ಭಾನುವಾರ, ಜನವರಿ 16, 2022
28 °C

ಮಂಡ್ಯ: ನಿರಂತರ ಮಳೆಗೆ ಕುಸಿದ ಐತಿಹಾಸಿಕ ಜನಾರ್ಧನ ದೇಗುಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆ.ಆರ್‌.ಪೇಟೆ ತಾಲ್ಲೂಕು, ಕಿಕ್ಕೇರಿಯ ಐತಿಹಾಸಿಕ ಜನಾರ್ಧನ ದೇಗುಲದ ಗೋಡೆ ಕುಸಿದಿದೆ.

ಹೊಯ್ಸಳರ ಕಾಲದ ದೇಗುಲದ ಗೋಡೆಗಳ ಮೇಲೆ ಸುಂದರ ಕೆತ್ತನೆಯ ಮೂರ್ತಿಗಳಿದ್ದವು. ಗೋಡೆ ಕುಸಿದ ಕಾರಣ ಶಿಲ್ಪಕಲಾ ಮೂರ್ತಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಪಂಜರ ಕೋಷ್ಟಕದಲ್ಲಿದ್ದ ನರಸಿಂಹ, ಗೋಪಾಲಕೃಷ್ಣ, ಮಹಿಷಮರ್ಧಿನಿ, ಕಾಳಿಂಗ ಮರ್ಧನ, ಯೋಗನರಸಿಂಹ, ವಿಷ್ಣು, ಶಿವ, ಗಣೇಶ ಮೂರ್ತಿಗಳು ಹಾಳಾಗಿವೆ.

ಈ ದೇಗುಲದಲ್ಲಿದ್ದ ಜನಾರ್ಧನ ಮೂರ್ತಿ ನ್ಯೂಯಾರ್ಕ್‌ ಮ್ಯೂಸಿಯಂನಲ್ಲಿದ್ದು ಅದನ್ನು ವಾಪಸ್‌ ತರುವ ಪ್ರಯತ್ನಗಳು ನಡೆದಿದ್ದವು. ಶಿಥಿಲಾವಸ್ಥೆಯಲ್ಲಿದ್ದ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಬೇಕು ಎಂದು ಹಲವು ವರ್ಷಗಳಿಂದಲೂ ಸ್ಥಳೀಯರು ಒತ್ತಾಯಿಸುತ್ತಿದ್ದರು.

‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಐತಿಹಾಸಿಕ ಸ್ಮಾರಕ, ಸುಂದರ ಕೆತ್ತನೆ ಶಿಲ್ಪಕಲೆಗಳು ಹಾಳಾಗಿವೆ. ಸರಿಯಾದ ಸಮಯದಲ್ಲಿ ಜೀರ್ಣೋದ್ಧಾರ ಮಾಡಿದ್ದರೆ ದೇಗುಲ ಬೀಳುತ್ತಿರಲಿಲ್ಲ’ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್‌ನಿಲ್ದಾಣ ಜಲಾವೃತ: ಭಾರಿ ಮಳೆಯಿಂದಾಗಿ ಬುಧವಾರ ರಾತ್ರಿ ಕೆ.ಆರ್‌.ಪೇಟೆ ಬಸ್‌ ನಿಲ್ದಾಣ ಜಲಾವೃತಗೊಂಡಿತ್ತು. ಇಳಿಜಾರಿನ ಪ್ರದೇಶದಲ್ಲಿರುವ ನಿಲ್ದಾಣ ತಿಂಗಳಿಂದೀಚೆಗೆ ಎರಡು ಬಾರಿ ಜಲಾವೃತಗೊಂಡಿದೆ. ನಾಗಮಂಗಲ, ಶ್ರೀರಂಗಪಟ್ಟ, ಮದ್ದೂರು ತಾಲ್ಲೂಕಿನಲ್ಲೂ ಜಿಟಿಜಿಟಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು