ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಲ್ಲೂ ನಿಲ್ಲದ ಕಲ್ಲು ಗಣಿಗಾರಿಕೆ

ಬೇಬಿಬೆಟ್ಟ: ಹಗಲು ವೇಳೆಯಲ್ಲೇ ಕಲ್ಲು ಸಾಗಣೆ, ಜಿಲ್ಲಾಡಳಿತದ ಆದೇಶಕ್ಕೆ ಕಿಮ್ಮತ್ತಿಲ್ಲ
Last Updated 19 ಮೇ 2021, 3:29 IST
ಅಕ್ಷರ ಗಾತ್ರ

ಪಾಂಡವಪುರ: ಜಿಲ್ಲಾಡಳಿತದ ನಿಷೇಧ ಆದೇಶ, ಲಾಕ್‌ಡೌನ್‌ ಜಾರಿಯ ನಡುವೆಯೂ ತಾಲ್ಲೂಕಿನ ಬೇಬಿಬೆಟ್ಟ ಸೇರಿ ವಿವಿಧೆಡೆ ಅಕ್ರಮ ಕಲ್ಲುಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ.

ಕೆಆರ್‌ಎಸ್ ಅಣೆಕಟ್ಟೆಯ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಬೇಬಿಬೆಟ್ಟ ಸೇರಿದಂತೆ ಅಣೆಕಟ್ಟೆಯ 20 ಕಿ.ಮೀ. ಸುತ್ತಮುತ್ತ ಕಲ್ಲುಗಣಿಗಾರಿಕೆ ಯನ್ನು ನಿಷೇಧ ಗೊಳಿಸಿತ್ತು. ಆದರೆ ಬೇಬಿಬೆಟ್ಟದಲ್ಲಿ ಇದನ್ನು ಲೆಕ್ಕಿಸದ ಗಣಿಮಾಲೀಕರು ಎಗ್ಗಿಲ್ಲದೆ ಕಲ್ಲು ಸ್ಫೋಟಗೊಳಿಸಿ ಕ್ರಷರ್‌ ನಡೆಸುತ್ತಿದ್ದಾರೆ.

ನಿಷೇಧವಿದ್ದಾಗಲೂ ಗಣಿಮಾಲೀ ಕರು ರಾತ್ರಿ ವೇಳೆ ಮೆಗ್ಗರ್‌ ಬ್ಲಾಸ್ಟ್ ಮೂಲಕ ಕಲ್ಲು ಸಿಡಿಸಿ ಅಲ್ಲಿರುವ ಕ್ರಷರ್‌ಗಳಿಗೆ ಕಲ್ಲು ಪೂರೈಕೆ ಮಾಡುವುದರ ಜತೆಗೆ ಹೊರಗಡೆ ಕಲ್ಲುಗಳನ್ನು ಸಾಗಿಸುತ್ತಿದ್ದಾರೆ. ಪೊಲೀ ಸರು ಲಾಕ್‌ಡೌನ್‌ ಕರ್ತವ್ಯ ದಲ್ಲಿರುವುದು ಗಣಿ ಧಣಿಗಳಿಗೆ ಅನುಕೂಲವಾಗಿದೆ ಎಂದು ಜನರು ಹೇಳುತ್ತಾರೆ.

ನಿಷೇಧಾಜ್ಞೆ ನಡುವೆಯೂ ಹಗಲು ವೇಳೆಯಲ್ಲಿಯೇ ಸ್ಫೋಟಕ ವಸ್ತುಗಳನ್ನು ಬಳಸಿಕೊಂಡು ಅಕ್ರಮ ಗಣಿಗಾರಿಕೆ ನಿರ್ಭೀತಿಯಿಂದ ನಡೆಯುತ್ತಿದೆ. ಬೇಬಿಬೆಟ್ಟದ‌ಲ್ಲಿ ಸ್ಫೋಟಕ ವಸ್ತುಗಳನ್ನು ಬಳಸಿ ಗಣಿಗಾರಿಕೆ ನಡೆಸುವ ಕಲ್ಲುಗಳನ್ನು ಅಲ್ಲಿನ ಹಲವು ಕ್ರಷರ್‌ಗಳಿಗೆ ಪೂರೈಕೆ ಮಾಡುವ ಜತೆಗೆ ಲಾಕ್‌ಡೌನ್ ನಡುವೆಯೂ ಹೊರಗಡೆಗೆ ಟಿಪ್ಪರ್ ಲಾರಿಗಳ ಮೂಲಕ ನಿರ್ಭೀತಿಯಿಂದ ಸಾಗಿಸಲಾಗುತ್ತಿದೆ. ಅಧಿಕಾರಿಗಳಿಗೆ ಈ ಸಂಬಂಧ ಯಾವುದೇ ಕ್ರಮವಹಿಸಿಲ್ಲ ಎಂದ ಸ್ಥಳೀಯರು ದೂರಿದ್ದಾರೆ.

ಕಲ್ಲುಗಣಿಗಾರಿಕೆಯ ಜತೆಗೆ ಅಲ್ಲಿನ ಕ್ರಷರ್‌ಗಳನ್ನು ಜಿಲ್ಲಾಡಳಿತ ನಿಷೇಧಗೊಳಿಸಿತ್ತು. ಈ ಸಂಬಂಧ ಈ ಹಿಂದಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಟಿ.ವಿ.ಪುಷ್ಪಾ ಅವರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರು. ಅಕ್ರಮ ಗಣಿಗಾರಿಕೆ ತಡೆಗಟ್ಟಲು ಗಣಿಗಾರಿಕೆ ಪ್ರದೇಶಗಳಲ್ಲಿ ಆಳವಾದ ಕಂದಕ ತೋಡಿ ಯಾವುದೇ ಸಾಗಾಣಿಕೆಯಾಗದಂತೆ ಕ್ರಮವಹಿಸಿದ್ದರು. ಜತೆಗೆ ಚೆಕ್‌ಪೋಸ್ಟ್‌ ಗಳನ್ನು ಸ್ಥಾಪಿಸಿ ಗಣಿಗಾರಿಕೆಯ ಕಲ್ಲುಗಳು ಹೊರಹೋಗದಂತೆಯೂ ಕಟ್ಟುನಿಟ್ಟಿನ ಕ್ರಮವಹಿಸಿದ್ದರು.

ಗಣಿ ಅಧಿಕಾರಿ ಪುಷ್ಪಾ ಬೇರೆಡೆಗೆ ವರ್ಗಾವಣೆಯಾಗುತ್ತಿದ್ದಂತೆ ಹಾಗೂ ಲಾಕ್‌ಡೌನ್ ಜಾರಿಗೊಳ್ಳುತ್ತಿದ್ದಂತೆ ಇದನ್ನೇ ಬಳಸಿಕೊಂಡ ಗಣಿಮಾಲೀಕರು ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಬೆಳಕಿಗೆ ಬರುತ್ತಿದೆ.

ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕು. ಜಿಲ್ಲಾಡಳಿತದ ನಿಷೇಧ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಬೇಬಿಬೆಟ್ಟ ಉಳಿಸಿ ಹೋರಾಟ ಸಮಿತಿಯ ನಟರಾಜು, ಲೋಕೇಶ್ ಮೂರ್ತಿ, ಕುಮಾರ್, ಬಿ.ಎಂ.ಮಂಜುನಾಥ್ ಅವರು ಸೋಮವಾರ ಪಾಂಡವಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT