ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಕಚೇರಿ ಮೇಲೆ ಗುಜರಾತಿಗಳ ನಿಯಂತ್ರಣ: ಡಾ.ಎಚ್‌.ವಾಸು

ಕೆಪಿಸಿಸಿ ರೈತ ಸಮ್ಮೇಳನ; ಜನಶಕ್ತಿ ಸಂಘಟನೆ ಸಂಚಾಲಕ ಡಾ.ಎಚ್‌.ವಾಸು ಅಭಿಮತ
Last Updated 10 ಅಕ್ಟೋಬರ್ 2020, 19:45 IST
ಅಕ್ಷರ ಗಾತ್ರ

ಮಂಡ್ಯ: ಗುಜರಾತ್‌ ಮೂಲದ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಬಂಡವಾಳಶಾಹಿಗಳ ನಿಯಂತ್ರಣದಲ್ಲಿ ಪ್ರದಾನಮಂತ್ರಿ ಕಚೇರಿ ಸಿಕ್ಕಿಹಾಕಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ‘ನರೇಂದ್ರ ಮೋದಿ ವಿರುದ್ಧ ನಾವು ಭಾರತೀಯರು’ ಹೋರಾಟ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಘಟಕದ ಸಂಚಾಲಯ ಡಾ.ಎಚ್‌.ವಾಸು ಅಭಿಪ್ರಾಯ ಪಟ್ಟರು.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ವತಿಯಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ರೈತ ಸಮಾವೇಶದಲ್ಲಿ ಅವರು ಉಪನ್ಯಾಸ ನೀಡಿದರು.

‘2015ರಲ್ಲಿ ರಾಜ್ಯದ ವಿವಿಧೆಡೆ ರೇಷ್ಮೆಬೆಳೆಗಾರರು ಕೂಡ ಆತ್ಮಹತ್ಯೆ ಮಾಡಿಕೊಂಡರು. ಆ ವೇಳೆ ಚೀನಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ರೇಷ್ಮೆ ಆಮದು ಶುಲ್ಕವನ್ನು ಶೇ 3ಕ್ಕೆ ಇಳಿಸಿದರು. ಇದರ ಪರಿಣಾಮದಿಂದಾಗಿ ಬೆಳೆಗಾರರು ಪ್ರಾಣ ಅರ್ಪಣೆ ಮಾಡಬೇಕಾಯಿತು. ಬ್ರೆಜಿಲ್‌ ಸಕ್ಕರೆ ಆಮದು ಸುಂಕ ಕೂಡ ಕಡಿತಗೊಂಡ ಪರಿಣಾಮ ರೈತರು ಬೆಳೆ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದರು’ ಎಂದರು.

‘ಮೋದಿ ಅವರು ತಮ್ಮ ಆಪ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರೈತಪರ ಕಾಯ್ದೆಗಳಿಗೆ ತಿದ್ದುಪಡಿ ತರುವ ಕೆಲಸ ಮಾಡಿದ್ದಾರೆ. ಜಗತ್ತಿನಲ್ಲಿ ಉತ್ಪಾದನೆಯಾಗುವ ಶೇ 26ರಷ್ಟು ಖಾದ್ಯ ತೈಲ ಭಾರತಕ್ಕೆ ಆಮದಾಗುತ್ತದೆ. ಅದರಲ್ಲಿ ಶೇ 80ರಷ್ಟು ಆಮದನ್ನು ಮೋದಿ ಆಪ್ತವಲಯದ ಕಂಪನಿ ಮಾಡುತ್ತದೆ. ದೇಶದಲ್ಲಿ ತೊಗರಿ ಬೇಳೆಯ ಬೆಲೆ ಕೆ.ಜಿಗೆ ₹ 200ಕ್ಕೆ ತಲುಪಿದಾಗ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಲಕ್ಷಾಂತರ ಟನ್‌ ತೊಗರಿ ಸಂಗ್ರಹವಾಗಿತ್ತು. ಅದರ ಮೇಲೆ ಸರ್ಕಾರ ದಾಳಿ ಮಾಡಲೇ ಇಲ್ಲ’ ಎಂದು ಹೇಳಿದರು.

‘ರಾಜಸ್ಥಾನದ ನಂತರ ಕರ್ನಾಟಕ ರಾಜ್ಯ ಅತ್ಯಂತ ಬರಪೀಡಿತ ರಾಜ್ಯವಾಗಿದೆ. ಇಲ್ಲಿ ಸಣ್ಣ, ಅತೀ ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರೈತರ ಭೂಮಿಯನ್ನು ಗುಜರಾತಿಗಳಿಗೆ ನೀಡಲು ಮೋದಿ ಮುಂದಾಗಿದ್ದಾರೆ. ಬಡವರ ರಕ್ತ ಹೀರುವ ಬಂಡವಾಳಶಾಹಿಗಳು ಪ್ರಧಾನಮಂತ್ರಿಯ ಭುಜದ ಮೇಲೆ ಕೈ ಇಡುವ ಮಟ್ಟಕ್ಕೆ ಹೋಗಿದ್ದಾರೆ. ಶ್ರೀಮಂತರ ಚಕ್ರಾಧಿಪತ್ಯ ಸ್ಥಾಪಿಸಲು ಭೂಮಿ ಮತ್ತು ರೈತರನ್ನು ಶೋಷಣೆ ಮಾಡಲು ಮುಂದಾಗಿದ್ದಾರೆ’ ಎಂದರು.

‘ಶ್ರೀಮಂತರು 2ಜಿ, 3ಜಿ ಹೊಡೆದುಕೊಂಡಿದ್ದಾರೆ. ಈಗ ರೈತರ ಕೃಷಿ ಭೂಮಿ ಹೊಡೆದುಕೊಳ್ಳಲು ಮುಂದಾಗಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾಯ್ದೆಗಳಿಗೆ ತಿದ್ದುಪಡಿ ತರಲಾಗುತ್ತಿದೆ’ ಎಂದರು.

ವಿಜ್ಞಾನಿ ಡಾ.ಟಿ.ಎನ್‌.ಪ್ರಕಾಶ್‌ ಕಮ್ಮರಡಿ ಮಾತನಾಡಿ ‘ಮೋದಿ ಸರ್ಕಾರ ಕೇವಲ ಮೂರು ಕಾಯ್ದೆಗಳಿಗಷ್ಟೇ ತಿದ್ದುಪಡಿ ತಂದಿಲ್ಲ, ಮೊದಲೇ ಮತ್ತೆರಡು ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಸ್ಪರ್ಧಾತ್ಮಕವಾಗಿದ್ದ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ಮಾರುಕಟ್ಟೆ ವ್ಯವಸ್ಥೆಯನ್ನು ನಿರ್ನಾಮ ಮಾಡಲಾಗುತ್ತಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಅಗತ್ಯವಾಗಿದ್ದರೆ ಅದನ್ನು ಸದನಗಳಲ್ಲಿ ಚರ್ಚೆ ಮಾಡಬಹುದಾಗಿತ್ತು. ಸುಗ್ರೀವಾಜ್ಞೆ ತರುವ ಅಗತ್ಯ ಏನಿತ್ತು’ ಎಂದು ಪ್ರಶ್ನಿಸಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಬಂಧ ಹಾಳು ಮಾಡುವ ಯತ್ನ ಮಾಡಲಾಗುತ್ತಿದೆ. ಇದರ ವಿರುದ್ಧ ಈಗಾಗಲೇ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ. ಕೇಂದ್ರ, ರಾಜ್ಯ ಸರ್ಕಾರಗಳ ನಡೆಯಿಂದ ಮಿಶ್ರ ಆರ್ಥಿಕ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ. ಸೈದ್ಧಾಂತಿಕ, ತಾತ್ವಿಕ ಹೋರಾಟದ ಮೂಲಕ ಈ ತಿದ್ದುಪಡಿಗಳನ್ನು ಹಿಮ್ಮೆಟ್ಟಿಸಬೇಕಾಗಿದೆ. ಕಾಂಗ್ರೆಸ್‌ ಮುಂದೆ ಈಗ ಚರಿತ್ರೆ ನಿರ್ಮಿಸುವ ಅವಕಾಶವಿದೆ. ರಾಜಕೀಯ ಬಿಟ್ಟು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ ಕಿಸಾನ್‌ ಮೊರ್ಚಾ ಮುಖಂಡ ಸಚಿನ್‌ ಮಿಗಾ ಮಾತನಾಡಿ ‘ಭವಿಷ್ಯ ನಿಧಿ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಾಗ ಕಾರ್ಮಿಕರು ಬೆಂಗಳೂರಿನಲ್ಲಿ ದೊಡ್ಡ ಹೋರಾಟ ಮಾಡಿದರು. ಹೋರಾಟದ ಪರಿಣಾಮವಾಗಿ ಕೇಂದ್ರ ಸರ್ಕಾರ ತಿದ್ದುಪಡಿಯನ್ನು ವಾಪಸ್‌ ಪಡೆಯಿತು. ಅದೇ ಮಾದರಿಯಲ್ಲಿ ರೈತರು ಹೋರಾಟ ನಡೆಸಬೇಕು’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್‌ ವಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ, ಮುಖಂಡರಾದ ಧ್ರುವ ನಾರಾಯಣ್‌, ಸಲೀಂ ಅಹ್ಮದ್‌, ಈಶ್ವರ ಖಂಡ್ರೆ, ಎನ್‌.ಚಲುವರಾಯಸ್ವಾಮಿ, ನರೇಂದರಸ್ವಾಮಿ. ಪುಷ್ಪಾ ಅಮರ್‌ನಾಥ್‌ ಇದ್ದರು.

ಕಾಂಗ್ರೆಸ್‌ ಕೂಡ ತಪ್ಪು ಮಾಡಿದೆ

‘ಕಾಂಗ್ರೆಸ್‌ನ ರೈತಪರ ನಿಲುವನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಕಾಂಗ್ರೆಸ್ ಆಡಳಿತದಲ್ಲೂ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಈ ಕುರಿತು ಮುಖಂಡರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ’ ಎಂದು ಎಚ್‌.ವಾಸು ಹೇಳಿದರು.

ನಂತರ ಭಾಷಣಕ್ಕೆ ಬಂದ ಸಿದ್ದರಾಮಯ್ಯ, ಕೆ.ಎಚ್‌.ಮುನಿಯಪ್ಪ, ಎಸ್‌.ಆರ್‌.ಪಾಟೀಲ ಮುಂತಾದವರು ಈ ಮಾತನ್ನು ಒಪ್ಪಿದರು. ‘ಕಾಂಗ್ರೆಸ್‌ ಮಾಡಿದ್ದೆಲ್ಲವೂ ಸರಿ ಇತ್ತು ಎಂದು ಹೇಳಲು ಸಾಧ್ಯವಿಲ್ಲ. ನಾವೂ ತಪ್ಪು ಮಾಡಿದ್ದೇವೆ, ತಿದ್ದಿಕೊಂಡು ನಡೆದಿದ್ದೇವೆ’ ಎಂದು ಹೇಳಿದರು.

ಭೂಮಿ, ಬೆಳೆಗೆ ರಕ್ಷಣೆ ಇಲ್ಲ

ಶಾಸಕ ಕೃಷ್ಣ ಭೈರೇಗೌಡ ಮಾತನಾಡಿ ‘ಮೋದಿ ಸರ್ಕಾರ ರೈತರ ಭೂಮಿ ಹಾಗೂ ಬೆಳೆಯನ್ನು ಬಂಡವಾಳಶಾಹಿಗಳ ಕೈಗೆ ನೀಡಲು ಮುಂದಾಗಿದೆ. ಆ ಮೂಲಕ ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಯನ್ನು ಮೊದಲ ಸ್ಥಾನಕ್ಕೇರಿಸಲು ಯತ್ನಿಸುತ್ತಿದೆ’ ಎಂದು ಹೇಳಿದರು.

‘ಬಡಜನರು ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಇದ್ದರೆ ಶ್ರೀಮಂತರ ಆಸ್ತಿ ಬೆಳೆಯುತ್ತಾ ಹೋಗುತ್ತಿದೆ. ರೈತರ ಭೂಮಿಗೆ ರಕ್ಷಣೆ ಇಲ್ಲವಾಗಿದೆ. ಕಳೆದ 6 ವರ್ಷಗಳಿಂದ ವಿದ್ಯಾರ್ಥಿಗಳಿಗೆ, ಯುವಕರಿಗೆ ಮಹಿಳೆಯರಿಗೆ ಯಾವ ಅನುಕೂಲವೂ ಆಗಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಮಾಡಿದ ಕಾರ್ಮಿಕರಿಗೆ ಕೂಲಿ ನೀಡಲೂ ಸಾಧ್ಯವಾಗಿಲ್ಲ’ ಎಂದು ಆರೋಪಿಸಿದರು.

ವಾಗ್ಧಾನ ಮುರಿದ ಮೋದಿ

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಮಾತನಾಡಿ ‘ದೇಶದಲ್ಲಿ ಎಪಿಎಂಸಿಗಳೇ ಇಲ್ಲವಾದರೆ ರೈತರು ಬೆಳೆದ ಬೆಳೆ ಮಾರಾಟ ಮಾಡುವುದು ಎಲ್ಲಿ? ರೈತರನ್ನು ಕಾಪಾಡುತ್ತಿದ್ದ ಕನಿಷ್ಠ ಬೆಂಬಲ ಬೆಲೆಯನ್ನು ರದ್ದು ಮಾಡಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ’ ಎಂದರು.

‘ರೈತ ಬೆಳೆದ ಬೆಳೆಗೆ ಉತ್ಪಾದನಾ ವೆಚ್ಚದಲ್ಲಿ ಒಂದೂವರೆ ಪಟ್ಟು ಹೆಚ್ಚು ಬೆಲೆ ನೀಡುವ ಸ್ವಾಮಿನಾಥನ್‌ ವರದಿಯನ್ನು ಜಾರಿ ಮಾಡುವ ವಾಗ್ಧಾನದೊಂದಿಗೆ ಮೋದಿ ಪ್ರಧಾನ ಮಂತ್ರಿಯಾದರು. ಆದರೆ ಈಗ ವಾಗ್ಧಾನ ಮುರಿದು ರೈತರನ್ನು ಬೀದಿ ಪಾಲು ಮಾಡಲು ಹೊರಟಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT