ಪೀಹಳ್ಳಿ: ಹೆಜ್ಜೇನು ದಾಳಿಗೆ ಶವ ಬಿಟ್ಟು ಕಾಲ್ಕಿತ್ತ ಜನರು

ಶನಿವಾರ, ಮೇ 25, 2019
28 °C
ಇಬ್ಬರು ಅಸ್ವಸ್ಥ; ಐದೂವರೆ ಗಂಟೆ ಅನಾಥವಾಗಿ ಬಿದ್ದ ಶವ

ಪೀಹಳ್ಳಿ: ಹೆಜ್ಜೇನು ದಾಳಿಗೆ ಶವ ಬಿಟ್ಟು ಕಾಲ್ಕಿತ್ತ ಜನರು

Published:
Updated:
Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಪೀಹಳ್ಳಿ ಗ್ರಾಮದಲ್ಲಿ, ದೊಳ್ಳಯ್ಯ (85) ಎಂಬುವವರ ಶವ ಸಂಸ್ಕಾರದ ವೇಳೆ ಶುಕ್ರವಾರ ಹೆಜ್ಜೇನು ದಾಳಿ ನಡೆಸಿದೆ. ಜೇನುಗಳ ಅನಿರೀಕ್ಷಿತ ದಾಳಿಯಿಂದ, ಶವ ಸಂಸ್ಕಾರಕ್ಕೆ ಬಂದಿದ್ದ ನೂರಾರು ಮಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಶವವನ್ನು ಸ್ಥಳದಲ್ಲೇ ಬಿಟ್ಟು ಓಡಿಹೋಗಿದ್ದಾರೆ. ಇದರಿಂದಾಗಿ, ಮಧ್ಯಾಹ್ನ 12ರಿಂದ ಸಂಜೆ 5.30ರವರೆಗೆ ಉಂತೂರಮ್ಮ ದೇವಾಲಯದ ಬಳಿ ದೊಳ್ಳಯ್ಯ ಅವರ ಶವ ಅನಾಥವಾಗಿ ಬಿದ್ದಿತ್ತು.

ಶವದ ಬಳಿ ಬರಲು ಬಂಧುಗಳು ಯತ್ನಿಸುತ್ತಿದ್ದರೂ ಜೇನುನೊಣಗಳು ದಾಳಿ ಮಾಡುತ್ತಲೇ ಇದ್ದವು. ಶವಕ್ಕೂ ಮುತ್ತಿಕೊಂಡಿದ್ದವು. ಹೀಗಾಗಿ, ಅಲ್ಲಿಂದ ಪರ್ಲಾಂಗು ದೂರದಲ್ಲಿ ಜನರು ಕಾದು ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಜೇನುದಾಳಿಯಿಂದ, ದೊಳ್ಳಯ್ಯ ಅವರ ಮೊಮ್ಮಗಳು ನಿರ್ಮಲಾ ಮತ್ತು ಅದೇ ಗ್ರಾಮದ ಸ್ವಾಮಿ ಅಸ್ವಸ್ಥಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಉಂತೂರಮ್ಮ ದೇವಾಲಯದ ಅರ್ಚಕರಾಗಿದ್ದ ದೊಳ್ಳಯ್ಯ ಗುರುವಾರ ಸಂಜೆ ನಿಧನರಾಗಿದ್ದರು. ಅವರ ಇಚ್ಛೆಯಂತೆ ದೇವಾಲಯದ ಪಕ್ಕದಲ್ಲೇ ಶವ ಸಂಸ್ಕಾರ ನಡೆಸಲು ದೊಳ್ಳಯ್ಯ ಅವರ ಬಂಧುಗಳು ಗುಂಡಿ ತೆಗೆದು ಸಿದ್ಧತೆ ಮಾಡಿಕೊಂಡಿದ್ದರು. ಶವವನ್ನು ಶುಕ್ರವಾರ ದೇವಾಲಯದ ಬಳಿ ತರುವಷ್ಟರಲ್ಲಿ ಹೆಜ್ಜೇನು ದಾಳಿ ಆರಂಭಿಸಿದವು.

 ಸಂಜೆ ಆರೂವರೆ ವೇಳೆಗೆ, ಕೆಲವರು ಬೆಡ್‌ಶೀಟ್‌ ಹೊದ್ದುಕೊಂಡು ವೃದ್ಧನ ಅಂತ್ಯಸಂಸ್ಕಾರ ನೆರವೇರಿಸಿದರು. ಉಳಿದವರು ದೂರದಲ್ಲಿಯೇ ನಿಂತಿದ್ದರು.

ಶವ ಸಂಸ್ಕಾರಕ್ಕೆ ಸಮಸ್ಯೆ:ಪೀಹಳ್ಳಿ ಕೆರೆ ಅಂಗಳದಲ್ಲಿ ಸವರ್ಣೀಯರು ಮತ್ತು ದಲಿತರ ಸ್ಮಶಾನಕ್ಕೆ ತಲಾ ಒಂದೊಂದು ಎಕರೆ ಜಾಗವನ್ನು ತಾಲ್ಲೂಕು ಆಡಳಿತ ಮೀಸಲಿಟ್ಟಿದೆ. ಇದಾಗಿ ಐದು ವರ್ಷಗಳು ಕಳೆದರೂ ಸ್ಮಶಾನ ಅಭಿವೃದ್ಧಿಯಾಗಿಲ್ಲ. ಸ್ಮಶಾನದ ಜಾಗದಲ್ಲಿ ನೀರು ತುಂಬಿಕೊಳ್ಳುತ್ತದೆ. ಗ್ರಾಮದಲ್ಲಿ ಜಮೀನುರಹಿತರು ಶವ ಸಂಸ್ಕಾರ ಮಾಡಲು ಪರದಾಡುತ್ತಿದ್ದಾರೆ ಎಂದು ಪೀಹಳ್ಳಿ ಗ್ರಾಮದ ತಾಲ್ಲೂಕು ಬಿಜೆಪಿ ಘಟಕದ ಉಪಾಧ್ಯಕ್ಷ ಎಸ್. ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !