ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಗೆದ್ದೆರೆ ಮಂಡ್ಯಕ್ಕೆ ಅತೀ ಹೆಚ್ಚು ಅನುದಾನ: ಸಚಿವ ಕೆ.ಎಸ್‌.ಈಶ್ವರಪ್ಪ

Last Updated 21 ನವೆಂಬರ್ 2021, 14:30 IST
ಅಕ್ಷರ ಗಾತ್ರ

ಮಂಡ್ಯ: ‘ವಿಧಾನ ಪರಿಷತ್ ಚುನಾವಣೆಯಲ್ಲೂ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಬೇಕಿದೆ. ಈ ಬಾರಿ ಬಿಜೆಪಿಯನ್ನು ಗೆಲ್ಲಿಸಿಕೊಟ್ಟರೆ ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಅನುದಾನವನ್ನು ಮಂಡ್ಯ ಜಿಲ್ಲೆಗೆ ನೀಡಲಾಗುವುದು, ಈ ಕುರಿತು ಪ್ರಮಾಣ ಮಾಡುತ್ತೇನೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದ ಎ.ಸಿ.ಮಾದೇಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆದ ಜನ ಸ್ವರಾಜ್‌ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಈ ಬಾರಿ ನಾವು ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲದೊಂದಿಗೆ 900ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆದ್ದಿದ್ದಾರೆ ಎಂಬುದು ಸಂತಸ ಪಡುವಂತಹ ವಿಚಾರ’ ಎಂದರು.

‘ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರೂ ಈ ಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಬೇಕು. ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಇತಿಹಾಸ ನಿರ್ಮಾಣವಾಗಿದೆ. ವಿಧಾನ ಪರಿಷತ್‌ನಲ್ಲೂ ನಮ್ಮ ಅಭ್ಯರ್ಥಿ ಆಯ್ಕೆಯಾದರೆ ಜಿಲ್ಲೆಗೆ ಅನುದಾನ ಹರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿವೆ. ಅದಕ್ಕೆ ಬೂಕಹಳ್ಳಿ ಮಂಜು ಕೈಜೋಡಿಸಲಿದ್ದಾರೆ’ ಎಂದರು.

‘ನರೇಂದ್ರ ಮೋದಿ ಅವರು ಪ್ರಧಾನಿಯಾಗುವವರೆಗೆ ನಮ್ಮ ದೇಶದಲ್ಲಿ ಕೇವಲ 3 ಕೋಟಿ ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕವಿತ್ತು. ಆದರೆ ಅವರು ಪ್ರಧಾನಿಯಾದ ನಂತರ ಕೇವಲ 7 ವರ್ಷಗಳಲ್ಲಿ 8.50 ಕೋಟಿ ಮನೆಗಳಿಗೆ ನಲ್ಲಿ ನೀರು ಕೊಟ್ಟಿದ್ದಾರೆ. ಕೋವಿಡ್‌ ನಿರ್ಮೂಲನೆಗಾಗಿ ಲಸಿಕೆ ನೀಡುವಲ್ಲಿ ಭಾರತ ಪ್ರಪಂಚದಲ್ಲೇ ನಂಬರ್‌ ಒನ್‌ ಆಗಿದೆ, ಭಾರತದಲ್ಲಿ ಕರ್ನಾಟಕ ರಾಜ್ಯ 1ನೇ ಸ್ಥಾನ ಪಡೆದಿದೆ’ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ‘ಜೆಡಿಎಸ್‌ ಅಭ್ಯರ್ಥಿ ಎನ್‌.ಅಪ್ಪಾಜಿಗೌಡ ಅವರನ್ನುವಿಧಾನ ಪರಿಷತ್‌ನಲ್ಲಿ ಹುಡುಕಬೇಕಾಗಿತ್ತು. ಕಳೆದ 5 ವರ್ಷಗಳಿಂದ ಗ್ರಾಮ ಪಂಚಾಯಿತಿಗಳ ಬಗ್ಗೆ ಧ್ವನಿ ಎತ್ತಿಲ್ಲ. ನಮ್ಮ ಅಭ್ಯರ್ಥಿ ಮಂಜಣ್ಣ ಅವರು ಈಗಾಗಲೇ ನಾಲ್ಕೈದು ಬಾರಿ ಮತದಾರರ ಮನೆಗಳಿಗೆ ಭೇಟಿ ನೀಡಿದ್ದಾರೆ, ಅಂಥವರನ್ನು ಗೆಲ್ಲಿಸಿ ಕಳುಹಿಸಿ. ಈ ಸಭೆಗೆ ಬಂದವರೆಲ್ಲರೂ ಇತರ ಸದಸ್ಯರ ಕೈಕಾಲು ಹಿಡಿದು ವೋಟು ಹಾಕಿಸಬೇಕು’ ಎಂದರು.

‘ಕಾಂಗ್ರೆಸ್‌ ಅಭ್ಯರ್ಥಿ ನಮ್ಮ ಪಕ್ಷದ ಸಚಿವ ಸೋಮಶೇಖರ್‌ ಅವರ ಬಳಿಯೇ ಇದ್ದರು. ಅವರಿಗೆ ಪಕ್ಷ ನಿಷ್ಠೆಯೂ ಇಲ್ಲ, ವ್ಯಕ್ತಿ ನಿಷ್ಠೆಯೂ ಇಲ್ಲ. ಪಕ್ಷ ನಿಷ್ಠೆ ಇದ್ದಿದ್ದರೆ ಅವರು ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ. ವ್ಯಕ್ತಿ ನಿಷ್ಠೆ ಇದ್ದಿದ್ದರೆ ಸೋಮಶೇಖರ್‌ ಅವರನ್ನು ಬಿಟ್ಟು ಹೋಗುತ್ತಿರಲಿಲ್ಲ. ಅವರು ಅವಕಾಶವಾದಿಯಾಗಿದ್ದು ಅಂಥವರನ್ನು ಹತ್ತಿರವೂ ಸೇರಿಸಬಾರದು’ ಎಂದರು.

ಮೀನಾಗಾರಿಕೆ ಮತ್ತು ಬಂದರು ಇಲಾಖೆ ಸಚಿವ ಅಂಗಾರ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ. ಕಳೆದ 7 ವರ್ಷಗಳಿಂದ ಅವರು ಮಾಡಿರುವ ಸಾಧನೆಗಳು ನಮ್ಮ ಕಣ್ಣ ಮುಂದಿವೆ. ಈ ವಿಧಾನ ಪರಿಷತ್‌ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿ ಸ್ಪರ್ಧಿಸಿದ್ದು, ಎಲ್ಲರ ಬೆಂಬಲ ಅವರಿಗೆ ದೊರೆಯಬೇಕು’ ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜೆ.ವಿಜಯ್‌ ಕುಮಾರ್‌, ಮುಖಂಡರಾದ ಸೋಮಶೇಖರ್‌, ಮೈ.ವಿ.ರವಿಶಂಕರ್‌, ಶಂಕರಪ್ಪ, ಸಿದ್ದರಾಮಯ್ಯ, ನಂಜುಂಡೇಗೌಡ, ಸಿ.ಪಿ.ಉಮೇಶ್‌ ಇದ್ದರು.

ಪರಿಷತ್‌ಗೆ ಬಾರದ ಸದಸ್ಯ: ಆರೋಪ

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿ ‘ನಾನು ಹಲವು ಬಾರಿ ವಿಧಾನ ಪರಿಷತ್‌ಗೆ ತೆರಳಿದ್ದೇನೆ. ಆದರೆ ಒಮ್ಮೆಯೂ ಜೆಡಿಎಸ್‌ ಅಭ್ಯರ್ಥಿ ಸದನಕ್ಕೆ ಬಂದಿಲ್ಲ. ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿಲ್ಲ’ ಎಂದು ಆರೋಪಿಸಿದರು.

‘ಯಾರ ಮನೆ ಸೈಟ್‌ ಕೊಡುತ್ತಾರೆ, ಯಾರು ಜಮೀನು ಮಾರುತ್ತಾರೆ, ಮನೆ ಮಾರುತ್ತಾರೆ ಎನ್ನುವುದನ್ನೇ ನೋಡುವ ಅವರನ್ನು ಮತ್ತೆ ಗೆಲ್ಲಿಸಬೇಕಾ’ ಎಂದು ಪ್ರಶ್ನಿಸಿದರು.

‘ನಮ್ಮ ಪಕ್ಷದ ಹಿರಿಯರೊಬ್ಬರ ಮಾತಿಗೆ ಕಟ್ಟುಬಿದ್ದು ನಾನು ದಿನೇಶ್‌ ಗೂಳಿಗೌಡರಿಗೆ ವಿಶೇಷಾಧಿಕಾರಿ ಹುದ್ದೆ ನೀಡಿದ್ದೆ. ಈಗ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ, ಆ ಬಗ್ಗೆ ನನಗೆ ಮುನ್ಸೂಚನೆ ಇರಲಿಲ್ಲ. ಈಗ ಅವರ ನೇಮಕಾತಿಯನ್ನು ರದ್ದು ಮಾಡಲಾಗಿದೆ’ ಎಂದರು.

‘ಮನ್‌ಮುಲ್‌ನಲ್ಲಿ ಹಾಲಿಗೆ ನೀರು ಬೆರೆಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಿಐಡಿ ವರದಿ ಶೀಘ್ರ ಬರಲಿದ್ದು ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಾಗುವುದು’ ಎಂದರು.

ಮನೆಮನೆಯಲ್ಲಿ ಉತ್ತಮ ಸ್ಪಂದನೆ

ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಮಾತನಾಡಿ ‘ನಾವು ಈಗಾಗಲೇ ಗ್ರಾಮ ಪಂಚಾಯಿತಿ ಸದಸ್ಯರ ಮನೆಗಳಿಗೆ ನಾಲ್ಕೈದು ಬಾರಿ ಭೇಟಿ ನೀಡಿದ್ದೇವೆ. ಜನರು ಅತೀವ ಪ್ರೀತಿ ತೋರಿಸುತ್ತಿದ್ದು ನನಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

‘ನಾನು ಬಿಜೆಪಿ ಕೆ.ಆರ್‌.ಪೇಟೆ ತಾಲ್ಲೂಕು ಘಟಕದ ಅಧ್ಯಕ್ಷನಾಗಿದ್ದಾಗ ಪಕ್ಷ ಸಂಘಟನೆಯ ಪಣ ತೊಟ್ಟಿದ್ದೆ. ಅದರಂತೆ ನನ್ನ ಅಧ್ಯಕ್ಷತೆಯಲ್ಲಿ ನಾರಾಯಣಗೌಡರು ಗೆದ್ದು ಬಂದರು. ಅವರ ನೇತೃತ್ವದಲ್ಲಿ ಈ ಚುನಾವಣೆ ನಡೆಯುತ್ತಿದ್ದು ನನಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT