ಭಾನುವಾರ, ಆಗಸ್ಟ್ 18, 2019
23 °C

ಕಾಚಳ್ಳಿ ಕಾಯಿ ತಿಂದು 14 ಮಂದಿ ಅಸ್ವಸ್ಥ

Published:
Updated:
Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದಲ್ಲಿ ಶನಿವಾರ ಸಂಜೆ ಕಾಚಳ್ಳಿ ಕಾಯಿ (ಜತ್ರೋಪಾ) ತಿಂದು 14 ಮಂದಿ ಅಸ್ವಸ್ಥರಾಗಿದ್ದಾರೆ.

ಗ್ರಾಮದ ಮಹದೇವು ಅವರ ಮಗ ಶಿವ (30), ರವಿ ಅವರ ಮಕ್ಕಳಾದ ಸಿಂಚನಾ (17), ಚಿರಂತ್ (14), ರಮೇಶ್ ಅವರ ಪುತ್ರಿ ಶ್ರೇಯಾ (4), ನಂದೀಶ್ ಅವರ ಮಗ ದಿಗಂತ್ (9), ಪ್ರಕಾಶ್ ಅವರ ಮಗ ಜನಿತ್ (7), ರಾಜು ಅವರ ಮಗ ದರ್ಶನ್ (17), ಕುಮಾರ್ ಅವರ ಪುತ್ರಿ ರೋಜಾ (11), ನಿರಂಜನ್ ಅವರ ಮಗ ವರ್ಷನ್ (8), ಅಯ್ಯಪ್ಪ ಅವರ ಮಗ ತರುಣ್ (12) ಅವರು ಅಸ್ವಸ್ಥಗೊಂಡಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಾಪ್ ಅವರ ಮಗ ಯಶ್ವಂತ್ (14), ಅಮಾಸಯ್ಯ ಅವರ ಮಗ ಮರಿಯಯ್ಯ (60), ರವಿ ಎಂಬುವವರ ಪತ್ನಿ ಗೌರಮ್ಮ (40) ಹಾಗೂ ಮರಿದಾಸಯ್ಯ ಅವರ ಮಗ ವೆಂಕಟೇಶ್ (60) ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಗ್ರಾಮದ ಶಿವ ಎಂಬುವವರು ಮದ್ಯ ಸೇವಿಸಿದ ಅಮಲಿನಲ್ಲಿ ಮಾರಿಗುಡಿ ಬಳಿ ಕಾಚಳ್ಳಿ ಕಾಯಿ ತಿಂದು ಅಲ್ಲಿ ಆಟವಾಡುತ್ತಿದ್ದ ಮಕ್ಕಳಿಗೂ ಕೊಟ್ಟಿದ್ದಾರೆ. ಕಡಲೆಕಾಯಿ ಬೀಜ ಎಂದು ತಿಳಿದು ಮಕ್ಕಳು, ಯುವಕರು, ಯುವತಿಯರು ಹಾಗೂ ವಯಸ್ಕರು ಕೂಡ ಈ ಬೀಜಗಳನ್ನು ತಿಂದಿದ್ದಾರೆ. 10ಕ್ಕಿಂತ ಹೆಚ್ಚು ಬೀಜಗಳನ್ನು ತಿಂದವರಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಪೈಕಿ ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ಆತಂಕಗೊಂಡ ಪೋಷಕರು ಕಾಚಳ್ಳಿ ಕಾಯಿ ತಿಂದ ಎಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

‘ಜತ್ರೋಪಾ ಬೀಜ ತಿಂದಿರುವ ಎಲ್ಲರೂ ಆರೋಗ್ಯವಾಗಿದ್ದಾರೆ. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು  ಅಪಾಯದಿಂದ ಪಾರಾಗಿದ್ದಾರೆ. ಒಂದೆರಡು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ’ ಎಂದು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ಮಾರುತಿ ತಿಳಿಸಿದ್ದಾರೆ.

Post Comments (+)