ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ್ ಮಾತಾಕಿ ಜೈ ಎಂದಿದ್ದಕ್ಕೆ ಜೈಲಿಗೆ ಹಾಕಿದರು: ಸ್ವಾತಂತ್ರ್ಯ ಹೋರಾಟಗಾರರ ಮಾತು

Published 15 ಆಗಸ್ಟ್ 2024, 8:14 IST
Last Updated 15 ಆಗಸ್ಟ್ 2024, 8:14 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಅದು 1942ನೇ ಇಸವಿ. ಮಹಾತ್ಮ ಗಾಂಧಿ ಅವರ ಕರೆಗೆ ಓಗೊಟ್ಟು ದೇಶದಾದ್ಯಂತ ಕ್ವಿಟ್‌ ಇಂಡಿಯಾ ಚಳವಳಿ ನಡೆಯುತ್ತಿತ್ತು. ಪಟ್ಟಣದಲ್ಲಿ ಕೂಡ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು. ಕೋಟೆ ಪಕ್ಕದ ಹೆಂಡದ ಅಂಗಡಿ ಸಮೀಪ ಭಾರತ್‌ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಿದ್ದೆವು. ಪೊಲೀಸರು ಎಲ್ಲಿದ್ದರೋ ಗೊತ್ತಿಲ್ಲ; ದೌಡಾಯಿಸಿ ಬಂದು ಸಿಕ್ಕ ಸಿಕ್ಕವರನ್ನು ಬೆನ್ನಟ್ಟಿ ಹಿಡಿದು ಮಂಡ್ಯದ ಜೈಲಿಗೆ ಕಳುಹಿಸಿದರು.....’– ಹೀಗೆ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ, 82 ವರ್ಷಗಳ ಹಿಂದೆ ನಡೆದ ಘಟನೆಯನ್ನು ಮೆಲುಕು ಹಾಕಿದವರು ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರ ಹನುಮಂತಯ್ಯ.

ಪಟ್ಟಣದ ಗೋವಿಂದಪ್ಪ ಬೀದಿಯಲ್ಲಿ ನೆಲೆಸಿರುವ 96 ವರ್ಷ (ಜನ್ಮ ದಿನಾಂಕ: 01–07–1928) ದ ಹನುಮಂತಯ್ಯ ಜೈಲಿಗೆ ಹೋದಾಗ ಅವರಿಗೆ 14 ವರ್ಷ. ‘ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರಿನ ಸರ್ಕಾರಿ ಶಾಲೆ (ಶತಮಾನೋತ್ಸವ ಶಾಲೆ) ಯಲ್ಲಿ 6ನೇ ತರಗತಿ ಓದುತ್ತಿದ್ದೆ. ನಾನು ಮತ್ತು ನನ್ನ ಸಹಪಾಠಿಗಳು ಶಾಲೆಯನ್ನು ಬಹಿಷ್ಕರಿಸಿ ಪ್ರತಿಭಟನಕಾರರ ಜತೆ ಸೇರಿಕೊಂಡೆವು. ಮುಖ್ಯ ಬೀದಿಯಿಂದ ಬಸ್‌ ನಿಲ್ದಾಣದ ಕಡೆ ಮೆರವಣಿಗೆ ಹೊರಟಿತ್ತು. ಕೆಲವರು ಕೋಟೆ ದ್ವಾರದ ಬಲ ಭಾಗದಲ್ಲಿದ್ದ ಹೆಂಡದ ಅಂಗಡಿಗೆ ನುಗ್ಗಿ ಹೆಂಡದ ಪೀಪಾಯಿಗಳನ್ನು ಉರುಳಿಸಿದರು. ಕಲ್ಲು ತೂರಾಟವೂ ನಡೆಯಿತು. ಪೊಲೀಸರು ಸಿಕ್ಕ ಸಿಕ್ಕವರನ್ನು ಹಿಡಿದರು. ಕೆಲವರಿಗೆ ಲಾಠಿ ಏಟುಗಳೂ ಬಿದ್ದವು......’ ಎಂದು ಅಂದಿನ ಘಟನೆಯನ್ನು ಸಂಜೆಗಣ್ಣಿನ ಹನುಮಂತಯ್ಯ ಸ್ಮರಿಸುತ್ತಾರೆ.

‘ಮಂಡ್ಯದ ಜೈಲಿನಲ್ಲಿ 15 ದಿನ ಕಾಲ ನಮ್ಮನ್ನು ಇಟ್ಟಿದ್ದರು. ಚಳವಳಿಯಲ್ಲಿ ಮತ್ತೆ ಭಾಗವಹಿಸದಂತೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದರು. ಶ್ರೀರಂಗಪಟ್ಟಣ, ಬೆಳಗೊಳ, ಅರಕೆರೆ, ಶ್ರೀನಿವಾಸ ಅಗ್ರಹಾರ, ಕೆ.ಶೆಟ್ಟಹಳ್ಳಿ, ಗಂಜಾಂನ ಸಾಕಷ್ಟು ಮಂದಿ ಚಳವಳಿಯಲ್ಲಿ ಪಾಲ್ಗೊಂಡು ನನ್ನಂತೆ ಜೈಲು ವಾಸ ಅನುಭವಿಸಿದ್ದಾರೆ. ಆದರೆ, ಅವರ‍್ಯಾರೂ ಈಗ ಬದುಕುಳಿದಿಲ್ಲ’ ಎಂದು ಹನುಮಂತಯ್ಯ ನೋವು ತೋಡುಕೊಳ್ಳುತ್ತಾರೆ.

‘ಚಳವಳಿಗಾರರ ಬಂಧನದ ಘಟನೆಯ ನಂತರ ಪಟ್ಟಣದಲ್ಲಿ ಹೆಂಗಸರು, ಮಕ್ಕಳು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದರು. ಒಬ್ಬಂಟಿಯಾಗಿ ಓಡಾಡಿದರೆ ಪೊಲೀಸರು ಹಿಡಿಯಬಹುದು ಎಂಬ ಕಾರಣಕ್ಕೆ ಗಂಡಸರೂ ಮನೆಯಿಂದ ಹೊರ ಬರಲು ಭಯಪಡುತ್ತಿದ್ದರು. 1947ರ ಆಗಸ್ಟ್ 15ರ ವರೆಗೆ ಇಂತಹ ಭಯ ಇದ್ದೇ ಇತ್ತು...’ ಎಂದು ಅಂದಿನ ಸ್ಥಿತಿಯನ್ನು ಬಿಚ್ಚಿಟ್ಟರು.

ನ್ಯಾಯಾಧೀಶರೊಬ್ಬರ ಕೃಪೆಯಿಂದ ಹನುಮಂತಯ್ಯ ಅವರಿಗೆ ನ್ಯಾಯಾಲಯದ ಅಮೀನ್‌ ಚಾಕರಿ ಸಿಕ್ಕಿತ್ತು. ಶ್ರೀರಂಗಪಟ್ಟಣ, ಮೈಸೂರು, ನಂಜನಗೂಡು, ದಾವಣಗೆರೆ, ತರೀಕೆರೆ, ಚಿಕ್ಕಮಗಳೂರು, ಶಿಕಾರಿಪುರ, ಶಿವಮೊಗ್ಗ ನ್ಯಾಯಾಲಯಗಳಲ್ಲಿ ಕೆಲಸ ಮಾಡಿ 1983ರಲ್ಲಿ ನಿವೃತ್ತರಾಗಿದ್ದಾರೆ. ತುಸು ಆಸ್ತಮಾ ಸಮಸ್ಯೆ ಬಿಟ್ಟರೆ 6 ಅಡಿ ಎತ್ತರದ ಆಜಾನುಬಾಹು ಹನುಮಂತಯ್ಯ ದೈಹಿಕ ಮತ್ತು ಮಾನಸಿಕವಾಗಿ ಈಗಲೂ ಗಟ್ಟಿ ಮುಟ್ಟಾಗಿದ್ದಾರೆ. ಇವರಿಗೆ 6 ಮಂದಿ ಮಕ್ಕಳು. ಸದ್ಯ ಕಿರಿಯ ಪುತ್ರಿ ಎಚ್‌.ಪದ್ಮಮ್ಮ ಅವರ ಆಶ್ರಯದಲ್ಲಿದ್ದಾರೆ.

ಸಕಾಲಕ್ಕೆ ಬಾರದ ಮಾಸಾಶನ
ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರ ಮಾಸಿಕ ₹ 10 ಸಾವಿರ ಮಾಸಾಶನ ನೀಡುತ್ತದೆ. ಆದರೆ ಹನುಮಂತಯ್ಯ ಅವರಿಗೆ ಕಳೆದ ಮೂರು ತಿಂಗಳಿಂದ ಮಾಸಾಶನ ಬಂದಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಸಕಾಲಕ್ಕೆ ಮಾಸಾಶನ ಬರುತ್ತಿಲ್ಲ’ ಎಂದು ಅವರ ಪುತ್ರಿ ಎಚ್‌. ಪದ್ಮಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT