ಶನಿವಾರ, ಜುಲೈ 24, 2021
22 °C
ಕೆವಿಎಸ್‌ 105 ನೆನಪಿನ ಸಮಾರಂಭ; ರೈತ ಹಿತರಕ್ಷಣಾ ಸಮಿತಿಯ ಜಿ.ಮಾದೇಗೌಡ ಅಭಿಮತ

ಮಂಡ್ಯ: ಶಂಕರಗೌಡರ ಕೆಲಸ ಜನಪ್ರತಿನಿಧಿಗಳಿಗೆ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಕೆ.ವಿ.ಶಂಕರಗೌಡರ ಜನಪರ ಕಾಳಜಿ, ಶಿಕ್ಷಣ, ಸಾಮಾಜಿಕ, ಕಲಾ ಸೇವೆ, ರಾಜಕೀಯ ಅನುಭವ ಅನನ್ಯವಾದುದು. ಮಂಡ್ಯದಲ್ಲಿ ಅವರು ಮಾಡಿರುವ ಕೆಲಸಗಳು ಇಂದಿನ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ’ ಎಂದು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಹೇಳಿದರು.

ಕರ್ನಾಟಕ ಸಂಘದ ವತಿಯಿಂದ ನಗರದ ಕೆವಿಎಸ್‌ ಶತಮಾನೋತ್ಸವ ಭವನದಲ್ಲಿ ಬುಧವಾರ ನಡೆದ ಕೆ.ವಿ.ಶಂಕರಗೌಡ 105ರ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಂಕರಗೌಡರ ಸಾಧನೆ ಏನು ಎಂಬುದನ್ನು ಮಂಡ್ಯದಲ್ಲಿ ಅವರು ಸ್ಥಾಪಿಸಿರುವ ಸಂಸ್ಥೆಗಳೇ ಸಾರಿ ಹೇಳುತ್ತಿವೆ. ಅವರೊಂದಿಗೆ ನಾನು ಬೆಳಿಗ್ಗೆಯಿಂದ ಸಂಜೆವರೆಗೆ ಸಂಚರಿಸುತ್ತಿದ್ದ ದಿನಗಳು ಈಗಲೂ ನೆನಪಿನಲ್ಲಿದೆ. ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಪಕ್ಷದ ಕಚೇರಿಗೆ, ವಿಧಾನಸೌಧಕ್ಕೆ ಹೋಗಿ ಬರಬೇಕಾಗಿತ್ತು. ಆ ಸಂದರ್ಭಗಳಲ್ಲಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು’ ಎಂದರು.

ಮಾಜಿ ಶಾಸಕ ಎಚ್.ಡಿ.ಚೌಡಯ್ಯ ಮಾತನಾಡಿ ‘ಕೆ.ವಿ.ಶಂಕರಗೌಡರು ನನಗೆ ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಿದ್ದರು. 1938ರಲ್ಲಿ ನಾನು ಟೌನ್ ಮಿಡ್ಲ್‌ ಸ್ಕೂಲ್‍ನಲ್ಲಿ ಓದುತ್ತಿದ್ದಾಗ ಶಂಕರಗೌಡರನ್ನು ಭೇಟಿಯಾಗಿದ್ದೆ. ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು 1958ರಲ್ಲಿ ಜನತಾ ಶಿಕ್ಷಣ ಸಂಸ್ಥೆ ಕಟ್ಟಿದರು. ನಾಲ್ಕು ವರ್ಷಗಳ ಬಳಿಕ 1962ರಲ್ಲಿ ಮಂಡ್ಯಕ್ಕೆ ಇಂಜಿನಿಯರಿಂಗ್ ಕಾಲೇಜನ್ನು ಮಂಜೂರು ಮಾಡಿಸಿಕೊಂಡು ಬಂದರು. ಬಳಿಕ ಸಹಕಾರ ಸಂಘದ ಮೂಲಕ ರೈತರಿಗೆ ನೆರವಾಗಿ ತಮ್ಮದೇ ಛಾಪು ಮೂಡಿಸಿದ್ದರು’ ಎಂದರು.

‘1988ರಲ್ಲಿ ಪೀಪಲ್ಸ್‌ ಎಜುಕೇಷನ್ ಟ್ರಸ್ಟ್ ನೊಂದಾಯಿಸಿದೆವು.  ಅವರು ತೀರಿಕೊಳ್ಳುವ ಕೆಲ ವರ್ಷಗಳ ಹಿಂದೆ ನನ್ನನ್ನು ಕರೆದು ಪಿಇಎಸ್‍ನ ಜವಾಬ್ದಾರಿಯನ್ನು ವಹಿಸಿದರು. ನನ್ನ ಅನುಭವದಿಂದ ಪಿಇಟಿಯನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ್ದೇನೆ. ಇತ್ತೀಚೆಗೆ ಕೆವಿಎಸ್ ಅವರ ಮೊಮ್ಮಗ ಕೆ.ಎಸ್.ವಿಜಯಾನಂದನಿಗೆ ಪಿಇಟಿ ಜವಾಬ್ದಾರಿ ವಹಿಸಿದ್ದು ನನಗೆ ಸಂತಸ ತಂದಿದೆ’ ಎಂದರು.

ಪಿಇಎಸ್ ಕಾಲೇಜಿನ  ಶ್ರೀಕಾಂತ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಪ್ರೊ.ಶಂಕರಗೌಡ, ಕಸಾಪ ಮಾಜಿ ಅಧ್ಯಕ್ಷ ಎಚ್.ವಿ.ಜಯರಾಂ, ಡಾ.ರಾಮಲಿಂಗಯ್ಯ, ಕೆ.ವಿ.ಮುದ್ದಯ್ಯ ಇದ್ದರು.

ರೈತ ಸಭಾಂಗಣದ ಮುಂದಿರುವ ಕೆ.ವಿ.ಶಂಕರಗೌಡ ಅವರ ಪ್ರತಿಮೆಗೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ನಾಯಕರು ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಜನ್ಮ ದಿನವನ್ನು ಆಚರಿಸಿದರು.

ಕೆ.ವಿ.ಎಸ್‌ ಸ್ಮಾರಕ ಪ್ರಶಸ್ತಿ ಪ್ರದಾನ

ಕೃಷಿಕ್ ಲಯನ್ಸ್ ಸಂಸ್ಥೆ ವತಿಯಿಂದ ನಗರದ ರೆಡ್‌ ಕ್ರಾಸ್‌ ಭವನದಲ್ಲಿ ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಅವರು ರೆಡ್‌ ಕ್ರಾಸ್‌ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರಿಗೆ ಕೆ.ವಿ.ಎಸ್‌ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿದರು.

ನಂತರ ಮಾತನಾಡಿದ ಕೆ.ಯಾಲಕ್ಕಿಗೌಡ ’ಕೆ.ವಿ. ಶಂಕರಗೌಡರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ನಿಘಂಟುಗಳನ್ನು ತಂದು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಮಂಡ್ಯ ಇಂಡಿಯಾಗೆ ಮಾದರಿ ಎನ್ನುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ’ ಎಂದರು.

ಕೃಷಿಕ್ ಲಯನ್ಸ್ ಸಂಸ್ಥೆ ಪೋಷಕ ಕೆ.ಟಿ. ಹನುಮಂತು, ಪಿಇಎಸ್ ಸಂಸ್ಥೆ ಅಧ್ಯಕ್ಷ ಕೆ.ಎಸ್. ವಿಜಯಾನಂದ, ಲಯನ್ಸ್ ಸಂಸ್ಥೆ ಅಧ್ಯಕ್ಷೆ ರತ್ನಮ್ಮ, ಮಂಗಲ ಯೋಗೀಶ್, ರಂಗಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು