ಗುರುವಾರ , ನವೆಂಬರ್ 21, 2019
26 °C
ಸಂಘ ಸಂಸ್ಥೆಗಳು ಹಳೆಯ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆಗಳಿಗೆ ಸೇವೆ

ಮಳವಳ್ಳಿ ತಾಲ್ಲೂಕಿನಲ್ಲಿ 42 ಮಕ್ಕಳ ಮನೆ

Published:
Updated:
Prajavani

ಮಳವಳ್ಳಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತಾಲ್ಲೂಕಿನ ವಿವಿಧ ಟ್ರಸ್ಟ್, ಹಳೆಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ, ವಿವಿಧ ಸಂಘ ಸಂಸ್ಥೆಗಳು ಮಂದೆ ಬಂದಿವೆ. ಇದರ ಪರಿಣಾಮವಾಗಿ ತಾಲ್ಲೂಕಿನ 42 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮನೆಗಳು ಆರಂಭವಗೊಂಡಿವೆ.

ಹಲಗೂರು ನಾಗರಿಕ ಹಿತರಕ್ಷಣಾ ಸಮಿತಿಯು ಹಲವು ವರ್ಷಗಳಿಂದ ಹಲಗೂರು ಹೋಬಳಿಯ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್ ಸೇರಿ ಪ್ರತಿವರ್ಷ ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಕಲಿಕಾ ಸಾಮಗ್ರಿ ವಿತರಿಸುತ್ತಿದೆ. ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಅವರು ಶಾಲೆಯೊಂದಕ್ಕೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದರು.

ವಿದ್ಯಾರೋಪಣ ಟ್ರಸ್ಟ್ ವತಿಯಿಂದ ಹಲಗೂರು ಹೋಬಳಿಯ ಬ್ಯಾಡರಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ 4 ಕಂಪ್ಯೂಟರ್, ಹೆಚ್ಚುವರಿಯಾಗಿ ಮೂವರು ಶಿಕ್ಷಕರು, ಕ್ರೀಡಾ ಪರಿಕರ, ಮಕ್ಕಳಿಗೆ ಶೂ, ಸಾಕ್ಸ್‌ ವಿತರಣೆ ಮಾಡಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿತ್ತು.

ಕಸಬಾ ಹೋಬಳಿಯ ಹುಲ್ಲಾಗಾಲ ಸರ್ಕಾರಿ ಶಾಲೆ ಶಾಲೆ ಉಳಿವಿಗೆ ಗ್ರಾಮದ ನಾಗರಾಜು ಎಂಬುವರು ₹ 1.5 ಲಕ್ಷದ ಸ್ಮಾರ್ಟ್ ಕ್ಲಾಸ್ ಸಾಮಗ್ರಿ, ಖಾಸಗಿಯಾಗಿ ಒಬ್ಬ ಶಿಕ್ಷಕಿಗೆ ವೇತನ, ಕಲಿಕಾ ಸಾಮಗ್ರಿ ನೀಡಿ ಇತರರಿಗೂ ಸ್ಫೂರ್ತಿಯಾಗಿದ್ದಾರೆ. ಮಕ್ಕಳ ಮನೆ ಮಕ್ಕಳಿಗೆ ಸಮವಸ್ತ್ರ ವಿತರಿಸಿದ್ದಾರೆ.

ಹಲಗೂರು ಹೋಬಳಿ ಬೆನಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಜ್ಞಾನಧಾರೆ ಟ್ರಸ್ಟ್ ಮಕ್ಕಳ ಮನೆ ಇಬ್ಬರು ಶಿಕ್ಷಕರಿಗೆ ಪ್ರತಿತಿಂಗಳ ವೇತನ ಹಾಗೂ ಕಲಿಕಾ ಸಾಮಗ್ರಿ ನೀಡಿದೆ. ಅಂತರವಳ್ಳಿ ಶಾಲೆಗೆ ಇದೇ ಗ್ರಾಮದ ಮಾರಗೌಡನಹಳ್ಳಿ ಪ್ರೌಢಶಾಲೆ ಮುಖ್ಯಶಿಕ್ಷಕ ಎ.ಎಸ್. ದೇವರಾಜು ಹಾಗೂ ಡಾ.ನಾಗೇಶ್ ಎಂಬುವವರು ಮಕ್ಕಳ ಮನೆ ಪ್ರಾರಂಭಿಸಲು ಸಹಕಾರ ನೀಡಿದ್ದು, 8 ಮಕ್ಕಳಿಂದ 50 ಮಕ್ಕಳು ಪ್ರವೇಶ ಪಡೆದಿವೆ. ಒಬ್ಬ ಶಿಕ್ಷಕರನ್ನು ನೇಮಿಸಿ ವೇತನ ನೀಡುತ್ತಿದ್ದಾರೆ. ಜೊತೆಗೆ ರಜಾದಿನಗಳಲ್ಲಿ ಬೇಸಿಗೆ ಸಂಭ್ರಮ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿತ್ತು.

ಕಿರುಗಾವಲು ಹೋಬಳಿ ಚಿಕ್ಕಮಾಳಿಗೆ ಕೊಪ್ಪಲು ಗ್ರಾಮದಲ್ಲಿ ಸರ್ಕಾರಿ ಶಾಲೆಗೆ 8 ಕೊಠಡಿ ನಿರ್ಮಾಣ, ಕಲಿಕಾ ಸಾಮಗ್ರಿ, ಕಂಪ್ಯೂಟರ್, ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಿಸಿದ್ದು ಎರಡು ವರ್ಷದ ಹಿಂದೆ 70 ಮಕ್ಕಳಿದ್ದು ಈ ವರ್ಷ 200 ಮಕ್ಕಳು ಪ್ರವೇಶ ಪಡೆದಿದ್ದಾರೆ. ಬೆಂಗಳೂರಿನ ಕ್ಯಾಪ್ಟನ್ ಲಿಂಗರಾಜು ಹಾಗೂ ಗ್ರಾಮದ ರಾಜಕೀಯ ಮುಖಂಡ ಚಿನ್ನಾಳು ಹಾಗೂ ಇತರರು ಸಹಕಾರ ನೀಡಿ ಮಾದರಿ ಶಾಲೆ ರೂಪಿಸಿದ್ದಾರೆ.

ಅನುಷಾ ಚಾರಿಟಬಲ್ ಟ್ರಸ್ಟ್ ಹಲವು ಶಾಲೆಗಳಿಗೆ ಕಲಿಕಾ ಸಾಮಗ್ರಿ ನೀಡುವುದರ ಜೊತೆಗೆ ಬಿ.ಜಿ.ಪುರ ಹೋಬಳಿಯ ಗ್ಗಲಿಪುರ, ಬಿ.ಜಿ.ಪುರ, ಬೆಳಕವಾಡಿ, ಹೊಸಹಳ್ಳಿ ಗ್ರಾಮದ ಸರ್ಕಾರಿ ಶಾಲೆಗಳಿಗೆ ಗಣಿತ, ಇಂಗ್ಲಿಷ್‌ ಶಿಕ್ಷಕರನ್ನು ಖಾಸಗಿಯಾಗಿನೇಮಿಸಿಕೊಂಡು ವೇತನ ನೀಡುವುದರ ಜೊತೆಗೆ ಉತ್ತಮ ಶಿಕ್ಷಕರನ್ನು ಗುರುತಿಸಿ ಸನ್ಮಾನ ಮಾಡುತ್ತಿದ್ದಾರೆ.

ಬಿ.ಜಿ.ಪುರ ಹೋಬಳಿಯ ಕಿರಗಸೂರು ಗ್ರಾಮದ ಸರ್ಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿ ಸಂಘದವತಿಯಿಂದ ಖಾಸಗಿಯಾಗಿ ಒಬ್ಬ ಶಿಕ್ಷಕಿ, ಒಬ್ಬ ಆಯಾ ನೇಮಿಸಿ ವೇತನ, ಓದಲು, ಊಟ ಮಾಡಲು ಮಕ್ಕಳಿಗೆ ರೌಂಡ್ ಟೇಬಲ್ ವ್ಯವಸ್ಥೆ ಮಾಡಿ ಗಮನ ಸೆಳೆಯಲಾಗಿದೆ. ಪಟ್ಟಣದ ಪಶ್ಚಿಮ ಬಡಾವಣೆಯ(ಕಾರ್ಖಾನೆ ಶಾಲೆ) ಸರ್ಕಾರಿ ಶಾಲೆಯಲ್ಲಿ ಮಕ್ಕಳ ಮನೆ ಪ್ರಾರಂಭಿಸಿದ್ದು ಕ್ಷೇತ್ರ ಸಮನ್ವಯಾಧಿಕಾರಿ ಯೋಗೇಶ್ ಅವರು ತಮ್ಮ ಪುತ್ರಿಯನ್ನು ಈ ಶಾಲೆಗೆ ಸೇರಿಸಿ ಗಮನ ಸೆಳೆದಿದ್ದಾರೆ.

ಮಿಕ್ಕೆರೆ, ನಿಡಘಟ್ಟ, ಆಲದಹಳ್ಳಿ, ಹುಸ್ಕೂರು, ವಡ್ಡರಹಳ್ಳಿ, ದಡದಪುರ, ಅಮೃತೇಶ್ವರನಹಳ್ಳಿ, ಚೆನ್ನಿಪುರ, ಕೂನನಕೊಪ್ಪಲು, ತಳಗವಾದಿ, ರಾಮಂದೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಉತ್ತಮ ಪ್ರಯತ್ನ ನಡೆಯುತ್ತಿದ್ದು ಶ್ಲಾಘನೀಯ.

ಪ್ರತಿಕ್ರಿಯಿಸಿ (+)