ಬುಧವಾರ, ಜೂನ್ 16, 2021
28 °C
ಶ್ರಮಿಕರ ಸೂರಿನ ಕನಸಿಗೆ ತಣ್ಣೀರು ಎರಚಿದ ಮಂಡಳಿ, ಹಣ ನೀಡಲು ನಗರಸಭೆಯೂ ನಕಾರ

ಮಂಡ್ಯ: ಫಲಾನುಭವಿಗಳ ವಂತಿಕೆ ಪಾವತಿಸಲು ಕೊಳಚೆ ನಿರ್ಮೂಲನ ಮಂಡಳಿ ನೋಟಿಸ್‌

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ರೋಗಭೀತಿಯಲ್ಲಿ ಬದುಕುತ್ತಿರುವ ಹಾಲಹಳ್ಳಿ ಕೊಳೆಗೇರಿ ನಿವಾಸಿಗಳು ಹೊಸ ಮನೆಗೆ ತೆರಳಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಮನೆಗಳ ಹಂಚಿಕೆಗೂ ಮೊದಲು ‘ಫಲಾನುಭವಿಗಳ ವಂತಿಕೆ’ ಪಾವತಿಸುವಂತೆ ಕೊಳಚೆ ನಿರ್ಮೂಲನಾ ಮಂಡಳಿ ನೋಟಿಸ್‌ ನೀಡಿದ್ದು ಬಡಜನರ ಸೂರಿನ ಕನಸಿಗೆ ಮಂಡಳಿ ತಣ್ಣೀರು ಎರಚಿದೆ.

ಈಗಾಗಲೇ ಪೂರ್ಣಗೊಂಡಿರುವ 632 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಬಹುದಾಗಿದೆ. ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡು ವರ್ಷ ಕಳೆದರೂ ಮನೆ ಹಂಚಿಕೆಗೆ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಮಳೆ, ರಾಜ ಜಾಲುವೆಯ ಕೊಳಚೆ ನೀರು, ಸೊಳ್ಳೆ, ಹಾವುಗಳ ಕಾಟದ ನಡುವೆ ರೋಗಭೀತಿಯಲ್ಲಿ ಬದುಕುತ್ತಿರುವ ಶ್ರಮಿಕರು ಮನೆ ಕೊಡುವಂತೆ ಅಧಿಕಾರಿಗಳ ಮುಂದೆ ಮೊರೆ ಇಡುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಮಂಡಳಿ ಅಧಿಕಾರಿಗಳು ಫಲಾನುಭವಿಗಳ ವಂತಿಕೆ ಪಾವತಿ ಮಾಡಲು ಕೊಳಗೇರಿ ನಿವಾಸಿಗಳಿಗೆ ನೋಟಿಸ್‌ ನೀಡಿ ಮನೆಗಳ ಮುಂದೆ ಪ್ರತಿಯನ್ನು ಅಂಟಿಸಿದ್ದಾರೆ. ಪ್ರತಿ ಮನೆಗೆ ಖರ್ಚಾಗಿರುವ ಒಟ್ಟು ವೆಚ್ಚದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪ ಸಂಖ್ಯಾತ ನಿವಾಸಿಗಳು ಶೇ 10ರಷ್ಟು, ಇತರರು ಶೇ 25ರಷ್ಟು ಪಾವತಿಸಬೇಕು ಎಂದು ನೋಟಿಸ್‌ನಲ್ಲಿ ಅಧಿಕಾರಿಗಳು ಸೂಚಿಸಿದ್ದಾರೆ.

ಪ್ರತಿ ಮನೆ ನಿರ್ಮಾಣಕ್ಕೆ ₹ 4.30 ಲಕ್ಷ ಖರ್ಚಾಗಿದೆ. ಅದರಲ್ಲಿ ಶೇ 10ರಷ್ಟು ಎಂದರೆ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ₹ 50 ಸಾವಿರ, ಇತರರಿಗೆ ₹ 1.30 ಲಕ್ಷ ಫಲಾನುಭವಿಗಳ ವಂತಿಕೆ ಪಾವತಿ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಕೋವಿಡ್‌ ಸಂಕಷ್ಟ ಸಮಯದಲ್ಲಿ ಇಷ್ಟೊಂದು ಹಣ ಪಾವತಿಸಲು ನಿರಾಕರಿಸಿರುವ ಕೊಳೆಗೇರಿ ನಿವಾಸಿಗಳು ಮಂಡಳಿ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

‘ಕೋವಿಡ್‌ ಅವಧಿಯಲ್ಲಿ ಎರಡು ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ. ಇಂತಹ ಸಂದರ್ಭದಲ್ಲಿ ವಂತಿಕೆ ಕೊಡಿ ಎಂದರೆ ಎಲ್ಲಿಂದ ಹಣ ತರುವುದು? ಇಷ್ಟೊಂದು ಹಣ ಪಾವತಿಸಬೇಕು ಎಂಬ ವಿಚಾರವನ್ನು ಮೊದಲು ಹೇಳಿರಲಿಲ್ಲ. ನಮ್ಮಿಂದ ಹಣ ಕೇಳುವುದಾದರೆ ನಮಗೆ ಮನೆಗಳೇ ಬೇಡ. ಇರುವ ಗುಡಿಸಲುಗಳಿಗೇ ಸೌಲಭ್ಯ ಕರುಣಿಸಿ’ ಎಂದು ಬಡಾವಣೆಯ ನಿವಾಸಿ ಪ್ರಶಾಂತ್‌ ಒತ್ತಾಯಿಸಿದರು.

ನಗರಸಭೆ ಪಾವತಿಸಬೇಕು: ಹಾಲಹಳ್ಳಿ ಕೊಳೆಗೇರಿಯಲ್ಲಿ ಬದುಕುತ್ತಿರುವ ಬಹುತೇಕ ನಿವಾಸಿಗಳು ಪೌರ ಕಾರ್ಮಿಕರು, ಗಾರೆ ಕೆಲಸದವರೇ ಇದ್ದಾರೆ. ಮನೆಗಳ ನಿರ್ಮಾಣಕ್ಕೆ ಪಾವತಿಸಬೇಕಾದ ಫಲಾನುಭವಿ ವಂತಿಕೆಯನ್ನು ನಗರಸಭೆ ಭರಿಸಬೇಕು ಎಂಬ ನಿಯಮದೊಂದಿಗೆ ಯೋಜನೆ ರೂಪಿಸಲಾಗಿತ್ತು. ನಗರಸಭೆಗೆ ಬರುವ ಅನುದಾನದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯವರಿಗೆ ಮೀಸಲಿಟ್ಟ ಹಣವನ್ನು ಇದಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿತ್ತು.

ಆದರೆ ಈಗ ಫಲಾನುಭವಿ ವಂತಿಕೆ ಪಾವತಿ ಮಾಡಲು ನಗರಸಭೆ ನಿರಾಕರಣೆ ಮಾಡಿದ್ದು ವಂತಿಕೆ ಪಾವತಿಯನ್ನು ಫಲಾನುಭವಿಗಳ ಮೇಲೆ ಹೊರಿಸಲಾಗಿದೆ. ‘ವಂತಿಕೆ ಪಾವತಿಸುವಂತೆ ನಗರಸಭೆಗೆ ಪತ್ರ ಬರೆದಿದ್ದೆವು. ಆದರೆ ಅಲ್ಲಿ ಹಣ ಇಲ್ಲ ಎಂಬ ಉತ್ತರ ಬಂದ ಕಾರಣ ವಂತಿಕೆ ಪಾವತಿಸಲು ಫಲಾನುಭವಿಗಳಿಗೆ ನೋಟಿಸ್‌ ನೀಡಲಾಗಿದೆ’ ಎಂದು ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಮಚಂದ್ರ ಹೇಳಿದರು.

‘ಸರ್ಕಾರದ ಯಾವುದೇ ವಸತಿ ಯೋಜನೆಯಲ್ಲಿ ಮನೆಗಳನ್ನು ಉಚಿತವಾಗಿ ನೀಡಲು ಬರುವುದಿಲ್ಲ. ಫಲಾನುಭವಿಗಳಿಂದಲೂ ವಂತಿಕೆ ವಸೂಲಿ ಮಾಡಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.

ಅಂಬರೀಷ್‌ ಮಾತಿಗೆ ಎಳ್ಳುನೀರು

‘ಹಾಲಹಳ್ಳಿ ಕೊಳೆಗೇರಿ ಮನೆ ನಿರ್ಮಾಣ ಯೋಜನೆ ಅಂಬರೀಷ್‌ ಅವರ ಕನಸಿನ ಕೂಸು. ಅವರು ಬದುಕಿದ್ದಾಗ, ಫಲಾನುಭವಿಗಳಿಂದ ಒಂದು ರೂಪಾಯಿ ವಂತಿಕೆ ಪಡೆಯದೇ ಉಚಿತವಾಗಿ ಮನೆ ಹಂಚಿಕೆ ಮಾಡುವುದಾಗಿ ಎಂದು ಮಾತು ಕೊಟ್ಟಿದ್ದರು. ಆದರೆ ಈಗ ಅಧಿಕಾರಿಗಳು ಅವರ ಮಾತಿಗೆ ಎಳ್ಳುನೀರು ಬಿಟ್ಟಿದ್ದಾರೆ’ ಎಂದು ಕೊಳೆಗೇರಿ ನಿವಾಸಿ ಬಾಬು ಆರೋಪಿಸಿದರು.

‘ಐದು ವರ್ಷಗಳ ಹಿಂದೆಯೇ ಮುಗಿಯಬೇಕಾದ ಕಾಮಗಾರಿಯನ್ನು ಅನಾವಶ್ಯಕವಾಗಿ ಇಲ್ಲಿಯವರೆಗೂ ಎಳೆದು ತರಲಾಗಿದೆ. ಇದರಿಂದ ಕಾಮಗಾರಿ ವೆಚ್ಚವೂ ಹೆಚ್ಚಾಯಿತು. ಆ ವೆಚ್ಚವನ್ನು ಫಲಾನುಭವಿಗಳ ಮೇಲೆ ಹಾಕುವುದು ಸರಿಯಲ್ಲ. ಮನೆ ಹಂಚಿಕೆ ಮಾಡದಿದ್ದರೂ ಸರಿ, ನಾವು ವಂತಿಕೆ ಪಾವತಿ ಮಾಡುವುದಿಲ್ಲ’ ಎಂದು ಅವರು ಹೇಳಿದರು.

'ಚಿಕ್ಕಮಂಡ್ಯ, ಹಾಲಹಳ್ಳಿ ಸೇರಿ 1 ಸಾವಿರ ಮನೆಗಳಿಗೆ ಎಸ್‌ಸಿ,ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ನಿಧಿಯಲ್ಲಿ ₹ 41 ಕೋಟಿ ಹಣವನ್ನು ಈಗಾಗಲೇ ಪಾವತಿಸಿದ್ದೇವೆ. ಇನ್ನಷ್ಟು ಪಾವತಿಸಲು ನಗರಸಭೆಯಲ್ಲಿ ಹಣ ಇಲ್ಲ' ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಎಸ್.ಲೋಕೇಶ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು