ಬುಧವಾರ, ಮಾರ್ಚ್ 29, 2023
30 °C
ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅಭಿಮತ

ನೆಲ, ಜಲ, ನುಡಿ ರಕ್ಷಣೆಗೆ ಹೆಗಲು ಕೊಟ್ಟ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಕನ್ನಡ ನಾಡು, ನುಡಿ, ಜಲ ರಕ್ಷಣೆಗೆ ರಾಜ್ಯ ಸರ್ಕಾರ ಹೆಗಲುಕೊಟ್ಟಿದೆ. ಕನ್ನಡ ಭಾಷೆಗೆ ಮಂಡ್ಯ ಜಿಲ್ಲೆಯು ಬಲು ದೊಡ್ಡ ಕೊಡುಗೆ ನೀಡಿದ್ದು ಅತೀ ಹೆಚ್ಚು ಕನ್ನಡ ಭಾಷೆ ಮಾತನಾಡುವ ಜಿಲ್ಲೆ ಎಂದೇ ಗುರುತಿಸಿಕೊಂಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಸೋಮವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಕನ್ನಡ ಬಾಷೆ ಬಳಕೆಯ ಜೊತೆಗೆ ಸೋದರ ಭಾಷೆಯನ್ನು ಗೌರವಿಸುವ ವಿಶಾಲ ಮನೋಭಾವವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಆ ಮೂಲಕ ಭಾಷಾ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯ ಕಾಪಾಡಿಕೊಳ್ಳಬೇಕು. ಅತ್ಯಂತ ಪ್ರಾಚೀನ ಇತಿಹಾಸ ಹೊಂದಿರುವ ಕನ್ನಡ ಭಾಷೆಯು ಭಾರತ ದೇಶದ ಪ್ರಮುಖ ಭಾಷೆಯಾಗಿ ಗುರುತಿಸಿಕೊಂಡಿದೆ’ ಎಂದು ಹೇಳಿದರು.

‘ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದು ಅಭಿವೃದ್ಧಿಯ ಕಾಲ ಆರಂಭವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ₹ 2,63,433 ರೈತ ಫಲಾನುಭವಿಗಳಿಗೆ ₹ 394 ಕೋಟಿ ಸಹಾಯಧನ ಪಾವತಿ ಮಾಡಿದೆ. ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 19,511 ರೈತರಿಗೆ ವಿವಿಧ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಗಿದೆ’ ಎಂದರು.

‘ಜಿಲ್ಲೆಯ 1204 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲಧಾರೆ ಯೋಜನೆ ಜಾರಿಗೆ ₹ 1,791 ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಮಂಜೂರಾತಿ ದೊರೆತಿದ್ದು 2024ರೊಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ. ಜಿಲ್ಲೆಯ ರೈತರ ಆರ್ಥಿಕ ಜೀವನಾಡಿಯಾಗಿರುವ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು ಸಾಧ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ಮುಖ್ಯಮಂತ್ರಿಗಳು ಘೋಷಿಸಿದ ಅಮೃತ ಮಹೋತ್ಸವ ಯೋಜನೆಯಡಿ ಜಿಲ್ಲೆಯ 27 ಗ್ರಾಮ ಪಂಚಾಯ್ತಿ, 27 ಗ್ರಾಮೀಣ ವಸತಿ ಯೋಜನೆ, 25 ಶಾಲಾ ಸೌಲಭ್ಯ ಯೋಜನೆ, 25 ಆರೋಗ್ಯ ಮೂಲ ಸೌಕರ್ಯ ಉನ್ನತ್ತೀಕರಣ, 25 ಅಂಗನವಾಡಿ ಕೇಂದ್ರಗಳು, 325 ಸ್ವ ಸಹಾಯ ಕಿರು ಉದ್ದಿಮೆಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.

‘ಜನರ ಆಶೀರ್ವಾದದಿಂದ ಆಡಳಿತಕ್ಕೆ ಬಂದ ನಮ್ಮ ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ನಮ್ಮ ಸರ್ಕಾರ ಕನ್ನಡದ ನೆಲ, ಜಲ, ಭಾಷೆಯ ಬೆಳೆವಣಿಗೆಗೆ ಸಕಲ ರೀತಿಯಿಂದಲೂ ಶ್ರಮಿಸುತ್ತಿದೆ, ಕನ್ನಡ ನಮ್ಮ ಬದುಕು ಹಾಗೂ ಉಸಿರು. ಕನ್ನಡ ಭಾಷೆಯನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

‘ಕೋವಿಡ್‌ ಪರಿಸ್ಥಿತಿಯನ್ನು ಎದುರಿಸುವಲ್ಲಿ ನಮ್ಮ ಜಿಲ್ಲೆಯ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಕಡಿಮೆಯಾಗಿದ್ದು ಜನರು ನೆಮ್ಮದಿಯಿಂದ ಜೀವಿಸುವಂತಾಗಿದೆ. ಮುಂದೆಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ಹಾಕುವಲ್ಲೂ ನಮ್ಮ ಜಿಲ್ಲೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ’ ಎಂದು ಹೇಳಿದರು.

ಡಿ.ಅಭಿಲಾಷ್‌, ಕಟ್ಟೆ ಎಂ.ಎಸ್‌.ಕೃಷ್ಣಸ್ವಾಮಿ, ರೇವಂತ್‌ ರಾಜೀವ್‌, ಆರ್‌.ವಾಸು, ಜಯಶಂಕರ್‌, ಡಾ.ಎಂ.ಕೆಂಪಮ್ಮ, ರಜನಿರಾಜ್‌, ಹೊನ್ನಯ್ಯ, ಎಚ್‌.ವಿ.ಅಶ್ವಿನ್‌ ಕುಮಾರ್‌, ಕೆ.ಎಸ್‌.ಚಂದ್ರು, ಕೆ.ವಿ.ಬಲರಾಮ, ಸಿ.ಎನ್‌.ಮಂಜುನಾಥ್‌, ಜಯರಾಂ ಇಜ್ಜಲಘಟ್ಟ, ಡಿ.ದಶರಥ್‌ ಕುಮಾರ್‌ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದರು. ಸಂಘ ಸಂಸ್ಥೆಯಿಂದ ಅನನ್ಯ ಹಾರ್ಟ್‌ ಸಂಸ್ಥೆಯ ಬಿ.ಎಸ್‌.ಅನುಪಮಾ, ಮಮತೆಯ ಮಡಿಲು ಸಂಸ್ಥೆಯ ಕೆ.ಪಿ.ಅರುಣಾಕುಮಾರಿ, ಮಂಗಲ ಎಂ ಯೋಗೀಶ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದರು.

ಶಾಸಕರಾದ ಎಂ.ಶ್ರೀನಿವಾಸ್‌, ಕೆ.ಟಿ.ಶ್ರೀಕಂಠೇಗೌಡ, ಎನ್‌.ಅಪ್ಪಾಜಿಗೌಡ, ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು, ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಇದ್ದರು.

****

ಅರಳಿದ ಕನ್ನಡ ಕಸ್ತೂರಿ...

ಧ್ವಜಾರೋಹಣದ ನಂತರ ವಿವಿಧ ಶಲೆಗಳ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್ ಜಿಗಣಿ ಅವರು ರಚಿಸಿ ರಾಗಸಂಯೋಜಿಸಿರುವ ‘ಕನ್ನಡ ಕಸ್ತೂರಿ’ ಗೀತೆ ನೃತ್ಯ ನೋಡುಗರ ಕಣ್ಮನ ಸೆಳೆಯಿತು. ಈ ಗೀತೆಗೆ ನೀತು ನಿನಾದ್ ಸಂಗೀತಸಂಯೋಜನೆ ನೀಡಿದ್ದು, ಸಿಂಚನ್ ದೀಕ್ಷಿತ್ , ಆಲಾಪ್ ಬಿ.ಆರ್, ರಶ್ಮಿ ಧಮೇಂದ್ರ ಅವರ ಗಾಯನವಿದೆ. ಈ ಕುರಿತ ವಿಡಿಯೊ ಗೀತೆಯನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿಡುಗಡೆಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.