ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಬ್ಬೆದ್ದು ನಾರುತ್ತಿದೆ ಗುತ್ತಲು ಕೆರೆ; ಯತ್ತಗದಹಳ್ಳಿ ಜನರಿಗೆ ರೋಗಭೀತಿ

ಮೂಗು ಮುಚ್ಚಿಕೊಂಡು ಓಡಾಡುತ್ತಿರುವ ಜನ
Published 4 ಏಪ್ರಿಲ್ 2024, 5:26 IST
Last Updated 4 ಏಪ್ರಿಲ್ 2024, 5:26 IST
ಅಕ್ಷರ ಗಾತ್ರ

ಮಂಡ್ಯ: ನಗರದ ಹೊರವಲಯದಲ್ಲಿರುವ ಗುತ್ತಲು ಕೆರೆ ದುರ್ವಾಸನೆಯಿಂದ ನಾರುತ್ತಿದ್ದು ಕೆರೆಗೆ ಹೊಂದಿಕೊಂಡಂತಿರುವ ನಗರದ ಬಡಾವಣೆಗಳು, ಸುತ್ತಮುತ್ತಲ ಹಳ್ಳಿಗಳ ಜನರಿಗೆ ರೋಗಭೀತಿ ಎದುರಾಗಿದೆ. ಅದರಲ್ಲೂ ಯತ್ತಗದಹಳ್ಳಿ ಗ್ರಾಮದಲ್ಲಿ ದುರ್ನಾತ ಮಿತಿಮೀರಿದ್ದು ಜನರು ಚರ್ಮದ ತುರಿಕೆಯಿಂದ ಬಳಲುತ್ತಿದ್ದಾರೆ.

ಯತ್ತಗದಹಳ್ಳಿ ಭಾಗದಲ್ಲಿ ಕೆರೆಯಲ್ಲಿ ಹೆಚ್ಚು ಕೊಳಚೆ ನೀರಿನ ಸಂಗ್ರಹವಿರುವ ಕಾರಣ ದುರ್ನಾತ ಇಲ್ಲಿಯೇ ಹೆಚ್ಚಾಗಿದೆ. ಕಲುಷಿತ ಗಾಳಿ ಬೀಸುತ್ತಿರುವ ಕಾರಣ ಕೆಮ್ಮು, ನೆಗಡಿ, ಶೀತಜ್ವರ ಮುಂತಾದ ಕಾಯಿಲೆಗಳಿಗೆ ಸ್ಥಳೀಯರು ತುತ್ತಾಗಿದ್ದಾರೆ. ದುರ್ವಾಸನೆ 3 ಕಿ.ಮೀ.ವರೆಗೂ ಬೀರುತ್ತಿದ್ದು ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

ಪ್ರತಿ ಬಾರಿ ಕೆರೆಗೆ ನಾಲೆ ನೀರು ಬರುತ್ತಿತ್ತು. ಇದರಿಂದ ಕಲುಷಿತ ನೀರಿನ ಪರಿಣಾಮ ಹೆಚ್ಚು ಕಂಡು ಬರುತ್ತಿರಲಿಲ್ಲ. ದುರ್ವಾಸನೆಯೂ ಇರುತ್ತಿರಲಿಲ್ಲ. ಆದರೆ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇರುವ ಕಾರಣ ಸದ್ಯ ನಾಲೆಗಳಿಗೆ ನೀರು ಬಿಟ್ಟಿಲ್ಲ. ನಗರದ ನೀರು ಹೆಚ್ಚಾಗಿ ಕೆರೆ ಸೇರುತ್ತಿದ್ದು ಇಡೀ ವಾತಾವರಣ ಕೊಳಚೆಯಂತಾಗಿದೆ.

ಕೆರೆಯಲ್ಲಿ ಬರೀ ಕೊಳಚೆ ನೀರು, ತ್ಯಾಜ್ಯವೇ ತುಂಬಿದ್ದು ಎಲ್ಲೆಡೆ ದುರ್ವಾಸನೆ ಹರಡಿದೆ. ಕಳೆದ ನಾಲ್ಕು ದಿನಗಳಿಂದೀಚೆಗೆ ಲಕ್ಷಾಂತರ ಮೀನುಗಳು ಸಾಯುತ್ತಿರುವ ಕಾರಣ ಮೀನುಗಾರಿಕೆ ಗುತ್ತಿಗೆ ಪಡೆದವರು ಕೆರೆಯಲ್ಲಿ ಬದುಕಿರುವ ಮೀನುಗಳನ್ನು ಹಿಡಿದುಕೊಂಡಿದ್ದಾರೆ. ಮೀನು ಹಿಡಿಯಲು ಕರೆಯ ಕೊಳಚೆಯನ್ನು ಕಲಕಿದ ಕಾರಣ ದುರ್ವಾಸನೆ ಇಮ್ಮಡಿಯಾಗಿದೆ.

ಅತ್ಯಂತ ಕೆಟ್ಟ ವಾಸನೆಯಿಂದ ಬೇಸತ್ತ ಜನರು ನಗರಸಭೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಲೋಕಸಭಾ ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದು ಜನರು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ. ಗುತ್ತಲು, ಆಲಹಳ್ಳಿ, ತಾವರಗೆರೆವರೆಗೂ ವಾಸನೆ ಹರಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

‘ಮನೆಯಿಂದ ಹೊರಬರಲು ಭಯವಾಗುತ್ತಿದೆ. ಬೇಸಿಗೆ ಶೆಖೆಯಲ್ಲಿ ಮನೆಯ ಕಿಟಕಿಯನ್ನೂ ತೆರೆಯಲು ಸಾಧ್ಯವಾಗದಷ್ಟು ಕೆಟ್ಟ ವಾಸನೆ ಕಾಡುತ್ತಿದೆ. ಇಂತಹ ಪರಿಸ್ಥಿತಿ ಯಾವಾಗಲು ಬಂದಿರಲಿಲ್ಲ’ ಎಂದು ಯತ್ತಗದಹಳ್ಳಿ ನಿವಾಸಿ ಪ್ರಾರ್ಥನಾ ಬೇಸರ ವ್ಯಕ್ತಪಡಿಸಿದರು.

ನೀರಿನ ಮಾದರಿ ಸಂಗ್ರಹ: ಜನರ ಒತ್ತಾಯದ ಮೇರೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ನೀರಿನ ಮಾದರಿ ಸಂಗ್ರಹಿಸಿದ್ದಾರೆ. ಯಾವ ಕಾರಣಕ್ಕೆ ಮೀನುಗಳು ಸತ್ತಿವೆ ಎಂಬುದನ್ನು ಪತ್ತೆಹಚ್ಚಲು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆದರೆ ದುರ್ವಾಸನೆ ಕಡಿಮೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸ್ಥಳೀಯರನ್ನು ಕಂಗೆಡಿಸಿದೆ.

‘ಇದೇ ಮೊದಲ ಬಾರಿಗೆ ಇಷ್ಟೊಂದು ಕೆಟ್ಟ ದುರ್ನಾತ ಮೂಗಿಗೆ ಬಡಿಯುತ್ತಿದೆ. ಜನರು ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ. ವಾಸನ ನಿಯಂತ್ರಿಸಲು ಕಡೇ ಪಕ್ಷ ರಾಸಾಯನಿಕಗಳನ್ನು ಸಿಂಪಡಣೆ ಮಾಡಬೇಕು, ಅಧಿಕಾರಿಗಳಿಂದ ಅದೂ ಸಾಧ್ಯವಾಗಿಲ್ಲ’ ಎಂದು ಯತ್ತಗದಹಳ್ಳಿಯ ಸಂಜಯ್‌ ಬೇಸರ ವ್ಯಕ್ತಪಡಿಸಿದರು.

‘ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ಈ ಕುರಿತು ಪರಿಶೀಲನೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ಕುಡಿಯುವ ನೀರೂ ಕಲುಷಿತ
ಗುತ್ತಲು ಕೆರೆ ನೀರು ಕಲುಷಿತಗೊಂಡಿರುವ ಕಾರಣ ಅಕ್ಕಪಕ್ಕದ ಪ್ರದೇಶಗಳಲ್ಲಿ ಅಂತರ್ಜಲ ಕೂಡ ಕಲುಷಿತಗೊಂಡಿದೆ. ಸ್ಥಳೀಯ ಕೊಳವೆ ಬಾವಿಗಳಲ್ಲಿ ಬರುತ್ತಿರುವ ನೀರಿನಲ್ಲಿ ವಾಸನೆ ಬರುತ್ತಿದ್ದು ಜನರು ಆ ನೀರು ಕುಡಿಯುವುದನ್ನು ಸ್ಥಗಿತಗೊಳಿಸಿದ್ದಾರೆ. ‘ಬೋರ್‌ವೆಲ್‌ನಲ್ಲಿ ಬರುತ್ತಿರುವ ಕುಡಿಯುವ ನೀರು ಯೋಗ್ಯವಾಗಿಲ್ಲ. ಹೀಗಾಗಿ ನಾವು ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಫಿಲ್ಟರ್‌ ನೀರು ತಂದು ಕುಡಿಯುತ್ತಿದ್ದೇವೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಯತ್ತಗದಹಳ್ಳಿಯ ಕುಮಾರ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT