ಶುಕ್ರವಾರ, ಜೂನ್ 18, 2021
21 °C

ಶ್ರೀರಂಗಪಟ್ಟಣ: ‘ರಾಜಕುಮಾರ್‌ ಪೂಜಾರಿ’ ಎಲ್‌ಐಸಿ ಶ್ರೀಧರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಚಂದಗಾಲು ಗ್ರಾಮದ ಶ್ರೀಧರ್‌ ಅವರು ವರನಟ ಡಾ.ರಾಜಕುಮಾರ್‌ ಅವರಿಗೆ ಕಳೆದ 14 ವರ್ಷಗಳಿಂದ ಪ್ರತಿ ದಿನ ಪೂಜೆ ಸಲ್ಲಿಸುತ್ತಿದ್ದು ‘ರಾಜಕುಮಾರ್‌ ಪೂಜಾರಿ’ ಎಂದೇ ಹೆಸರಾಗಿದ್ದಾರೆ.

ಎಲ್‌ಐಸಿ ಪ್ರತಿನಿಧಿಯಾಗಿರುವ ಶ್ರೀಧರ್‌ ಡಾ.ರಾಜಕುಮಾರ್‌ ಅವರನ್ನು ದೇವರಂತೆ ಆರಾಧಿಸುತ್ತಾರೆ. ತಮ್ಮ ಮನೆ ಮತ್ತು ಪಟ್ಟಣದ ತಮ್ಮ ಕಚೇರಿಯಲ್ಲಿ ರಾಜಕುಮಾರ್ ಭಾವಚಿತ್ರಕ್ಕೆ ಅಗ್ರ ಪೂಜೆ ಸಲ್ಲಿಸಿ ನಂತರ ಇತರ ದೇವರನ್ನು ಆರಾಧಿಸುತ್ತಾರೆ. 2006ರಿಂದಲೂ ಅವರ ಮನೆಯಲ್ಲಿ ವರನಟನಿಗೆ ನಿತ್ಯ ಪೂಜೆ ನಡೆಯುತ್ತದೆ. ಬೆಳಿಗ್ಗೆ ಏಳುತ್ತಿದ್ದಂತೆಯೇ ರಾಜಕುಮಾರ್‌ ಅವರನ್ನು ನೆನೆದು, ಅವರ ಚಿತ್ರಗಳ ಭಕ್ತಿ ಪ್ರಧಾನ ಹಾಡುಗಳ ಮೂಲಕ ತಮ್ಮ ದಿನಚರಿ ಆರಂಭಿಸುತ್ತಾರೆ.

ಡಾ.ರಾಜಕುಮಾರ್ ಅವರ 175ಕ್ಕೂ ಹೆಚ್ಚು ಸಿನಿಮಾಗಳನ್ನು ನೋಡಿರುವ ಶ್ರೀಧರ್‌, ತಮ್ಮ ಊರು ತಾಲ್ಲೂಕಿನ ಚಂದಗಾಲು ಗ್ರಾಮದಲ್ಲಿ ಚಿತ್ರೀಕರಣ ನಡೆದಿರುವ ‘ಬಹದ್ದೂರ್‌ ಗಂಡು’ ಚಿತ್ರವನ್ನು ಹತ್ತಕ್ಕೂ ಹೆಚ್ಚು ಬಾರಿ ನೋಡಿದ್ದಾರೆ. ಹಾಲು ಜೇನು, ಕೆರಳಿದ ಸಿಂಹ, ಭಕ್ತ ಪ್ರಹ್ಲಾದ ಚಿತ್ರಗಳನ್ನೂ ಅಷ್ಟೇ ಬಾರಿ ನೋಡಿದ್ದಾರೆ. ಟಿವಿಯ ಯಾವುದೇ ವಾಹಿನಿಯಲ್ಲಿ ರಾಜಕುಮಾರ್ ಅವರ ಚಿತ್ರ ಬಂದರೆ ತುರ್ತು ಕೆಲಸ ಇದ್ದರೂ ಬಿಟ್ಟು ನೋಡುತ್ತಾ ಕುಳಿತುಬಿಡುತ್ತಾರೆ.

ಗಾಯಕರೂ ಆಗಿರುವ ಶ್ರೀಧರ್‌ ಆರ್ಕೇಸ್ಟ್ರಾಗಳಲ್ಲಿ ರಾಜಕುಮಾರ್ ಹಾಡುಗಳನ್ನು ಡಾ.ರಾಜ್‌ ಧ್ವನಿಯಲ್ಲಿ ಹಾಡುತ್ತಾರೆ. ರಾಜಕುಮಾರ್ ಅವರ ಸಿನಿಮಾಗಳ ಯಾವುದೇ ಪಾತ್ರಗಳ ಸಂಭಾಷಣೆಯನ್ನು ಯಥಾವತ್‌ ಹೇಳಬಲ್ಲರು.

‘6 ವರ್ಷದ ಬಾಲಕನಾಗಿದ್ದಾಗ ರಾಜಕುಮಾರ್ ಅವರ ಬಗ್ಗೆ ಹುಟ್ಟಿದ ಅಭಿಮಾನ ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ. ರಾಜಣ್ಣನಿಗೆ ಪೂಜೆ ಮಾಡಿದರೆ ಮನಸ್ಸಿಗೆ ಆನಂದ, ಉಲ್ಲಾಸ. ಹಾಗಾಗಿ ಪ್ರತಿ ದಿನ ಪೂಜೆ ಸಲ್ಲಿಸುತ್ತೇನೆ. ಪ್ರತಿ ವರ್ಷ ಅವರ ಜನ್ಮದಿನವನ್ನು ಆಚರಿಸುತ್ತೇನೆ. ರಾಜಕುಮಾರ್ ಅವರ ಪಾತ್ರಗಳು ನನ್ನ ಬದುಕಿನಲ್ಲಿ ಪರಿಣಾಮ ಬೀರಿದ್ದು, ದುಡಿದು ಬದುಕುವುದನ್ನು ಕಲಿಸಿವೆ’ ಎಂದು ಶ್ರೀಧರ್‌ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು