ್ಕೆ ನಿಮ್ಮ ಉದ್ದೇಶವೇನು ಎಂಬುದು ತಿಳಿಯುತ್ತದೆ. ನನ್ನ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಗೊಂದಲ ಸೃಷ್ಟಿಸಬೇಡಿ’ ಎಂದು ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಸುಮಲತಾ ಹಾಗೂ ಶಾಸಕರ ನಡುವೆ ವಾಗ್ವಾದ ನಡೆಯಿತು.

‘ದಿಶಾ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯರಿಗೆ ಆಹ್ವಾನ ನೀಡಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಮಾತಿನ ಚಕಮಕಿ ಮಧ್ಯಾಹ1.30ರವರೆಗೂ ನಡೆಯಿತು. ಈ ವೇಳೆ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದರು, ಕೆಲವರು ಮೊಬೈಲ್‌ ನೋಡುತ್ತಾ ಕುಳಿತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು