ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಖಾತೆಯ ನಿರೀಕ್ಷೆಯಲ್ಲಿ ನಾರಾಯಣಗೌಡ

ಮಂಡ್ಯ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಅನುಮಾನ?
Last Updated 28 ಜುಲೈ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಯಾರೆಲ್ಲಾ ಮಂತ್ರಿಗಳಾಗಲಿದ್ದಾರೆ ಎಂಬ ಚರ್ಚೆ ಗರಿಗೆದರಿದೆ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಕೆ.ಸಿ.ನಾರಾಯಣಗೌಡ ಅವರಿಗೆ ಮತ್ತೆ ಸಚಿವ ಸ್ಥಾನ ಒಲಿಯುವುದೇ ಎಂಬ ಚರ್ಚೆಯೂ ಜಿಲ್ಲೆಯಲ್ಲಿದೆ.

‘ಮುಂಬೈ ತಂಡ’ದ ನಾಯಕರಲ್ಲಿ ಕೆ.ಸಿ.ನಾರಾಯಣಗೌಡ ಅವರೂ ಇದ್ದಾರೆ. ಅವರೆಲ್ಲರಿಗೂ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಇದ್ದು ನಾರಾಯಣಗೌಡರಿಗೆ ಸಚಿವ ಸ್ಥಾನ ದೊರೆಯಲಿದೆ ಎಂದೇ ಹೇಳಲಾಗುತ್ತಿದೆ. ಜಿಲ್ಲಾವಾರು ಸ್ಥಾನ ಪರಿಗಣಿಸಿದರೆ ಜಿಲ್ಲೆಯಲ್ಲಿ ಇವರೊಬ್ಬರೇ ಬಿಜೆಪಿ ಶಾಸಕರಾಗಿರುವ ಕಾರಣ ಸಚಿವ ಸ್ಥಾನ ದೊರೆಯುವ ಎಲ್ಲಾ ಸೂಚನೆಗಳಿವೆ. ಆದರೆ ಅವರಿಗೆ ಉತ್ತಮ ಖಾತೆ ಸಿಗುವುದು ಅನುಮಾನ ಎಂದು ಸ್ವಪಕ್ಷೀಯ ಮುಖಂಡರೇ ಹೇಳುತ್ತಿದ್ದಾರೆ.

ಕಳೆದೊಂದು ವರ್ಷದಿಂದ ನಾರಾಯಣಗೌಡರ ಖಾತೆ ಒಮ್ಮೆ ಬದಲಾಗಿದ್ದು ದುರ್ಬಲ ಖಾತೆಗಳನ್ನೇ ನೀಡಲಾಗಿದೆ. ಮೊದಲ ಬಾರಿ ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಿಕ್ಕಿತ್ತು. ಕೆಲವೇ ತಿಂಗಳುಗಳಲ್ಲಿ ಬದಲಾಯಿಸಿ ಯುವಸಬಲೀಕರಣ, ಕ್ರೀಡಾ ಇಲಾಖೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಖಾತೆಯನ್ನು ನೀಡಲಾಯಿತು.

ಖಾತೆ ಬದಲಾವಣೆ ಕುರಿತಂತೆ ನಾರಾಯಣಗೌಡರಿಗೆ ಮುನಿಸಿತ್ತು, ಆದರೆ ಒಪ್ಪಿಕೊಳ್ಳಬೇಕಾಯಿತು. ಎರಡು ಬಾರಿಯೂ ದುರ್ಬಲ ಖಾತೆ ಪಡೆದಿದ್ದ ಅವರು ಈ ಬಾರಿ ಉತ್ತಮ ಖಾತೆ ನೀಡುತ್ತಾರೆ ಎಂಬ ನಿರೀಕ್ಷೆ ನಾರಾಯಣಗೌಡರಲ್ಲಿದೆ.

ಜಿಲ್ಲಾ ಉಸ್ತುವಾರಿ ಅನುಮಾನ: ನಾರಾಯಣಗೌಡರಿಗೆ ಸಚಿವ ಸ್ಥಾನ ಸಿಗುವುದು ಖಚಿತ, ಆದರೆ ಜಿಲ್ಲಾ ಉಸ್ತುವಾರಿ ದೊರೆಯುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಕಳೆದ ಬಾರಿ ಉಸ್ತುವಾರಿಯಾಗಿ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ ಎಂಬ ದೂರುಗಳು ಮುಖ್ಯಮಂತ್ರಿಗೆ ತಲುಪಿವೆ. 2 ತಿಂಗಳ ಹಿಂದಷ್ಟೇ ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಅದರಲ್ಲಿ ನಾರಾಯಣಗೌಡ ಹೆಸರು ಕೂಡ ಇದೆ ಎನ್ನಲಾಗಿತ್ತು.

ಈಗ ಮುಖ್ಯಮಂತ್ರಿಯೇ ಬದಲಾಗಿದ್ದು ಉಸ್ತುವಾರಿಗಳ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಷಯ ಕುತೂಹಲ ಮೂಡಿಸಿದೆ. ಉಸ್ತುವಾರಿ ಸಚಿವರಾಗಿ ನಾರಾಯಣಗೌಡರ ಕೆಲಸಗಳ ಬಗ್ಗೆ ಸ್ವಪಕ್ಷೀಯರಲ್ಲೇ ಆಕ್ಷೇಪ ಇದೆ. ಕೋವಿಡ್‌ 2ನೇ ಅಲೆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲಿಲ್ಲ ಎಂಬ ದೂರುಗಳಿವೆ.

‘ಯಾವುದೇ ಪೂರ್ವ ತಯಾರಿ ಇಲ್ಲದೇ, ಯಾರಿಗೂ ತಿಳಿಸದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇತರ ಮುಖಂಡರನ್ನು ವಿಶ್ವಾಸಕ್ಕೆ ಪಡೆಯುತ್ತಿರಲಿಲ್ಲ, ಕೆ.ಆರ್‌.ಪೇಟೆಗೆ ಕ್ಷೇತ್ರಕ್ಕೆ ಮಾತ್ರ ಉಸ್ತುವಾರಿ ಸಚಿವರಾಗಿದ್ದರು, ಈ ಕುರಿತು ವರಿಷ್ಠರಲ್ಲಿ ದೂರು ನೀಡಲಾಗಿತ್ತು. ಹೀಗಾಗಿ ಸಚಿವ ಸ್ಥಾನ ಸಿಕ್ಕರೂ ಉಸ್ತುವಾರಿ ಸಿಗುವುದು ಅನುಮಾನ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ನಾರಾಯಣಗೌಡ ಅವರು ಕಾರ್ಯವೈಖರಿ ಬಗ್ಗೆ ಜಿಲ್ಲೆಯ ಅಧಿಕಾರಿಗಳಲ್ಲೂ ಅಸಮಾಧಾನವಿದೆ. ಇಲಾಖೆಗಳ ಮಾಹಿತಿ ಇಲ್ಲದೆ ಮಾತನಾಡುತ್ತಾರೆ. ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡುತ್ತಾರೆ, ನಿಂದನೆ ಮಾಡುತ್ತಾರೆ ಎಂಬ ದೂರುಗಳಿವೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿವರೆಗೂ ದೂರು ತಲುಪಿತ್ತು.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಾರಾಯಣಗೌಡರಿಗೆ ಸಚಿವ ಸ್ಥಾನ ದೊರೆಯುವುದು ನಿಶ್ಚಿತ, ಆದರೆ ಜಿಲ್ಲಾ ಉಸ್ತುವಾರಿ ಸಿಗುವುದು ಕಷ್ಟ. ಜಿಲ್ಲೆಯ ಜೆಡಿಎಸ್‌ ಶಾಸಕರಿಗೆ ತಿರುಗೇಟು ನೀಡುವ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಶಕ್ತಿ ತುಂಬುವ ನಾಯಕರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡುತ್ತಾರೆ ಎಂಬ ಮಾತುಗಳು ನಿಚ್ಚಳವಾಗಿವೆ.

******

ಮೈಷುಗರ್‌ನತ್ತ ನೋಡುವರೇ ಬೊಮ್ಮಾಯಿ?

ಬಿ.ಎಸ್‌.ಯಡಿಯೂರಪ್ಪ ಅವರು ತವರು ಜಿಲ್ಲೆಯ ಮೈಷುಗರ್‌ ಕಾರ್ಖಾನೆಯತ್ತ ತಿರುಗಿ ನೋಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆ ಈಡೇರಿಸಲಿಲ್ಲ ಎಂಬ ಆರೋಪಗಳಿವೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾದರೂ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸುವರೇ ಎಂಬ ಪ್ರಶ್ನೆ ಜಿಲ್ಲೆಯ ರೈತರಲ್ಲಿದೆ.

‘ಬಸವರಾಜ ಬೊಮ್ಮಾಯಿ ಅವರೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಜೆಡಿಎಸ್‌ ಶಾಸಕರು ಆಪ್ತ ಸಂಬಂಧ ಹೊಂದಿದ್ದಾರೆ. ಬೊಮ್ಮಾಯಿ ಅವರು ಜನತಾ ಪರಿವಾರದಲ್ಲಿ ಇದ್ದವರೇ ಆಗಿದ್ದಾರೆ. ಹೀಗಾಗಿ ಜೆಡಿಎಸ್‌ ಶಾಸಕರು ಜವಾಬ್ದಾರಿ ತೆಗೆದುಕೊಂಡು ಮುಖ್ಯಮಂತ್ರಿಗೆ ಒತ್ತಡ ಹಾಕಿ ಮೈಷುಗರ್‌ ಕಾರ್ಖಾನೆ ಆರಂಭಿಸಬೇಕು’ ಎಂದು ರೈತ ಮುಖಂಡರ ಕೆ.ಬೋರಯ್ಯ ತಿಳಿಸಿದರು.

*****

ಬಿಜೆಪಿ ಹೈಕಮಾಂಡ್‌, ನಮ್ಮ ನಾಯಕರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಅವಕಾಶ ಸಿಕ್ಕರೆ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ

–ಕೆ.ಸಿ.ನಾರಾಯಣಗೌಡ, ಕೆ.ಆರ್‌.ಪೇಟೆ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT