ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್‌ ಕಡ್ಡಾಯ: 20ಕ್ಕೂ ಹೆಚ್ಚು ಕಡೆ ತಪಾಸಣೆ

ಒಂದು ದಿನದ ಕಾರ್ಯಾಚರಣೆಗೆ ಜನರಿಂದ ಆಕ್ಷೇಪ, ನಿಯಮದ ನಿರಂತರ ಅನುಷ್ಠಾನ ಏಕಿಲ್ಲ?
Last Updated 31 ಮಾರ್ಚ್ 2021, 12:25 IST
ಅಕ್ಷರ ಗಾತ್ರ

ಮಂಡ್ಯ: ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸುವ ಉದ್ದೇಶದಿಂದ ಪೊಲೀಸ್‌ ಇಲಾಖೆ ಮಂಡ್ಯ ಉಪ ವಿಭಾಗ ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿತು. ನಗರದ 20ಕ್ಕೂ ಹೆಚ್ಚುಕಡೆ ತಪಾಸಣೆ ನಡೆಸಿದ ಪೊಲೀಸರು ಹೆಲ್ಮೆಟ್‌ ಧರಿಸದ ಸವಾರರಿಗೆ ದಂಡ ವಿಧಿಸಿದರು.

ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಸಂಜೆ 4.30ರಿಂದ 6.30ರವರೆಗೆ ಕಾರ್ಯಾಚರಣೆ ನಡೆಸಿದರು. ನಗರದ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್‌ ಸಿಬ್ಬಂದಿಯ ತಂಡ ತಪಾಸಣೆ ನಡೆಸುತ್ತಿರುವುದನ್ನು ಕಂಡು ವಾಹನ ಸವಾರರು ಬೆಚ್ಚಿ ಬಿದ್ದರು. ಒಂದೇ ರಸ್ತೆಯಲ್ಲಿ 2–3 ಕಡೆ ತಪಾಸಣೆ ಮಾಡುತ್ತಿದ್ದ ಕಾರಣ ಜನರು ತಪ್ಪಿಸಿಕೊಂಡು ತೆರಳಲು ಸಾಧ್ಯವಾಗಲಿಲ್ಲ.

ನಗರದಲ್ಲಿ ಎಂದೂ ಕಂಡರಿಯದ ಸ್ಥಿತಿ ನಿರ್ಮಾಣವಾಗಿತ್ತು. ಒಂದು ತಂಡದಲ್ಲಿ ಐದಾರು ಪೊಲೀಸರು ಹೆಲ್ಮೆಟ್‌ ಧರಿಸದ ಸವಾರರಿಗಾಗಿ ಕಾದು ನಿಂತಿದ್ದರು. ನಗರದ 17 ಕಡೆ ತಪಾಸಣೆ ನಡೆಸುವುದಾಗಿ ಮಂಡ್ಯ ಉಪವಿಭಾಗದಿಂದ ಆದೇಶ ಹೊರಡಿಸಲಾಗಿತ್ತು. ಆದರೆ ಪೊಲೀಸರು 20ಕ್ಕೂ ಹೆಚ್ಚು ಕಡೆ ಪರಿಶೀಲನೆ ನಡೆಸುತ್ತಿರುವುದು ಕಂಡು ಬಂತು.

ನಗರದಲ್ಲಿ ಬಹುತೇಕ ಮಂದಿ ಹೆಲ್ಮೆಟ್‌ ಧರಿಸದೇ ಓಡಾಡುವುದು ಸಾಮಾನ್ಯವಾಗಿತ್ತು. ಪೊಲೀಸರು ಹೆಲ್ಮೆಟ್‌ ತಪಾಸಣೆ ಮಾಡಿದರೂ ಎಲ್ಲೋ ಒಂದೆರಡು ಕಡೆ ಮಾತ್ರ ನಡೆಸುತ್ತಿದ್ದರು. ಅದು ನಿರಂತರವಾಗಿರಲಿಲ್ಲ. ಆದರೆ ಮಂಗಳವಾರ ಒಂದೇ ದಿನ ಬೆಳ್ಳಂಬೆಳಿಗ್ಗೆ ವಿವಿಧೆಡೆ ತಪಾಸಣೆ ಮಾಡುತ್ತಿರುವುದನ್ನು ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸಿದರು. ಕೆಲವರು ಆಕ್ಷೇಪ ವ್ಯಕ್ತಪಡಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಕೇವಲ ಒಂದು ದಿನ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಕೆಲ ಸಾರ್ವಜನಿಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ನಿಯಮ ಅನುಷ್ಠಾನವನ್ನು ನಿರಂತರವಾಗಿ ನಡೆಸದ ಕಾರಣ ಜನರು ಹೆಲ್ಮೆಟ್‌ ಧರಿಸುತ್ತಿಲ್ಲ. ಕೇವಲ ಒಂದು ದಿನದಲ್ಲಿ ಕಾರ್ಯಾಚರಣೆ ಮಾಡುವ ಮೂಲಕ ನಿಯಮ ಅನುಷ್ಠಾನ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

‘ಅಮಾವಾಸ್ಯೆ, ಹುಣ್ಣಿಮೆಗೆ ಹೆಲ್ಮೆಟ್‌ ತಪಾಸಣೆ ಮಾಡುವುದನ್ನು ಬಹಳ ವರ್ಷಗಳಿಂದ ನೋಡುತ್ತಿದ್ದೇವೆ. ಕೆಲ ದಿನಗಳ ನಂತರ ಹೆಲ್ಮೆಟ್‌ ತಪಾಸಣೆ ನಿಂತು ಹೋಗುತ್ತದೆ. ನಿಯಮವನ್ನು ನಿರಂತರವಾಗಿ ಅನುಷ್ಠಾನಕ್ಕೆ ತರಲು ಪೊಲೀಸರು ವಿಫಲರಾಗಿದ್ಧಾರೆ’ ಎಂದು ಪೇಟೆಬೀದಿಯ ವರ್ತಕರೊಬ್ಬರು ಆರೋಪಿಸಿದರು.

‘ಮೈಸೂರು, ಬೆಂಗಳೂರಿನಲ್ಲಿ ಜನರು ಹೆಲ್ಮೆಟ್‌ ಧರಿಸುತ್ತಾರೆ. ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಮಂಡ್ಯದಲ್ಲೂ ಧರಿಸುತ್ತಾರೆ. ಸಮರ್ಪಕವಾಗಿ ಜಾರಿಗೊಳಿಸದ ಕಾರಣ ಜನರು ನಿರ್ಲಕ್ಷ್ಯ ವಹಿಸಿದ್ದಾರೆ. ದಂಡ ಸಂಗ್ರಹಕ್ಕೆ ಮಾತ್ರ ಇಂತಹ ಕಾರ್ಯಾಚರಣೆ ನಡೆಸುತ್ತಾರೆ’ ಎಂದು ಕಲ್ಲಹಳ್ಳಿಯ ಶಿವಕುಮಾರ್‌ ಆರೋಪಿಸಿದರು.

ಜಾಗೃತಿ ಕಾರ್ಯಕ್ರಮ: ‘ಮಂಗಳವಾರ ಕೈಗೊಳ್ಳಲಾದ ವಿಶೇಷ ತಪಾಸಣೆ ದಂಡ ವಿಧಿಸುವ ಉದ್ದೇಶದಿಂದ ನಡೆಸಿದ ಕಾರ್ಯಾಚರಣೆಯಲ್ಲ. ಕೆಲ ಸವಾರರು ಹೆಲ್ಮೆಟ್‌ ಇದ್ದರೂ ಧರಿಸಿರಲಿಲ್ಲ. ಮನೆಯಿಂದ ಹೆಲ್ಮೆಟ್‌ ತರಿಸಿಕೊಂಡು ಧರಿಸಿವರಿಗೆ, ಹೆಲ್ಮೆಟ್‌ ಖರೀದಿಸಿದವರಿಗೆ ದಂಡ ವಿಧಿಸಿಲ್ಲ. ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಯಿತು’ ಎಂದು ಎಎಸ್‌ಪಿ ಧನಂಜಯ ತಿಳಿಸಿದರು.

ಮಂಡ್ಯ ಜನಕ್ಕೆ ಟ್ರಾಫಿಕ್‌ ಪ್ರಜ್ಞೆ ಇಲ್ಲವೇ?

‘ಮಂಡ್ಯ ಜನರಿಗೆ ಟ್ರಾಫಿಕ್‌ ಪ್ರಜ್ಞೆಯೇ ಇಲ್ಲ, ಇಲ್ಲಿ ಹೆಲ್ಮೆಟ್‌ ಕಡ್ಡಾಯ ನಿಯಮ ಜಾರಿಗೊಳಿಸುವುದು ಕಷ್ಟ’ ಎಂಬುದು ಪೊಲೀಸರ ಸಾಮಾನ್ಯ ಅಭಿಪ್ರಾಯವಾಗಿದೆ. ಆದರೆ ಈ ಅಭಿಪ್ರಾಯವನ್ನು ಅಲ್ಲಗಳೆಯುವ ಜನರು, ಮಂಡ್ಯ ಜನ, ಮೈಸೂರು ಜನ ಎಂಬು ಜನರಲ್ಲಿ ವಿಂಗಡಣೆ ಮಾಡುವುದು ಸರಿಯಲ್ಲ. ಕಟ್ಟುನಿಟ್ಟಾಗಿ ನಿಯಮ ಜಾರಿಗೊಳಿಸಿದರೆ ಖಂಡಿತಾ ನಿಯಮ ಪಾಲನೆ ಮಾಡುತ್ತಾರೆ ಎನ್ನುತ್ತಾರೆ.

‘ಮಂಗಳವಾರದ ಕಾರ್ಯಾಚರಣೆ ಯಶಸ್ವಿಯಾಗಿದೆ. ಬೆಳಿಗ್ಗೆ ತಪಾಸಣೆ ನಡೆಸಿದ ಫಲವಾಗಿ ಸಂಜೆಯ ವೇಳೆಗೆ ಶೇ 60 ಮಂದಿ ಹೆಲ್ಮೆಟ್‌ ಧರಿಸಿದ್ದರು’ ಎಂದು ಡಿವೈಎಸ್‌ಪಿ ಟಿ.ಮಂಜುನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT