ಸೋಮವಾರ, ಜನವರಿ 27, 2020
22 °C
ಪಾದಚಾರಿ ಮಾರ್ಗ ಆವರಿಸಿಕೊಂಡ ವ್ಯಾಪಾರಿಗಳು, ಟ್ರಾಫಿಕ್‌ ಕಿರಿಕಿರಿಗೆ ಬೇಸತ್ತ ಸಾರ್ವಜನಿಕರು

ಮಂಡ್ಯ: ಎಲ್ಲೆಂದರಲ್ಲಿ ತಲೆ ಎತ್ತಿದ ಅನಧಿಕೃತ ಮಾರುಕಟ್ಟೆಗಳು

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ನಗರದ ತರಕಾರಿ ಮಾರುಕಟ್ಟೆ ಕಿರಿದಾಗಿರುವ ಪರಿಣಾಮ ನಗರದಾದ್ಯಂತ ಎಲ್ಲೆಂದರಲ್ಲಿ ಅನಧಿಕೃತ ಮಾರುಕಟ್ಟೆಗಳು ತಲೆ ಎತ್ತಿವೆ. ರಸ್ತೆಗಳ ಪಾದಚಾರಿ ಮಾರ್ಗಗಳೇ ಕಿರು ಮಾರುಕಟ್ಟೆಗಳಾಗಿದ್ದು, ಜನರು ಓಡಾಡಲು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಎಪಿಎಂಸಿ ಬೆಲ್ಲಕ್ಕೆ ಮಾತ್ರ ಸೀಮಿತವಾಗಿದೆ. ನಗರದ ತರಕಾರಿ ಮಾರುಕಟ್ಟೆ ಮೂಲಸೌಲಭ್ಯಗಳಿಲ್ಲದೇ ನರಳುತ್ತಿದೆ. ಹೊಸ ಮಾರುಕಟ್ಟೆ ನಿರ್ಮಾಣಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಹೀಗಾಗಿ ವ್ಯಾಪಾರಿಗಳು ಹಣ್ಣು, ಸೊಪ್ಪು, ತರಕಾರಿ ಸೇರಿ ಇನ್ನಿತರ ವಸ್ತುಗಳ ಮಾರಾಟಕ್ಕಾಗಿ ಎಲ್ಲೆಂದರಲ್ಲಿ ಅಂಗಡಿ ಹಾಕುತ್ತಿದ್ದಾರೆ. 

ನಗರದ ವಿವಿ ರಸ್ತೆ ಸದಾ ಕಾಲ ಮಾರುಕಟ್ಟೆಯಾಗಿರುತ್ತದೆ. ಮಹಾ ವೀರ ಸರ್ಕಲ್‌ನಿಂದ ಹೊಸಹಳ್ಳಿ ಸರ್ಕಲ್‌ವರೆಗೆ ಐದಾರು ಕಡೆಗಳಲ್ಲಿ ಫುಟ್‌ಪಾತ್‌ ತರಕಾರಿ ಅಂಗಡಿಗಳು ರೂಪುಗೊಂಡಿವೆ. ಅಂಚೆ ಕಚೇರಿ ಮುಂಭಾಗ ಶಾಶ್ವತವಾಗಿ ಹೂವಿನ ಮಾರುಕಟ್ಟೆಯಾಗಿ ಪರಿವರ್ತನೆ ಯಾಗಿದೆ. ಹಳ್ಳಿಯಿಂದ ಬಂದ ರೈತರೂ ಅಲ್ಲಿ ಹೂವು ತಂದು ಮಾರಾಟ ಮಾಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಅಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಪರದಾಡುತ್ತಾರೆ.

ವಿವಿ ರಸ್ತೆಯ ಕಾವೇರಿ ಸ್ಟುಡಿಯೋ ಕೆಳಗೆ ತರಕಾರಿ ಅಂಗಡಿ ತಲೆ ಎತ್ತಿದೆ. ಇನ್ನೊಂದೆಡೆ ಉದ್ದಕ್ಕೂ ನಾಲ್ಕೈದು ಮಂದಿ ಹಣ್ಣಿನ ವ್ಯಾಪಾರಿಗಳು ತಳ್ಳುವ ಗಾಡಿಯಲ್ಲಿ ಹಣ್ಣು ವ್ಯಾಪಾರ ಮಾಡುತ್ತಾರೆ. ವ್ಯಾಪಾರಿಗಳು ಗಾಡಿ ನಿಲ್ಲಿಸುವುದರಿಂದ ಅಂಗಡಿಗೆ ಬರುವ ವರ್ತಕರು ತಮ್ಮ ವಾಹನ ನಿಲ್ಲಿಸಲು ಪರದಾಡಬೇಕಾಗಿದೆ. ವ್ಯಾಸರಾಜ ಮಠ ಮುಂಭಾಗ ಬೆಳ್ಳಂಬೆಳಿಗ್ಗೆ ಸೊಪ್ಪು ಮಾರಾಟ ಮಾಡುತ್ತಾರೆ. ಮುಂದೆ ತೆರಳಿದರೆ ವಿದ್ಯಾ ಗಣಪತಿ ದೇವಾಲಯದ ತಿರುವಿನಲ್ಲಿ ಉದ್ದಕ್ಕೂ ನಾಲ್ಕೈದು ತರಕಾರಿ ಅಂಗಡಿಗಳು ತಲೆ ಎತ್ತಿವೆ. ಎಳನೀರು ಮಾರುವವರು, ಹಣ್ಣು ವ್ಯಾಪಾರಿಗಳು ಇಡೀ ಫುಟ್‌ ಪಾತ್‌ ಆವರಿಸಿ ಕೊಂಡಿದ್ದಾರೆ.

ಐದು ರಸ್ತೆಗಳು ಕೂಡುವ ಹೊಸಹಳ್ಳಿ ಸರ್ಕಲ್‌ನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಿಸುವುದಾಗಿ ಶಾಸಕ ಎಂ.ಶ್ರೀನಿವಾಸ್‌ ಅವರು ಘೋಷಣೆ ಮಾಡಿ ಎರಡು ವರ್ಷಗಳಾಗಿವೆ. ಸರ್ಕಲ್‌ಗೆ ಉದ್ಯಾನ ರೂಪಕೊಟ್ಟು ನಗರದ ಸೌಂದರ್ಯ ಹೆಚ್ಚಿಸುವುದಾಗಿ ತಿಳಿಸಿದ್ದರು. ಅಲ್ಲಿ ನಗರಸಭೆ ಶೌಚಾಲಯ ನಿರ್ಮಿಸಲು ಉದ್ದೇಶಿಸಿತ್ತು. ಆದರೆ, ಶೌಚಾಲಯ ಕಾಮಗಾರಿ ತಡೆಯಲಾಯಿತು. ಈಗ ಅಲ್ಲಿ ಕೆಂಪೇಗೌಡ ಪ್ರತಿಮೆಯೂ ಬರಲಿಲ್ಲ, ಶೌಚಾಲಯವೂ ನಿರ್ಮಾಣವಾಗಲಿಲ್ಲ. ಆ ಜಾಗ ಅನಧಿಕೃತ ತರಕಾರಿ ಮಾರುಕಟ್ಟೆ ಯಾಗಿದ್ದು, ಟ್ರಾಫಿಕ್‌ ಸಮಸ್ಯೆಗೆ ಕಾರಣ ವಾಗಿದೆ.

ನೂರು ಅಡಿ ರಸ್ತೆಯುದ್ದಕ್ಕೂ 20ಕ್ಕೂ ಹೆಚ್ಚು ಕಡೆ ತರಕಾರಿ ಮಾರಾಟ ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರ ಕಾರಾಗೃಹದ ಬಳಿ ಶಾಶ್ವತವಾಗಿ ನಾಲ್ಕೈದು ತರಕಾರಿ, ಹಣ್ಣಿನ ಅಂಗಡಿಗಳು ತಲೆ ಎತ್ತಿವೆ. ಆರ್‌ಪಿ ರಸ್ತೆಯುದ್ದಕ್ಕೂ ಹಲವು ವ್ಯಾಪಾರಿಗಳು ಅಂಗಡಿ ಹಾಕಿಕೊಂಡಿದ್ದಾರೆ. ಗುತ್ತಲು ರಸ್ತೆಯಲ್ಲೂ ಫುಟ್‌ಪಾತ್‌ನಲ್ಲೇ ಹಲವು ಕಿರು ಮಾರುಕಟ್ಟೆಗಳಿವೆ. ಸಂಜಯ್‌ ಸರ್ಕಲ್‌, ಮಹಾವೀರ ಸರ್ಕಲ್‌ ರೈಲ್ವೆ ಕ್ರಾಸಿಂಗ್‌ ಬಳಿ ರಸ್ತೆಯಲ್ಲೇ ಅಂಗಡಿಗಳು ತಲೆಎತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಮಾರುಕಟ್ಟೆಯಾದ ವಿಸಿ ಫಾರಂ ಕ್ರಾಸ್‌: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಸಿ ಫಾರಂ ಕ್ರಾಸ್‌ ಕಳೆದ ಕೆಲವು ದಿನಗಳಿಂದ ಕಿರು ಮಾರುಕಟ್ಟೆಯಾಗಿ ಪರಿವರ್ತನೆ ಯಾಗಿದೆ. ಹಲವು ಹಣ್ಣು, ಸೊಪ್ಪು, ತರಕಾರಿ ಅಂಗಡಿಗಳು ತಲೆಎತ್ತಿದ್ದು, ರಸ್ತೆಗೆ ಅಂಟಿಕೊಂಡಂತೆ ವಾಹನ, ತಳ್ಳುವ ಗಾಡಿಗಳನ್ನು ನಿಲ್ಲಿಸುತ್ತಿದ್ದಾರೆ. ಹೀಗಾಗಿ ಎದುರಿನಿಂದ ಬರುವ ವಾಹನಗಳಿಗೆ ಸಮಸ್ಯೆಯಾಗುತ್ತಿದೆ.

ಈ ತಿರುವು ಮೊದಲು ಅಪಘಾತ ವಲಯವಾಗಿತ್ತು. ಎರಡೂ ರಸ್ತೆಯಲ್ಲಿ ಹಂಪ್‌ ಇರದ ಕಾರಣ ಅತೀ ವೇಗದಿಂದ ಬರುತ್ತಿದ್ದ ವಾಹನಗಳು ತಿರುವು ಪಡೆಯುತ್ತಿದ್ದ ವಾಹನ, ವ್ಯಕ್ತಿಗಳಿಗೆ ಡಿಕ್ಕಿ ಹೊಡೆಯುತ್ತಿದ್ದವು. ಅಲ್ಲಿ ಹಂಪ್‌ ನಿರ್ಮಾಣ ಮಾಡಬೇಕು ಎಂದು ಹಲವರು ಒತ್ತಾಯ ಮಾಡಿದ್ದರು. ಇದರ ಫಲವಾಗಿ ಅಲ್ಲಿ ಹಂಪ್‌ ನಿರ್ಮಾಣವಾಯಿತು.

ಹಂಪ್‌ ನಿರ್ಮಾಣವಾಗುತ್ತಿದ್ದಂತೆ ಅಲ್ಲಿ ವಾಹನಗಳ ವೇಗ ತಗ್ಗಿತು. ಅದನ್ನೇ ಬಳಸಿಕೊಂಡ ಹೂವು, ಎಳನೀರು ವ್ಯಾಪಾರಿಗಳು ವಾಹನಗಳಲ್ಲಿ ತೆರಳುವವರನ್ನು ಸೆಳೆದರು. ಗಾಡಿ ನಿಲ್ಲಿಸಲು ಜಾಗವೂ ಇದ್ದ ಕಾರಣ ವ್ಯಾಪಾರ ಆರಂಭವಾಯಿತು. ಕ್ರಮೇಣ ತರಕಾರಿ, ಹಣ್ಣಿನ ಅಂಗಡಿಗಳು ತಲೆಎತ್ತಿದವು. ಈಗ ಅಲ್ಲಿ ಮಿನಿ ಮಾರುಕಟ್ಟೆಯೇ ನಿರ್ಮಾಣವಾಗಿದೆ.

ರೈತರ ಹೆಸರಿನಲ್ಲಿ ವ್ಯಾಪಾರಿಗಳ ಮೋಸ!

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ವ್ಯಾಪಾರಿಗಳು ರೈತರ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ‘ಸಾವಯವ ತರಕಾರಿ ಬೆಳೆಯುತ್ತಿದ್ದೇವೆ, ಹೊಲದಿಂದ ನೇರವಾಗಿ ತಂದು ಮಾರಾಟ ಮಾಡುತ್ತಿದ್ದೇವೆ’ ಎಂದು ಹೆದ್ದಾರಿಯಲ್ಲಿ ಓಡಾಡುವ ಜನರಿಗೆ, ಪ್ರವಾಸಿಗರಿಗೆ ನಂಬಿಸುತ್ತಿದ್ದಾರೆ. ಆ ಮೂಲಕ ತರಕಾರಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

‘ಯಾರದೋ ಗದ್ದೆಯನ್ನು ತೋರಿಸಿ ಅಲ್ಲೇ ಬೆಳೆದು ತಂದು ಮಾರಾಟ ಮಾಡುತ್ತಿರುವುದಾಗಿ ನಂಬಿಸುತ್ತಿದ್ದಾರೆ. ಬೆಂಗಳೂರು, ಮೈಸೂರಿನಿಂದ ಬರುವ ಜನರು ಅವರ ಮಾತು ಕೇಳಿ ಹೆಚ್ಚು ಬೆಲೆ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ರೈತರ ಹೆಸರಿನಲ್ಲಿ ಮೋಸ ಮಾಡುವ ವ್ಯಾಪಾರಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಇಂಡುವಾಳು ಗ್ರಾಮದ ಬಸವರಾಜು ಒತ್ತಾಯಿಸಿದರು.

ಪೊಲೀಸರಿಗೆ ಕೊಡಬೇಕು ‘ಮಾಮೂಲು’

ನಗರದಾದ್ಯಂತ ವಿವಿಧೆಡೆ ತಲೆ ಎತ್ತಿರುವ ಕಿರು ಮಾರುಕಟ್ಟೆಗಳು ಪೊಲೀಸ್‌ ಸಿಬ್ಬಂದಿಯ ಲಂಚಗುಳಿತನದ ಪ್ರತೀಕವಾಗಿವೆ. ವಿವಿಧ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಮಾರಾಟ ಮಾಡುವ ವ್ಯಾಪಾರಿಗಳು ಅಲ್ಲಿಯ ಪೊಲೀಸರಿಗೆ ಲಂಚ ಕೊಡುವುದು ಸಾಮಾನ್ಯವಾಗಿದೆ. ಹಣ ಕೊಟ್ಟರೆ ಮಾತ್ರ ಪೊಲೀಸರು ವ್ಯಾಪಾರ ಮಾಡಲು ಬಿಡುತ್ತಾರೆ. ಇಲ್ಲದಿದ್ದರೆ ಅಂಗಡಿ ಎತ್ತಿಸುತ್ತಿದ್ದಾರೆ.

‘ಸಾಮಾನ್ಯ ಡ್ರೆಸ್‌ನಲ್ಲಿ ಬರುವ ಪೊಲೀಸರು ಹಣ ವಸೂಲಿ ಮಾಡಿಕೊಂಡು ಹೋಗುತ್ತಾರೆ. ಪ್ರತಿಯೊಬ್ಬ ಅಂಗಡಿ ಮಾಲೀಕ ₹50 ಕೊಡಲೇಬೇಕು. ಹಣ ಕೊಡದಿದ್ದರೆ ತರಕಾರಿ ಕೊಡುವಂತೆ ಪೀಡಿಸುತ್ತಾರೆ’ ಎಂದು ವಿವಿ ರಸ್ತೆಯಲ್ಲಿ ತರಕಾರಿ ಮಾರುವ ವ್ಯಾಪಾರಿಯೊಬ್ಬರು ಹೇಳಿದರು.

ಒಂದೇ ಕಡೆ ಮಾರುಕಟ್ಟೆಯಾಗಲಿ‌

ಮಾರುಕಟ್ಟೆಯನ್ನು ಒಂದೇ ಕಡೆ ಸ್ಥಾಪಿಸಿದರೆ ಬೇರೆಡೆ ಹೋಗುವ ಅಗತ್ಯ ಇರುವುದಿಲ್ಲ. ಇಲ್ಲಿ–ಅಲ್ಲಿ ಬೇರೆ ಬೇರೆ ವಸ್ತುಗಳು ಸಿಗುವುದರಿಂದ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಅಲೆದಾಡುವಂತಾಗಿದೆ ಎನ್ನುತ್ತಾರೆ ಹಾಲಿನ ಕರಿಯಪ್ಪ.

ಸ್ವಚ್ಛತೆ ಕೊರತೆ

ಮಂಡ್ಯದಲ್ಲಿ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಸಿಗುತ್ತಿಲ್ಲ. ಎಲ್ಲೆಂದರಲ್ಲಿ ತರಕಾರಿ, ಹಣ್ಣು ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಿರುವುದರಿಂದ ಪಾದಚಾರಿ ಮಾರ್ಗಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ ಪಾಪಣ್ಣ.

ವ್ಯಾಪಾರಿಗಳಿಗೆ ಸೌಲಭ್ಯವಿಲ್ಲ

ನಗರದಲ್ಲಿರುವ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಮೂಲ ಸೌಲಭ್ಯದ ಕೊರತೆ ಇದೆ. ಇದರಿಂದ, ನಗರದ ಅಲ್ಲಲ್ಲಿ ಅಂಗಡಿಗಳನ್ನು ಇಟ್ಟಿದ್ದಾರೆ. ಅವುಗಳನ್ನು ತೆರವುಗೊಳಿಸಬೇಕು. ಮೂಲ ಸೌಲಭ್ಯ ಇರುವ ಮಾರುಕಟ್ಟೆಯನ್ನು ನಿರ್ಮಿಸಬೇಕು ಎನ್ನುವುದು ರಾಮಕೃಷ್ಣ ಅವರ ಅಭಿಪ್ರಾಯ.

ಮಾರುಕಟ್ಟೆಯಲ್ಲಿ ಜಾಗವಿಲ್ಲ

ಕಲ್ಲಹಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮಾರಲು ವ್ಯವಸ್ಥೆ ಮಾಡಲಾಗಿತ್ತು. ಗ್ರಾಮಾಂತರ ಪ್ರದೇಶದವರಿಗೆ ದೂರ ಆಗುವ ಕಾರಣ ವ್ಯಾಪಾರವೇ ಆಗದೆ ನಷ್ಟವಾಗುತ್ತಿತ್ತು. ಇದರಿಂದ ವ್ಯಾಪಾರಸ್ಥರು ನಗರದದಲ್ಲಿ ವಿವಿಧೆಡೆ ಹಂಚಿ ಹೋದರು. ಮಾರುಕಟ್ಟೆಯಲ್ಲಿ ಜಾಗ ಇಲ್ಲದಿರುವುದರಿಂದ ಜಾಗ ಸಿಕ್ಕಲ್ಲಿ ಅಂಗಡಿ ಹಾಕಿಕೊಂಡು ಹೊಟ್ಟೆ ಪಾಡು ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಜಯರಾಮ್.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು