ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡದ ನಾಡಿನ ಪ್ರತಿಯೊಬ್ಬರ ಹೃದಯದ ಭಾಷೆ: ಬಿಇಒ ಯೋಗೇಶ್

Published : 19 ಆಗಸ್ಟ್ 2024, 14:33 IST
Last Updated : 19 ಆಗಸ್ಟ್ 2024, 14:33 IST
ಫಾಲೋ ಮಾಡಿ
Comments

ನಾಗಮಂಗಲ: ಕನ್ನಡ ಭಾಷೆಯು ನಾಡಿನ ಪ್ರತಿಯೊಬ್ಬರ ಭಾವನೆ, ಸಂಭ್ರಮ, ದುಃಖ, ನೋವು-ನಲಿವು ಎಲ್ಲವನ್ನೂ ಅಭಿವ್ಯಕ್ತಿಗೊಳಿಸುವ ಹೃದಯದ ಭಾಷೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್ ಹೇಳಿದರು.

 ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಭಿಯಾನದ ಅಂಗವಾಗಿ ತಾಲ್ಲೂಕಿನ ದೇವಲಾಪುರ ಹೋಬಳಿಯ ಕುಡುಗಬಾಳು, ಶೆಟ್ಟಹಳ್ಳಿ, ದೇವಲಾಪುರ, ತಟ್ಟಹಳ್ಳಿ ಸೇರಿದಂತೆ ಪಟ್ಟಣದ ವಿವಿಧೆಡೆ ಸೋಮವಾರ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿಯಾಗಿ ಸ್ವಾಗತ ಕೋರಿದ ನಂತರ ಸೌಮ್ಯಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು. ಕನ್ನಡಕ್ಕೆ ಕೊರಳೆತ್ತು ನಿನ್ನ ಕೈ ಪಾಂಚಜನ್ಯವಾಗುವುದು. ಕನ್ನಡಕ್ಕೆ ಕಿರುಬೆರಳನ್ನಾದರೂ ಎತ್ತು ನಿನ್ನ ಕೈ ಗೋವರ್ಧನಗಿರಿಯಾಗುವುದು ಎಂಬ ಕುವೆಂಪು ಅವರು ನುಡಿಯು ಕನ್ನಡ ಭಾಷೆಗಿರುವ ಶ್ರೇಷ್ಠತೆಯನ್ನು ಸಾರುತ್ತದೆ’ ಎಂದರು.

ಹಿರಿಯ ಸಾಹಿತಿ ನಾ.ಸು.ನಾಗೇಶ್ ಮಾತನಾಡಿ, ‘ಕನ್ನಡದ ಹುರುಪನ್ನು ನಾವೆಲ್ಲರೂ ಎತ್ತಿ ತೋರಿಸುತ್ತಿದ್ದೇವೆ. ಕನ್ನಡವೇ ನಮ್ಮ ಅಸ್ತಿತ್ವ. ಕನ್ನಡವೇ ನಮ್ಮ ಜೀವನವಾಗಿದ್ದು, ಉಸಿರು ಕೂಡ ಕನ್ನಡವೇ’ ಎಂದರು.

‘ತಾಲ್ಲೂಕಿನಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಸಿಕ್ಕಿರುವ ಅಭೂತಪೂರ್ವ ಸ್ವಾಗತವನ್ನು ನೋಡಿದರೆ ಕನ್ನಡದ ಮೇಲಿರುವ ಅಭಿಮಾನ ಎಷ್ಟು ಎಂದು ತಿಳಿಯುತ್ತದೆ. ಈ ನಿಟ್ಟಿನಲ್ಲಿ ರಥಯಾತ್ರೆಯನ್ನು ಸಂಭ್ರಮ ಮತ್ತು ಗೌರವಯುತವಾಗಿ ಯಾತ್ರೆ ಬೀಳ್ಕೊಡಲಾಗುತ್ತದೆ’ ಎಂದು ತಹಶೀಲ್ದಾರ್ ಜಿ.ಎಂ.ಸೋಮಶೇಖರ್ ತಿಳಿಸಿದರು.

ತೆಂಗಿನ ಕಾಯಿ ಹೊಡೆದು ಪೂಜೆ ಸಲ್ಲಿಸಿದ ಜನರು

ಮದ್ದೂರಿನಿಂದ ಕೊಪ್ಪ ಮಾರ್ಗವಾಗಿ ತಾಲ್ಲೂಕಿನ ಕುಡುಗುಬಾಳಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಹಶಿಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಇಒ ಸೇರಿದಂತೆ ಅಧಿಕಾರಿಗಳು ಪೂಜೆ ಸಲ್ಲಿಸಿ ಸ್ವಾಗತ ಕೋರಿದರು.  ರಥಯಾತ್ರೆ ಸಾಗಿದ ಕುಡುಗುಬಾಳು, ಶೆಟ್ಟಹಳ್ಳಿ, ದೇವಲಾಪುರ, ತಟ್ಟಹಳ್ಳಿ, ಬಳಪದಮಂಟಿಕೊಪ್ಪಲು, ಗದ್ದೆಭೂವನಹಳ್ಳಿ, ನಾಗಮಂಗಲ ಪಟ್ಟಣ ಸೇರಿದಂತೆ ಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಈಡುಗಾಯಿ ಹೊಡೆದು, ಪುಷ್ಪಾರ್ಚನೆ ಮಾಡುವ ಮೂಲಕ ಕನ್ನಡ ನಾಡು, ನುಡಿಯ ಕುರಿತ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ರಸ್ತೆಯುದ್ದಕ್ಕೂ ನೂರಾರು ಮೀಟರ್ ಉದ್ದದ ನಾಡ ಧ್ವಜವನ್ನು ಹಿಡಿದು ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗಹಿಸಿದ್ದರು. ಅಲ್ಲದೇ ವೀರಗಾಸೆ, ಪೂಜಾ ಕುಣಿತ, ಡೊಳ್ಳುಕುಣಿತ, ತಮಟೆ ಸೇರಿದಂತೆ ಜನಪದ ಕಲಾ ತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು‌. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಹ ಕಲಾತಂಡಗಳೊಂದಿಗೆ ಹೆಜ್ಜೆಹಾಕಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ತಾಲ್ಲೂಕು ಪಂಚಾಯಿತಿ ಇಒ ಸತೀಶ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ತಾಲ್ಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್,ಸಿಡಿಪಿಒ ಕೃಷ್ಣಮೂರ್ತಿ, ಜನಪದ ಅಕಾಡೆಮಿ ಸಹ ಸಹಸದಸ್ಯ ಮಂಜೇಶ್ ಚನ್ನಾಪುರ, ಹಿರಿಯ ಸಾಹಿತಿ ನಾ.ಸು.ನಾಗೇಶ್, ರಾಜಸ್ವನಿರೀಕ್ಷಕರಾದ ಮಧು, ಮಲ್ಲಿಕಾರ್ಜುನ್, ಕನ್ನಸಂಘದ ನಟರಾಜ್, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ನಾಗಮಂಗಲ ಪಟ್ಟಣದ ಮಂಡ್ಯ ವೃತ್ತದಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಾಗಮಂಗಲ ಪಟ್ಟಣದ ಮಂಡ್ಯ ವೃತ್ತದಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT