ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈತಿಕ ಚಟುವಟಿಕೆಯ ತಾಣವಾದ ಉದ್ಯಾನ

ಕೆರೆ ಪಕ್ಕದಲ್ಲೇ ಇದ್ದರೂ ಗಿಡಗಳಿಗೆ ನೀರಿಲ್ಲ; ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ, ಜನರ ಹಿಡಿಶಾಪ
Last Updated 5 ಏಪ್ರಿಲ್ 2021, 2:53 IST
ಅಕ್ಷರ ಗಾತ್ರ

ಮಳವಳ್ಳಿ: ಪಟ್ಟಣದ ದೊಡ್ಡಕೆರೆಯಲ್ಲಿ ನೀರು ಉಂಟು, ಕೆರೆಗೆ ಹೊಂದಿಕೊಂಡಂತಿ ರುವ ಉದ್ಯಾನದ ಗಿಡಗಳಿಗೆ ನೀರಿಲ್ಲ. ಶೌಚಾಲಯ ಉಂಟು, ಬಳಸುವುದಕ್ಕೆ ಆಗುವುದಿಲ್ಲ. ಕಾರಂಜಿಯೂ ಇದೆ. ಆದರೆ ನೀರು ಚಿಮ್ಮುತ್ತಿಲ್ಲ. ವಾಕಿಂಗ್ ಟ್ರ್ಯಾಕ್ ಇದ್ದರೂ ಓಡಾಡಲು ಸಾಧ್ಯವಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿ...

ಇದು ಪಟ್ಟಣದ ಹೃದಯ ಭಾಗದಲ್ಲಿ ರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್‌ನ ದುಸ್ಥಿತಿಯಾಗಿದ್ದು, ಕೋಟ್ಯಂ ತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಪಾರ್ಕ್‌ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪುರಸಭೆಯವರು ನಿರ್ವಹಣೆ ಮಾಡುತ್ತಾರೆ ಎಂಬ ಕಾರಣಕ್ಕೆ ನಿರ್ಮಾಣವಾದ ಪಾರ್ಕ್‌ಅನ್ನು ವಹಿಸಿ ಕೊಳ್ಳದೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೆಯೇ ಬಿಟ್ಟಿದ್ದಾರೆ. ಇದರಿಂದಾಗಿ ಇಬ್ಬರ ಜಗಳದಲ್ಲಿ ಕೂಸು ಬಡವಾದಂತಾಗಿದೆ.

ಈ ಉದ್ಯಾನ ಎನ್‌ಇಎಸ್‌ ಬಡಾವಣೆ, ಕೋಟೆ ಬೀದಿ, ಗಂಗಾಮತ ಬೀದಿಗೆ ಸಮೀಪವಾಗಿದ್ದು, ನಿವಾಸಿಗಳಿಗೆ ವಾಯು ವಿಹಾರಕ್ಕೆ ಹೇಳಿ ಮಾಡಿಸಿದಂತಿದ್ದು, ಉಪ ಯೋಗ ಆಗವಹುದು ಎಂದು ಭಾವಿಸಿ ದ್ದರು. ಉದ್ಘಾಟನೆಗೊಂಡ ಪ್ರಾರಂಭದಲ್ಲಿ ಹಲವು ಆಕರ್ಷಣೆಗಳ ಮೂಲಕ ತನ್ನತ್ತ ಸೆಳೆಯುತ್ತಿದ್ದ ಉದ್ಯಾನ ಇಂದು ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮದ್ದೂರು ಕಡೆಯಿಂದ ಪಟ್ಟಣಕ್ಕೆ ಪ್ರವೇಶಿಸಿದಂತೆಯೇ ಎಡಗಡೆಗೆ ಹಸಿರು ತುಂಬಿದ ನೂರಾರು ಎಕರೆ ಕೃಷಿ ಪ್ರದೇಶ, ಬಲಗಡೆಗೆ ಕಣ್ಣು ಹಾಯಿಸಿದರೆ ಕಾಣುವುದು ದೊಡ್ಡಕೆರೆಯ ಪಕ್ಕದಲ್ಲಿ ಇರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್. ವಾಯುವಿಹಾರದ ತಾಣವಾಗುವ ಬದಲು ಪಾಳು ಕೊಂಪೆ ಯಾಗಿ ಪುಂಡ ಪೋಕರಿಗಳ ತಾಣ ವಾಗುತ್ತಿದೆ. ಸರಿಯಾದ ನಿರ್ವಹಣೆ ಯಿಲ್ಲದೆ ನಡುಗಡ್ಡೆಯ ಹುಲ್ಲು ಹಾಸಿನ ಸ್ಥಿತಿ ಇದರ ನಿರ್ವಹಣೆಗೆ ಹಿಡಿದ ಕೈಗನ್ನಡಿಯಾಗಿದೆ.

ಕೆರೆಯು ಪಟ್ಟಣಕ್ಕೆ ಹೊಂದುಕೊಂ ಡಂತಿದ್ದರೂ 2016ಕ್ಕಿಂತ ಮೊದಲು ಕೆರೆಯ ಅಕ್ಕಪಕ್ಕ ಮಲ-ಮೂತ್ರ ವಿಸರ್ಜನೆ ಸಾಮಾನ್ಯವಾಗಿತ್ತು. ಸಾರ್ವಜನಿಕರು ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಕಾವೇರಿ ನೀರಾವರಿ ನಿಗಮದ ಮೂಲಕ ₹ 5 ಕೋಟಿ ವೆಚ್ಚದಲ್ಲಿ ಕೆರೆ ಹೂಳೆತ್ತುವ ಜೊತೆಗೆ ಕೆರೆಯ ದಂಡೆಯಲ್ಲಿ ವಾಕಿಂಗ್ ಟ್ರ್ಯಾಕ್, ಮಧ್ಯಭಾಗದಲ್ಲಿ ನಡುಗಡ್ಡೆ ಯಂಥ ಉದ್ಯಾನ ನಿರ್ಮಾಣ ಮಾಡ
ಲಾಯಿತು. ನಿರ್ಮಾಣವಾದ ನಂತರ ನಿರ್ವಹಣೆಯ ಹೊಣೆಯನ್ನು ಕಾವೇರಿ ನೀರಾವರಿ ನಿಗಮಕ್ಕೆ ನೀಡಲಾಗಿತ್ತು.

ಪ್ರಾರಂಭದಲ್ಲಿ ನಿಗಮ ಅಭಿವೃದ್ಧಿ ಮಾಡಿ ಪಟ್ಟಣದ ಜನರನ್ನು ಪಾರ್ಕ್‌ನತ್ತ ಸೆಳೆಯುವಲ್ಲಿ ಯಶಸ್ವಿಯೂ ಆಗಿತ್ತು. ಆದರೆ, ಇದು ಬಹುಕಾಲ ಉಳಿಯಲಿಲ್ಲ. ಮತ್ತೆ ಹಳೇ ಸ್ಥಿತಿಗೆ ಪಾರ್ಕ್‌ ಮರಳಿತು. ವಾಯುವಿಹಾರಿಗಳನ್ನು ನಿರ್ವಹಿಸಲು ಕುಟುಂಬವೊಂದನ್ನು ನೇಮಿಸಲಾಗಿತ್ತು. ಒಂದೆರಡು ವರ್ಷಗಳ ಕಾಲ ವಾಯು
ವಿಹಾರ ಕೇಂದ್ರ ಅಚ್ಚುಕಟ್ಟಾಗಿತ್ತು. ಅಲ್ಲದೆ ನಿತ್ಯ ನೂರಾರು ಮಂದಿಯ ವಾಯು ವಿಹಾರ ತಾಣವಾಗಿತ್ತು. ಬೆಳಿಗ್ಗೆ-ಸಂಜೆ ಜನ–ಜಂಗುಳಿಯಿಂದ ಗಿಜಿಗುಡುತ್ತಿತ್ತು.

ಆದರೆ, ನಿರ್ವಹಣೆಯ ಕೆಲಸದಲ್ಲಿ ಪ್ರಾಮಾಣಿಕವಾಗಿದ್ದ ಕುಟುಂಬಕ್ಕೆ ಸಂಬಳ ಕೊಡದೆ ಕಿರುಕುಳ ನೀಡಿ ಕೆಲಸದಿಂದ ತೆಗೆದು ಹಾಕಲಾಗಿದೆ ಎನ್ನಲಾಗಿದ್ದು, ವಾಯುವಿಹಾರ ತಾಣ ಪುಂಡಪೋಕರಿಗಳ ತಾಣವಾಗಿ ಬದಲಾಗುತ್ತಿದೆ. ಎರಡು ಬದಿಯಲ್ಲೂ ಬೆಳೆಸಿದ್ದ ಗಿಡಗಳೆಲ್ಲಾ ಬಹುತೇಕ ಒಣಗಿ ಹೋಗಿದ್ದರೆ, ಗಿಡ-ಗಂಟಿಗಳು ಬೆಳೆದು ಅಂದಗೆಡಿಸಿದೆ.

‘ನಿತ್ಯದ ಒತ್ತಡದ ಬದುಕಿನ ಜಂಜಾಟದಿಂದ ಬೇಸತ್ತ ಜನರು ವಾರದ ಬಿಡುವಿನ ವೇಳೆ ತಮ್ಮ ಮಕ್ಕಳೊಂದಿಗೆ ಒಂದಷ್ಟು ಸಮಯ ಖುಷಿಯಿಂದ ಕಳೆಯಲು ಪಾರ್ಕ್‌ಗೆ ಬರುತ್ತಾರೆ. ಮಳೆಗಾಲವಲ್ಲದ ಕಾರಣ ಈ ಸಂಖ್ಯೆ ಹೆಚ್ಚಾಬೇಕಿತ್ತು. ಆದರೆ, ನೆಮ್ಮದಿ ಅರಸಿ ಬರುವ ಜನರಿಗೆ ಪಾರ್ಕ್‌ ಅವ್ಯವಸ್ಥೆ ಕಿರಿಕಿರಿ ಉಂಟು ಮಾಡುತ್ತಿದೆ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸುಮಾರು 3 ಕಿ.ಮೀ ವ್ಯಾಪ್ತಿಯ ವಾಕಿಂಗ್ ಟ್ರ್ಯಾಕ್‌ನ ಎರಡೂ ಬದಿಯಲ್ಲಿ ವರ್ಷಗಳ ಹಿಂದೆ ಹಸಿರು ತೋರಣ, ಪಕ್ಷಿಗಳ ಚಿಲಿಪಿಲಿ ಸದ್ದು, ಹಸಿರು ತೋರಣದ ಮಧ್ಯೆ ಕುಣಿದು ಕುಪ್ಪಳಿಸುತ್ತಿರುವ ಚಿಣ್ಣರು, ನೆಮ್ಮದಿಯಲ್ಲಿ ಕಾಲದೂಡುತ್ತಿದ್ದ ವಯೋವೃದ್ಧರಿಗೆ ಅನುಕೂಲವಾಗಬೇಕಿದ್ದ ಪಾರ್ಕ್‌
ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಮರ ಗಿಡಗಳೆಲ್ಲ ನೀರಿಲ್ಲದೇ ಒಣಗಿ ನಿಂತಿದ್ದರೆ, ನೆಲಹಾಸಿಗೆ ಹಾಕಿದ್ದ ಸಿಮೆಂಟ್ ಟೈಲ್ಸ್, ಎರಡು ಬದಿಯ ಸಿಮೆಂಟ್ ತಡೆಗೋಡೆಗಳೆಲ್ಲಾ ಕಿತ್ತು ಹೋಗಿವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರಿ ಯೋಜನೆಗಳು ಹೇಗೆ ಹಳ್ಳ ಹಿಡಿಯುತ್ತದೆ ಎಂಬುವುದಕ್ಕೆ ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣವಾಗಿರುವ ಪಾರ್ಕ್‌ನ ದುಸ್ಥಿತಿಯೇ ಉತ್ತಮ ನಿದರ್ಶನವಾಗಿದೆ ಎನ್ನುತ್ತಾರೆ ಸ್ಥಳೀಯರು.

ಇದಲ್ಲದೆ ಪಟ್ಟಣದ ಎನ್‌ಇಎಸ್‌ ಬಡಾವಣೆಯಲ್ಲಿ ಎರಡು ಪಾರ್ಕ್‌ಗಳಿದ್ದು, ಅದರಲ್ಲಿ ಒಂದು ಪಾರ್ಕ್‌ ಅನ್ನು ಕ್ಷೇಮಾಭಿವೃದ್ಧಿ ಸಂಘದ ಮೂಲಕ ನಿರ್ವಹಣೆ ಮಾಡ ಲಾಗುತ್ತಿದೆ. ಗಿಡಗಳು ಅಚ್ಚ ಹಸಿರಾಗಿದ್ದು, ಸುಂದರವಾಗಿದೆ. ಆದರೆ ಪಾರ್ಕ್‌ನಲ್ಲಿ ಅಳವಡಿಸಿದ್ದ ಜೋಕಾಲಿ ಸೇರಿದಂತೆ ವಿವಿಧ ಆಟಿಕೆಗಳು ಮುರಿದು ಬಿದ್ದಿದ್ದು, ಮಕ್ಕಳಿಗೆ ಬೇಸರ ಮೂಡಿಸಿದೆ.

ಇನ್ನೊಂದು ಉದ್ಯಾನದಲ್ಲಿ ಯಕ್ಕದ ಗಿಡಗಳಿದ್ದು, ಟ್ರ್ಯಾಕ್‌ ಒಂದಿದೆ. ಆದರೆ, ವಾಯು ವಿಹಾರಕ್ಕೆ ಸಮರ್ಪಕವಾಗಿಲ್ಲ. ಇರುವುದರಲ್ಲಿ ಅಂಬೇಡ್ಕರ್‌ ಭವನದ ಪಕ್ಕದಲ್ಲಿನ ಉದ್ಯಾನ ಚೆನ್ನಾಗಿದ್ದು, ಅದೇ ರೀತಿ ನಗರದ ಇತರ ಉದ್ಯಾನಗಳನ್ನೂ ನಿರ್ವಹಣೆ ಮಾಡಬೇಕು ಎಂಬುದು ಪಟ್ಟಣದ ಜನರ ಆಗ್ರಹವಾಗಿದೆ.

ಭದ್ರತೆ ಇಲ್ಲ; ಭಯದ ಪರಿಸ್ಥಿತಿ

ನಾಲ್ವಡಿ ಪಾರ್ಕ್‌ಗೆ ಪ್ರವೇಶ ನೀಡುವ ಮುಖ್ಯದ್ವಾರ (ಪಟ್ಟಲದಮ್ಮ ದೇವಸ್ಥಾನ)ದ ಬಳಿ ಗೇಟ್ ಮಾತ್ರ ತೆರೆದಿರುತ್ತದೆ. ಮತ್ತೊಂದು ಗೇಟ್ ಮದ್ದೂರು ರಸ್ತೆಯ ಪೆಟ್ರೋಲ್ ಬಂಕ್ ಎದುರುಗಡೆ ಇದೆ. ಮೂರನೇ ಗೇಟ್ (ಕೆ.ಎಸ್.ಆರ್.ಟಿ.ಸಿ ತರಬೇತಿ ಕೇಂದ್ರದ ಹಿಂಭಾಗ) ಇದೆ. ಈ ಗೇಟ್ ತೆರೆಯದ ಕಾರಣ ಕಿಡಿಗೇಡಿಗಳು ಪರ್ಯಾಯ ಮಾರ್ಗ ನಿರ್ಮಾಣ ಮಾಡಿಕೊಂಡಿದ್ದು, ಯಾರು ಬೇಕಾದರೂ ಒಳ ಬರುವ, ಹೊರ ಹೋಗುವ ವ್ಯವಸ್ಥೆ ಮಾಡಿಕೊಂಡಿದ್ದಾರೆ, ಭಯದ ವಾತಾವರಣವಿದೆ. ಇದರಿಂದಾಗಿ ಅನೈತಿಕ ಚಟುವಟಿಕೆ ನಡೆಸಲು ಅನುಕೂಲವಾಗಿದೆ. ಹೀಗಾಗಿ ಭದ್ರತೆ ಇಲ್ಲದ ವಾಯುವಿಹಾರ ಧಾಮಕ್ಕೆ ವಾಕಿಂಗ್ ಬರುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಸಾರ್ವಜನಿಕ ಶೌಚಾಲಯಕ್ಕೆ ಬೀಗ

ನಾಲ್ವಡಿ ಕೃಷ್ಣರಾಜ ಒಡೆಯರ್‌ ಪಾರ್ಕ್‌ನಲ್ಲಿ ಶೌಚಾಲಯ ಉದ್ಘಾಟನೆಯಾದರೂ ಒಂದು ದಿನವೂ ಅದು ಸಾರ್ವಜನಿಕರ ಬಳಕೆಗೆ ಸಿಕ್ಕಲ್ಲ. ಎಲ್ಲಾ ಸಮಯದಲ್ಲೂ ಬೀಗ ಹಾಕಿರುತ್ತದೆ. ವಯೋವೃದ್ಧರು ಇದರಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಅವ್ಯವಸ್ಥೆಯ ಕಾರಣದಿಂದಾಗಿ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT