ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ತುಂಬಿಸುವ ಯೋಜನೆಗೆ ಹಣ ದೊರೆವುದೇ?

ನಾಲೆಯ ಕೊನೇ ಭಾಗದ ರೈತರ ಪಾಡು ಕೇಳುವವರಿಲ್ಲ, ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ
Last Updated 21 ಫೆಬ್ರುವರಿ 2022, 20:30 IST
ಅಕ್ಷರ ಗಾತ್ರ

ಮಂಡ್ಯ: ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರು ತಡೆದು ಕೆರೆ ತುಂಬಿಸಿಕೊಳ್ಳುವ ಕಾರ್ಯವಾಗದ ಕಾರಣ ನಾಲಾ ಕೊನೆ ಭಾಗದ ರೈತರಿಗೆ ನೀರಿನ ಕೊರತೆ ನೀಗಿಲ್ಲ. ಕೆರೆ ಅಭಿವೃದ್ಧಿ, ಕೆರೆಗಳಿಗೆ ನಾಲೆ ಸಂಪರ್ಕಕ್ಕೆ ಸಮಗ್ರ ಯೋಜನೆಯ ಅವಶ್ಯಕತೆಯಿದ್ದು ಅದಕ್ಕೆ ಈ ಬಾರಿಯ ಬಜೆಟ್‌ನಲ್ಲಾದರೂ ಮುಖ್ಯಮಂತ್ರಿಗಳು ಅನುದಾನ ಮೀಸಲಿಡಬೇಕು ಎಂಬುದು ರೈತರ ಒತ್ತಾಯವಾಗಿದೆ.

ಕಾವೇರಿ ಜಲಾನಯದ ಪ್ರದೇಶದಲ್ಲಿ ಭಾರಿ ಮಳೆ ಬಂದರೆ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಮಿಳುನಾಡಿಗೆ ನಿಗದಿಯಾಗಿರುವ ನೀರಿಗಿಂತ ಹಲವು ಪಟ್ಟು ಹೆಚ್ಚು ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಅಪಾರ ಪ್ರಮಾಣದ ನೀರು ಸಮುದ್ರ ಸೇರುತ್ತದೆ.

ವ್ಯರ್ಥವಾಗಿ ಹರಿಯುವ ನೀರು ತಡೆದು ಕೆರೆ ತುಂಬಿಸಿಕೊಳ್ಳುವ ಯೋಜನೆಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿಗೊಳಿಸಿಲ್ಲ. ಹರಿದು ಹೋಗುವ ಅಪಾರ ಪ್ರಮಾಣದ ನೀರು ನೋಡಿ ರೈತರು ಮರುಕ ಪಡುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹರಿಯವ ನೀರು ತಡೆದು ಕೆರೆ, ಕಟ್ಟೆ ತುಂಬಿಸಿಕೊಳ್ಳುವ ಯೋಜನೆಗಳು ಸಾಕಾರಗೊಂಡಿಲ್ಲ.

‘ಮದ್ದೂರು, ಮಳವಳ್ಳಿ ಭಾಗದಲ್ಲಿ ನಾಲೆ ನೀರು ಕೊನೆಯ ಭಾಗದವರೆಗೂ ತಲುಪುತ್ತಿಲ್ಲ. ನಾಲೆಗಳು ಆಧುನೀಕರಣಗೊಂಡರೂ ಟೈಲ್ಯಾಂಡ್‌ ಸಮಸ್ಯೆ ಬಗೆಹರಿದಿಲ್ಲ. ನಾಲೆ ನೀರನ್ನು ಜಿಲ್ಲೆಯ ಎಲ್ಲಾ ಕೆರೆಗಳಿಗೆ ಸಂಪರ್ಕಿಸುವ ಬೃಹತ್‌ ಯೋಜನೆಯನ್ನು ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಬೇಕು’ ಎಂದು ರೈತ ಮುಖಂಡ ನಾಗರಾಜ್‌ ಒತ್ತಾಯಿಸಿದರು.

ಮದ್ದೂರು ತಾಲ್ಲೂಕು ಎಡದಂಡೆ, ಬಲದಂಡೆ ನಾಲೆಗಳಿಗೆ ತಲುಪಿಲ್ಲ. ಶಿಂಷಾ ತಟದ ಆತಗೂರು, ಮಲ್ಲನಕುಪ್ಪೆ, ಕೆಸ್ತೂರು, ತೈಲೂರು, ಭೀಮನಕೆರೆ, ಬ್ಯಾಡರಹಳ್ಳಿ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ನಾಲೆಯ ಆರಂಭಿಕ ಭಾಗದ ರೈತರು ನೀರು ಬಿಟ್ಟುಕೊಳ್ಳುತ್ತಿರುವ ಕಾರಣ ಕೊನೆಯವರೆಗೂ ನೀರು ಹರಿಯುತ್ತಿಲ್ಲ.

ಮಳವಳ್ಳಿ ತಾಲ್ಲೂಕಿನ ‘ಕನ್ನಂಬಾಡಿಯಿಂದ ಯತ್ತಂಬಾಡಿವರೆಗೆ’ ಕನಸು ಇನ್ನೂ ನನಸಾಗಿಲ್ಲ. ಧನಗೂರು, ಡಿ.ಹಲಸಹಳ್ಳಿ, ಹಾಡ್ಲಿ, ಅಗಸನಪುರ, ಕಂದೇಗಾಲ, ನೆಲಮಾಕನಹಳ್ಳಿ ಭಾಗಗಳಿಗೆ ನೀರು ಬರುತ್ತಿಲ್ಲ. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಹೇಮಾವತಿ ಬಲದಂಡೆ, ಎಡದಂತೆ ನಾಲೆಗಳಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕಾಲುವೆ ಕಾಮಗಾರಿಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಅಲ್ಲಿ ನೀರು ಹರಿಸುವ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ರೈತರು ದೂರುತ್ತಾರೆ.

ಕೆ.ಆರ್‌.ಪೇಟೆ ತಾಲ್ಲೂಕಿನ ಹಲವೆಡೆ ರೈತರು ನಾಲೆಗಳನ್ನು ಮುಚ್ಚಿದ್ದಾರೆ. ಹೇಮಾವತಿ ನೀರು ಹರಿದು ಬರುತ್ತದೆ ಎಂಬ ಆಸೆಯಿಂದ ಅವರು ನಾಲೆಗೆ ಜಾಗ ಕೊಟ್ಟಿದ್ದರು. ಆದರೆ ನೀರು ಬಾರದ ಕಾರಣ ವ್ಯರ್ಥವಾಗುತ್ತಿದ್ದ ಭೂಮಿ ಉಳಿಸಿಕೊಳ್ಳುವ ಉದ್ದೇಶದಿಂದ ನಾಲೆ ಮುಚ್ಚಿದ್ದಾರೆ.

‘ಬೂಕನಕೆರೆ ಹೋಬಳಿಯ 64ನೇ ವಿತರಣಾ ನಾಲೆ ನಿರ್ಮಿಸಿ ಹಲವು ವರ್ಷಗಳೇ ಉರುಳಿವೆ. ಅಲ್ಲಿ ಒಮ್ಮೆಯೂ ನೀರು ಹರಿದ ಉದಾಹರಣೆಗಳಿಲ್ಲ. ಹೀಗಾಗಿ ಆ ಭಾಗದ ರೈತರು ನಾಲೆಯನ್ನು ಮುಚ್ಚಿ ಜಮೀನು ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಈ ಬಜೆಟ್‌ನಲ್ಲಾದರೂ ಕೆರೆ ಅಭಿವೃದ್ಧಿಗೆ ಹಣ ಘೋಷಣೆ ಮಾಡಬೇಕು’ ಎಂದು ರೈತ ಮುಖಂಡ ಬಸವರಾಜ್‌ ಒತ್ತಾಯಿಸಿದರು.

‘ಸಣ್ಣ ನೀರಾವರಿ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆಯಲಾಗುವುದು. ಕೆರೆಗಳಿಗೆ ನಾಲೆಯ ಸಂಪರ್ಕ ಕಲ್ಪಿಸುವ ಒಂದು ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಹೇಳಿದರು.

*****

ರೈತರಿಂದಲೇ ನೀರು ಪೋಲು

‘ಮಂಡ್ಯ ಜಿಲ್ಲೆಯ ರೈತರು ಅಪಾರ ಪ್ರಮಾಣದ ನೀರು ಪೋಲು ಮಾಡುತ್ತಿದ್ದಾರೆ. ನೀರಿನ ಸದ್ಬಳಕೆಯ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಹಳ್ಳಕೊಳ್ಳ, ಕಾಲುವೆಗಳಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ರೈತರಿಗೆ ಜಲ ಸಾಕ್ಷರತೆ ಬಗ್ಗೆ ತರಬೇತಿ ನೀಡಬೇಕು’ ಎಂದು ನೀರಾವರಿ ತಜ್ಞ ಡಾ.ವೆಂಕಟೇಶ್‌ ಹೇಳಿದರು.

‘ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಲೆಯ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ರೈತರು ಬೇಕೆಂದಲ್ಲಿ ನೀರು ಹರಿಸಿಕೊಳ್ಳುವುದನ್ನು ತಪ್ಪಿಸಬೇಕು. ಅದಕ್ಕಾಗಿ ನಾಲೆಯುದ್ದಕ್ಕೂ ನೀರುಗಂಟಿಗಳನ್ನು ನೇಮಕ ಮಾಡಬೇಕು. ಪೋಲಾಗುವುದನ್ನು ತಡೆದರೆ ಕೊನೆ ಭಾಗದವರೆಗೂ ನೀರು ತಲುಪುತ್ತದೆ.

***

ಅಂಕಿ–ಅಂಶ

ಜಿಲ್ಲೆಯ ಕೆರೆಗಳ ಸಂಖ್ಯೆ: 716
ಸಣ್ಣ ನೀರಾವರಿ ಇಲಾಖೆ: 48
ಕಾವೇರಿ ನೀರಾವರಿ ನಿಗಮ: 188
ಜಿಲ್ಲಾ ಪಂಚಾಯಿತಿ: 580

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT