ಸೋಮವಾರ, ಜನವರಿ 20, 2020
20 °C
ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಶ್ರಮದಾನ, ಮುಚ್ಚಿ ಹೋಗಿದ್ದ ಕೊಳ ಫಳಫಳ, ಗ್ರಾಮಸ್ಥರ ಶ್ಲಾಘನೆ

ಶ್ರೀರಂಗಪಟ್ಟಣ: 400 ವರ್ಷಗಳ ಹಳೆಯ ಕೊಳಕ್ಕೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ದರಸಗುಪ್ಪೆ ಗ್ರಾಮದ ಬಳಿ ಭಾಗಶಃ ಮುಚ್ಚಿ ಹೋಗಿದ್ದ ಐತಿಹಾಸಿಕ ಕೊಳವನ್ನು ಎನ್‌ಎಸ್‌ಎಸ್‌ ವಿದ್ಯಾರ್ಥಿ ಗಳು ಬುಧವಾರ ಸ್ವಚ್ಛಗೊಳಿಸಿದರು.

ಮೈಸೂರು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ತಂಡ 400 ವರ್ಷಗಳ ಹಿಂದಿನ ಕೊಳವನ್ನು ಸ್ವಚ್ಛಗೊಳಿಸಿತು. ಗ್ರಾಮದ ದಕ್ಷಿಣಕ್ಕೆ ಇರುವ ಈ ಚೌಕಾಕಾರದ ಈ ಕಲ್ಲಿನ ಕೊಳವನ್ನು 60 ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಹಸನು ಮಾಡಿದರು. ಸುಮಾರು 50 ಅಡಿ ಅಗಲ ಹಾಗೂ ಅಷ್ಟೇ ಉದ್ದ ಇರುವ ಈ ಕೊಳದ ಸುತ್ತ ಬೆಳೆದಿದ್ದ ಮುಳ್ಳುಕಂಟಿಗಳನ್ನು ಕಿತ್ತು ತೆರವುಗೊಳಿಸಿದರು. ಕಲ್ಲು ಚಪ್ಪಡಿಗಳು ಹಾಗೂ ಮೆಟ್ಟಿಲುಗಳ ಮೇಲೆ ಎದೆಮಟ್ಟ ಬೆಳೆದಿದ್ದ ಪಾರ್ಥೇನಿಯಂ, ದತ್ತೂರಿ ಇತರ ಕಳೆ ಗಿಡಗಳನ್ನು ಬೇರು ಸಹಿತ ತೆಗೆದು ಹಾಕಿದರು.

ಕೊಳದ ಮೆಟ್ಟಿಲುಗಳ ಮೇಲೆ ಸಂಗ್ರಹವಾಗಿದ್ದ ಕೆಸರನ್ನು ಬಾಚಿ ತೆಗೆದರು. ಕುಡುಗೋಲು, ಕೊಡಲಿ, ಹಾರೆ, ಗುದ್ದಲಿ ಹಿಡಿದು ಕೊಳಕ್ಕೆ ಕಾಯಕಲ್ಪ ನೀಡಿದರು. ಕೊಳಕ್ಕೆ ಸಿಡಿಎಸ್‌ ನಾಲೆ ಏರಿಯಿಂದ ಇದ್ದ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡಿದರು. ಪ್ರವೇಶ ದ್ವಾರದಲ್ಲಿ ಇದ್ದ ಕಳೆ ಗಿಡಗಳನ್ನು ತೆಗೆದರು. ಕೊಳದ ಸುತ್ತ ಕಲ್ಲುಗಳಿಂದ ಆಸನಗಳನ್ನು ಜೋಡಿಸಿ ವಿಶೇಷ ರೂಪ ನೀಡಿದರು. ಸ್ವಚ್ಛತೆಯ ಮೂಲಕ ಕೊಳ ಮತ್ತು ಅದರಲ್ಲಿದ್ದ ನೀರು ಫಳಫಳ ಹೊಳೆಯುವಂತೆ ಮಾಡಿದರು.

ಎನ್‌ಎಸ್‌ಎಸ್‌ ಶಿಬಿರಾಧಿಕಾರಿ ಡಾ.ಆರ್‌.ರಾಘವೇಂದ್ರ, ಸಹ ಶಿಬಿರಾಧಿಕಾರಿ ಟಿ.ಎಂ. ಮುರಳಿ, ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್‌, ಕೆ. ಜಯರಾಂ ಇತರರು ಕೂಡ ಶ್ರಮದಾನಕ್ಕೆ ಕೈ ಜೋಡಿಸಿದರು.

‘ಕೆಲವು ವರ್ಷಗಳ ಹಿಂದೆ ದರಸಗುಪ್ಪೆ ಗ್ರಾಮ ಪಂಚಾಯಿತಿ ಈ ಕೊಳಕ್ಕೆ ಕಾಯಕಲ್ಪ ನೀಡಲು ಪ್ರಯತ್ನಿಸಿತ್ತು. ವಿವಿಧ ಕಾರಣಗಳಿಂದ ಉದ್ದೇಶಿತ ಕಾರ್ಯ ಅಪೂರ್ಣವಾಗಿತ್ತು. ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಪೂರ್ಣ ಮಾಡಿದ್ದಾರೆ’ ಎಂದು ಗ್ರಾ.ಪಂ. ಸದಸ್ಯ ಜಗದೀಶ್‌ ಶ್ಲಾಘಿಸಿದರು.

ತುಳಸೀರಾಮದಾಸರ ಕಾಲದ ಕೊಳ

‘ಇದು ಸಂತ ತುಳಸೀರಾಮದಾಸ ಅವರ ಕಾಲದಲ್ಲಿ 400 ವರ್ಷಗಳ ಹಿಂದೆ ನಿರ್ಮಿಸಿರುವ ಕೊಳ. ನಾಲೆ ಬರುವುದಕ್ಕೂ ಮುನ್ನ ಈ ಕೊಳದ ನೀರು ದೇವರ ನೈವೇದ್ಯ ಹಾಗೂ ಜನರು ಕುಡಿಯಲು ಬಳಕೆಯಾಗುತ್ತಿತ್ತು. ಕಲ್ಲುಗಳನ್ನು ಬಳಸಿ ನಿರ್ಮಿಸಿರುವ ಈ ಕೊಳದ ಚೌಕಟ್ಟು ಈಗಲೂ ಗಟ್ಟಿಯಾಗಿದೆ. ಮರೆತು ಹೋಗಿದ್ದ ಕೊಳವನ್ನು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ನೆನಪು ಮಾಡಿಕೊಟ್ಟಿದ್ದಾರೆ’ ಎಂದು ಗ್ರಾಮದ ಮುಖಂಡ ಕೆ.ರಾಮಚಂದ್ರ ಸಂತಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು