ನರೇಗಾ ಕೂಲಿಕಾರರಿಗೆ ಗುರುತಿನ ಚೀಟಿ

ಮಳವಳ್ಳಿ: ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಕಾರ್ಮಿಕರಿಗೆ ಇತರ ಉದ್ಯೋಗಿಗಳಂತೆ ಪ್ರತ್ಯೇಕ ಗುರುತಿನ ಚೀಟಿ ನೀಡುವ ಮೂಲಕ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯಿತಿಯ ನರೇಗಾ ಕಾಯಕ ಬಂಧು ಚುಂಚಯ್ಯ ಗಮನ ಸೆಳೆದಿದ್ದಾರೆ.
ತಾಲ್ಲೂಕಿನ ಬಂಡೂರು ಗ್ರಾಮದ ವ್ಯಾಪ್ತಿಯ ಕಲ್ಲಾರೆಪುರ ಗ್ರಾಮದ ನಿವಾಸಿ ಎಂ.ಎ ಪದವೀಧರ ಚುಂಚಯ್ಯ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೋವಿಡ್ ಮತ್ತು ಲಾಕ್‌ಡೌನ್ ಸಮಯದಲ್ಲಿ ಅವರು ನರೇಗಾ ಯೋಜನೆಯನ್ನು ಆಯ್ಕೆಮಾಡಿಕೊಂಡು ಅದರಲ್ಲಿ ಕಾಯಕ ಬಂಧುವಾಗಿ ಕೆಲಸ ಮಾಡುತ್ತಿದ್ದಾರೆ.
ಕೂಲಿಕಾರರಿಗೂ ಗುರುತಿನ ಚೀಟಿ ನೀಡುವ ಆಲೋಚನೆಯಲ್ಲಿ ಚುಂಚಯ್ಯ ಅವರು ಸ್ಥಳೀಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ್ ಅವರ ಸಹಾಯದಿಂದ 40 ಮಂದಿಗೆ ಗುರುತಿನ ಚೀಟಿ ನೀಡಿದ್ದಾರೆ. ಕೂಲಿಕಾರರಿಗೆ ದಾನಿಗಳ ಸಹಾಯದಿಂದ ಮಧ್ಯಾಹ್ನದ ವೇಳೆ ಬಿಸ್ಕೆಟ್ ಹಾಗೂ ತಂಪುಪಾನೀಯ ವ್ಯವಸ್ಥೆ ಮಾಡುತ್ತಿದ್ದಾರೆ.
ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು ಗುರುತಿನ ಚೀಟಿ ಹೊಂದಿದ್ದು, ಕೃಷಿ ಕೂಲಿಕಾರರಿಗೆ ಗುರುತಿನ ಚೀಟಿ ನೀಡುತ್ತಿರುವುದು ವಿಶಿಷ್ಟ ಪರಿಕಲ್ಪನೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಇದನ್ನು
ಜಾರಿಗೆ ತರುವ ಉದ್ದೇಶ ಇದೆ ಎಂದು ಅಭಿವೃದ್ಧಿ ಅಧಿಕಾರಿ ಕುಮಾರ್ ತಿಳಿಸಿದರು.
ಕೃಷಿ ಕೂಲಿಕಾರರನ್ನು ಇತರ ಉದ್ಯೋಗಿಗಳಂತೆ ಪರಿಗಣಿಸಬೇಕು. ಅಲ್ಲದೆ, ಉತ್ತಮ ಕೂಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರ ರಾಜ್ಯ ಮಟ್ಟದ ಪ್ರಶಸ್ತಿ ನೀಡಬೇಕು ಎಂದು ಕಾಯಕ ಬಂಧು ಚುಂಚಯ್ಯ ಒತ್ತಾಯಿಸಿದರು.
ಗ್ರಾಮದಲ್ಲಿ ಸ್ವಚ್ಛತಾ ಕಾರ್ಯದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಗ್ರಾ.ಪಂ.ಉಪಾಧ್ಯಕ್ಷ ರಮೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.