ಶ್ರೀರಂಗಪಟ್ಟಣ: ಭಾರತದಾದ್ಯಂತ ಸ್ವಾತಂತ್ರ್ಯ ಚಳವಳಿ ಕಾವು ಪಡೆದಿದ್ದ ಕಾಲದಲ್ಲಿ ಚಳವಳಿಯ ನೇತಾರ ಮಹಾತ್ಮ ಗಾಂಧಿ ಈ ಊರಿಗೆ ಬಂದು ಭಾಷಣ ಮಾಡಿ, ಸ್ಥಳೀಯರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದ್ದರು ಎಂಬುದು ಬಹಳ ಮಹತ್ವದ ಸಂಗತಿ.
‘ಪಟ್ಟಣದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಬಲ ಪಾರ್ಶ್ವದಲ್ಲಿರುವ ಪೊಲೀಸ್ ಠಾಣೆಯ ಎದುರಿನ ಕಟ್ಟಡ ಮುಂದೆ ನಿಂತು ಅವರು ಭಾಷಣ ಮಾಡಿದ್ದರು. 1927ರ ಜುಲೈ 19ರಂದು ಸ್ವಾತಂತ್ರ್ಯ ಚಳವಳಿಗಾರರ ಜತೆ ಗಾಂಧಿ ಬಂದು ಮಾತನಾಡಿರುವುದು ಸರ್ಕಾರಿ ಕಡತಗಳಲ್ಲಿ ದಾಖಲಾಗಿದೆ’ ಎಂದು ಗಾಂಧಿವಾದಿ ಡಾ.ಬಿ. ಸುಜಯಕುಮಾರ್ ಹೇಳುತ್ತಾರೆ.
ಇಲ್ಲಿಗೆ ಬರುವ ಮುನ್ನ ಗಾಂಧೀಜಿ ಅವರು ಎಡತೊರೆ ಮತ್ತು ಕೆಆರ್‌ಎಸ್ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿ ಕೂಡ ಜನರನ್ನುದ್ದೇಶಿಸಿ ಮಾತನಾಡಿದ್ದರು. ಗಾಂಧೀಜಿ ಅವರ ಆಗಮನದ ವೇಳೆ ಪಟ್ಟಣ ಮತ್ತು ಆಸುಪಾಸಿನ ಗ್ರಾಮಗಳ ಸ್ವಾತಂತ್ರ್ಯ ಪ್ರೇಮಿಗಳು ಅಪಾರ ಪ್ರಮಾಣದಲ್ಲಿ ಸೇರಿ ಅವರ ಭಾಷಣ ಕೇಳಿದ್ದರು. ಗಾಂಧೀಜಿ ಅವರ ಭಾಷಣವನ್ನು ಗಂಗಾಧರರಾವ್ ದೇಶಪಾಂಡೆ ಕನ್ನಡಕ್ಕೆ ತರ್ಜುಮೆ ಮಾಡಿರುವ ಸಾಧ್ಯತೆ ಇದೆ.
ಈ ಸ್ಥಳದಲ್ಲಿ ಗಾಂಧೀಜಿ ಅವರು ಭಾಷಣ ಮಾಡಿದ ವಿಷಯವನ್ನು ನಮ್ಮ ತಂದೆ ದಿವಂಗತ ಡಾ.ಸಿ. ಬಂದೀಗೌಡ (ಸ್ವಾತಂತ್ರ್ಯ ಹೋರಾಟಗಾರ)ರು ಕೂಡ ಹಲವು ಬಾರಿ ನನ್ನ ಬಳಿ ಪ್ರಸ್ತಾಪಿಸಿದ್ದಾರೆ ಎಂದು ಡಾ.ಬಿ. ಸುಜಯಕುಮಾರ್ ಹೇಳಿದ್ದಾರೆ.