ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಬದಿ ಹೋಟೆಲ್‌ ಬಂದ್‌ಗೆ ಹೆಚ್ಚಿದ ಒತ್ತಡ

ಊಟ, ತಿಂಡಿಗೆ ವಾಹನ ನಿಲ್ಲಿಸುವ ಅನ್ಯ ಜಿಲ್ಲೆ, ರಾಜ್ಯಗಳ ಜನರು; ಸೋಂಕು ಹರಡುವ ತಾಣಗಳು...
Last Updated 16 ಏಪ್ರಿಲ್ 2021, 5:00 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕಾರಣ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಎಲ್ಲಕ್ಕಿಂತ ಮೊದಲು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹೋಟೆಲ್‌ ಹಾಗೂ ಇತರ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರರಾಜ್ಯಗಳ, ಹೊರಜಿಲ್ಲೆಯ ಜನರು, ವಲಸಿಗರು, ಪ್ರವಾಸಿಗರು ನಿರಂತರವಾಗಿ ಓಡಾಡುತ್ತಾರೆ. ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿ ಹೋಟೆಲ್‌ಗಳಲ್ಲಿ ವಾಹನ ನಿಲ್ಲಿಸಿ ತಿಂಡಿ, ಊಟ ಮಾಡುತ್ತಾರೆ. ಬಹುತೇಕ ವಾಹನಗಳನ್ನು ಮದ್ದೂರು ವ್ಯಾಪ್ತಿಯ ಹೋಟೆಲ್‌ಗಳ ಮುಂದೆ ನಿಲ್ಲಿಸಲಾಗುತ್ತದೆ.

ಸಾರಿಗೆ ಸಂಸ್ಥೆ ಬಸ್‌ಗಳು ಕೂಡ ಮದ್ದೂರು ವ್ಯಾಪ್ತಿಯ ಹೋಟೆಲ್‌ಗಳಲ್ಲೇ ಊಟಕ್ಕೆ ನಿಲ್ಲಿಸುತ್ತಾರೆ. ಸದ್ಯ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರ ನಡೆಸುತ್ತಿರುವ ಕಾರಣ ಸಾರಿಗೆ ಸಂಸ್ಥೆ ಬಸ್‌ಗಳಿಲ್ಲ. ಆದರೆ, ನಿತ್ಯ ಹೆದ್ದಾರಿಯಲ್ಲಿ ಲಕ್ಷಾಂತರ ಖಾಸಗಿ ವಾಹನಗಳು ಓಡಾಡುತ್ತಿದ್ದು ಹೋಟೆಲ್‌, ಅಂಗಡಿಗಳ ಬಳಿ ನಿಲ್ಲಿಸುತ್ತಾರೆ. ಬೇಸಿಗೆ ಸುಡು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಇಲ್ಲಿಯ ತಾಜಾ ಎಳನೀರು, ಕಬ್ಬಿನ ಹಾಲು ಕುಡಿಯುವುದಕ್ಕೂ ವಾಹನ ನಿಲ್ಲಿಸುತ್ತಾರೆ.

ಹೊರಜಿಲ್ಲೆ, ರಾಜ್ಯಗಳಿಂದ ಬಂದ ಜನರು ಇಲ್ಲಿ ಇಳಿಯುವ ಕಾರಣ ಕೊರೊನಾ ಸೋಂಕು ತೀವ್ರವಾಗಿ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೋಟೆಲ್‌ ಹಾಗೂ ಇತರ ಅಂಗಡಿಗಳನ್ನು ಮುಚ್ಚಿದರೆ ಸೋಂಕು ಹರಡುವುದನ್ನು ತಡೆಯಬಹುದು ಎಂದು ಜನರು ಒತ್ತಾಯಿಸುತ್ತಿದ್ದಾರೆ.

‘ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಬೆಂಗಳೂರು– ಮೈಸೂರು ನಡುವೆ ಓಡಾಡುವವರಿಂದ ಹೆಚ್ಚು ಅಪಾಯ ಎದುರಾಗಿತ್ತು. ಇದನ್ನು ಅರಿತು ಆಗ ಹೆದ್ದಾರಿ ಬದಿಯ ಹೋಟೆಲ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗಲೂ ಅಂಥದೇ ಪರಿಸ್ಥಿತಿ ಇದ್ದು, ಹೋಟೆಲ್‌, ಅಂಗಡಿಗಳನ್ನು ಬಂದ್‌ ಮಾಡಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದು ವಕೀಲ ಸುರೇಶ್‌ ಒತ್ತಾಯಿಸಿದರು.

ಅಧಿಕಾರ ಇಲ್ಲ: ಸರ್ಕಾರದ ಕಾರ್ಯ ಸೂಚಿ ಹೊರತಾಗಿ ಕೋವಿಡ್‌ ನಿಯಂತ್ರಣದ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇಲ್ಲ. ಹೊರ ಜಿಲ್ಲೆಯಿಂದ ಬರುವವರು ಕೋವಿಡ್‌ ನೆಗೆಟಿವ್‌ ವರದಿ ತರಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದ್ದನ್ನು ಸರ್ಕಾರ ಹಿಂಪಡೆದಿತ್ತು. ಸರ್ಕಾರದ ಆದೇಶದ ಹೊರತಾಗಿ ಜಿಲ್ಲಾಧಿಕಾರಿಗಳು ಯಾವುದೇ ನಿರ್ಣಯ ಕೈಗೊಳ್ಳಬಾರದು ಎಂದು ಸೂಚಿಸಿತ್ತು.

‘ಕೋವಿಡ್‌ ಕಾರ್ಯಸೂಚಿ ಅನ್ವಯವೇ ಜಿಲ್ಲಾಡಳಿತ ಕ್ರಮ ಕೈಗೊಳ್ಳ ಬೇಕು. ಅದನ್ನು ಮೀರಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಹೆದ್ದಾರಿ ಬದಿ ಹೋಟೆಲ್‌, ಅಂಗಡಿಗಳಲ್ಲಿ ಕಟ್ಟುನಿ ಟ್ಟಿನ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಆದರೆ, ಬಂದ್‌ ಮಾಡುವ ನಿರ್ಧಾರ ಕೈಗೊಳ್ಳುವ ಅಧಿಕಾರ ನಮಗೆ ಇಲ್ಲ’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ತಿಳಿಸಿದರು.

ಕೋವಿಡ್‌ ಕೇರ್‌ ಕೇಂದ್ರ: ಇಲ್ಲಿಯವರೆಗೂ ಜಿಲ್ಲಾ ಕೇಂದ್ರದಲ್ಲಿ ಕೋವಿಡ್‌ ಕೇರ್‌ ಕೇಂದ್ರ ಹೊರತುಪಡಿಸಿ ತಾಲ್ಲೂಕು ಮಟ್ಟದಲ್ಲಿ ಇದ್ದ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿತ್ತು. ಜಿಲ್ಲೆಯ ಎಲ್ಲಾ ರೋಗಿಗಳನ್ನು ನಗರದಲ್ಲಿರುವ ಕೋವಿಡ್‌ ಕೇರ್‌ ಕೇಂದ್ರಕ್ಕೆ ದಾಖಲು ಮಾಡಲಾಗುತ್ತಿತ್ತು. ಆದರೆ, ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ತಾಲ್ಲೂಕುಮಟ್ಟದ ಕೋವಿಡ್‌ ಕೇರ್‌ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

‘ಶುಕ್ರವಾರದಿಂದಲೇ ಎಲ್ಲಾ ತಾಲ್ಲೂಕುಗಳ ಕೋವಿಡ್‌ ಕೇರ್‌ ಕೇಂದ್ರ ತೆರೆಯಲಿದ್ದು, ಅಗತ್ಯ ಸೌಲಭ್ಯ ಒದಗಿಸಲಾಗುವುದು. ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಆಯಾ ತಾಲ್ಲೂಕು ವ್ಯಾಪ್ತಿಯ ರೋಗಿಗಳನ್ನು ಅಲ್ಲಿಯ ಕೇಂದ್ರದಲ್ಲೇ ದಾಖಲು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಅಶ್ವಥಿ ತಿಳಿಸಿದರು.

ಒಂದೇ ದಿನ 211 ಮಂದಿಗೆ ಕೋವಿಡ್‌
ಗುರುವಾರ ಒಂದೇ ದಿನ 211 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 21,284ಕ್ಕೆ ಹೆಚ್ಚಳವಾಗಿದೆ.

ಮಂಡ್ಯ ತಾಲ್ಲೂಕೊಂದರಲ್ಲೇ 65 ಮಂದಿ, ಮದ್ದೂರು 40, ನಾಗಮಂಗಲ 36, ಮಳವಳ್ಳಿ 23, ಕೆ.ಆರ್‌.ಪೇಟೆ 15, ಪಾಂಡವಪುರ 12, ಶ್ರೀರಂಗಪಟ್ಟಣ 11, ಹೊರಜಿಲ್ಲೆಯ 11 ಮಂದಿಗೆ ಸೋಂಕು ದೃಢಪಟ್ಟಿದೆ.

ಶುಕ್ರವಾರ 66 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಒಟ್ಟು 20,332 ಮಂದಿ ಕೋವಿಡ್‌ ಮುಕ್ತರಾಗಿದ್ದಾರೆ. 788 ಪ್ರಕರಣಗಳು ಸಕ್ರಿಯವಾಗಿವೆ. ಇಲ್ಲಿಯವರೆಗೂ 164 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT