ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಿಶ್ರ ಬೇಸಾಯ, ಕೈತುಂಬ ಆದಾಯ: ಸಾವಯವ ಪದ್ಧತಿಯಲ್ಲಿ ಸೈ ಎನಿಸಿಕೊಂಡ ಕವಿತಾ

ಖಾಸಗಿ ಉದ್ಯೋಗಕ್ಕೆ ಬೈ, ಕೃಷಿಗೆ ಜೈ
ಉಲ್ಲಾಸ್.ಯು.ವಿ
Published : 4 ಆಗಸ್ಟ್ 2024, 6:15 IST
Last Updated : 4 ಆಗಸ್ಟ್ 2024, 6:15 IST
ಫಾಲೋ ಮಾಡಿ
Comments

ನಾಗಮಂಗಲ: ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿಯಾಗಿದ್ದ ಎಸ್‌. ಕವಿತಾ ಅವರು, ಸ್ವಗ್ರಾಮಕ್ಕೆ ಮರಳಿ ಮಿಶ್ರ ಬೇಸಾಯ ಮಾಡಿ ಕೈತುಂಬ ಆದಾಯ ಗಳಿಸುತ್ತಿದ್ದಾರೆ. 

ಹೌದು, ತಾಲ್ಲೂಕಿನ ಹೊಣಕೆರೆ ಹೋಬಳಿಯ ಬುರುಡುಗುಂಟೆ ಗ್ರಾಮದಲ್ಲಿ ನೆಲೆಸಿರುವ ಎಸ್. ಕವಿತಾ ಅವರು, ಹಲವು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕೋವಿಡ್‌ ಲಾಕ್‌ಡೌನ್ ಸಂದರ್ಭ ಸ್ವಗ್ರಾಮಕ್ಕೆ ಮರಳಿದ ಅವರು ಇರುವ ನಾಲ್ಕು ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯದಲ್ಲಿ ಸಾವಯವ ಪದ್ಧತಿ ಅಳವಡಿಸಿಕೊಂಡು ಉತ್ತಮ ಫಸಲು ಪಡೆದು ಇತರರಿಗೂ ಮಾದರಿಯಾಗಿದ್ದಾರೆ.

ಬೇಸಾಯಕ್ಕೆಂದು ಇರುವ ಎರಡು ಕೊಳವೆ ಬಾವಿಯಲ್ಲಿ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದಾರೆ, ವಾಟರ್ ಆ್ಯಪಲ್, ಸೀಬೆ, ಸೀತಾಫಲ, ರಾಮಫಲ, ಹಲಸು, ಬಾಳೆ, ಮಾವು, ಬೆಣ್ಣೆಹಣ್ಣು, ಜ್ಯೂಸ್ ಹಣ್ಣು, ಚಕ್ಕೆ, ನಿಂಬೆ, ಕರಿಬೇವು, ಮರಗೆಣಸು, ಶ್ರೀಗಂಧ, ದಾಳಿಂಬೆ, ಕಾಫಿ, ಬೆಂಡೆ, ಬದನೆ, ಟೊಮೆಟೊ, ನುಗ್ಗೆ, ಕತ್ತಿಕಾಯಿ, ದಪ್ಪ ಮೆಣಸಿನಕಾಯಿ, ಸೋರೆಕಾಯಿ, ಹರಿಶಿನಕೊನೆ, ಸುವರ್ಣಗೆಡ್ಡೆ, ರಾಜ್‌ ಈರುಳ್ಳಿ ಬೆಳೆಯಲ್ಲಿ ಉತ್ತಮ ಫಸಲು ಪಡೆಯುತ್ತಿದ್ದಾರೆ.

ಹೈನುಗಾರಿಕೆ:

ಇದರ ಜೊತೆಗೆ ಉಪಕಸುಬಾಗಿ ಹೈನುಗಾರಿಕೆ, ಜೇನುಕೃಷಿ ಅಳವಡಿಕೆ ಮಾಡಿಕೊಂಡಿರುವುದು ವಿಶೇಷವಾಗಿದೆ. ತಾವು ಸಾಕಿರುವ ಎಮ್ಮೆ, ಹಸು, ಆಡು, ಕುರಿ ಕೋಳಿಗಳ ಮೇವಿಗಾಗಿ ಜಮೀನಿನಲ್ಲಿ ಸೀಮೆ ಹುಲ್ಲು ಮತ್ತು ಚಂಬೆ ಮರಗಳನ್ನು ಬೆಳೆಸಿದ್ದಾರೆ. ಇವು ಮೇವು ಪೂರೈಸಲು ಸಹಕಾರಿಯಾಗಿದೆ. ಹೈನುಗಾರಿಕೆ ತ್ಯಾಜ್ಯವನ್ನು ಬಳಸಿ ಸಾವಯವ ಗೊಬ್ಬರವನ್ನು ಉತ್ಪಾದಿಸುತ್ತಾರೆ. ಜೊತೆಗೆ ಹೂವಿನ ಬೆಳೆ ಬೆಯುವುದರಿಂದ ಜೇನು ಕೃಷಿಗೂ ಪೂರಕ ವಾತಾವರಣ ಸೃಷ್ಟಿಸಿಕೊಂಡಿದ್ದಾರೆ.

ಒಂದೆಲಗ, ದೊಡ್ಡಪತ್ರೆ, ಚಕ್ರಮುನಿ, ಅಲೋವೆರಾ, ನಿಂಬೆಹುಲ್ಲು, ನಾಗದಾಳಿ, ಪುದೀನ, ಬ್ರಹ್ಮದಂಡೆ ಸೇರಿದಂತೆ ವಿವಿಧ ಬಗೆಯ ಔಷಧೀಯ ಸಸ್ಯಗಳನ್ನು ಸಹ ಕೃಷಿ ಮಾಡಿದ್ದಾರೆ. ಸ್ಥಳೀಯರು ಚಿಕಿತ್ಸೆಗಾಗಿ ಸಸ್ಯಗಳನ್ನು ಕೇಳಿದರೆ ಉಚಿತವಾಗಿ ನೀಡುವ ಇವರು ಸ್ಥಳೀಯರ ಪ್ರೀತಿ ಪಾತ್ರರಾಗಿದ್ದಾರೆ.

ಒಂಟಿ ಎತ್ತಿನಿಂದ ಉಳುಮೆ:

ಜಮೀನಿನಲ್ಲಿ ಕುಂಟೆ ಹೊಡೆಯಲು, ಪಟ ಹೊಡೆಯಲು, ಕಳೆ ತೆಗೆಯಲು ಜೋಡಿ ಎತ್ತು ಬಳಸುವುದು ಸಾಮಾನ್ಯವಾಗಿದೆ. ಆದರೆ, ಕವಿತಾ ಅವರು ಹೊಸ ಪ್ರಯೋಗವೆಂಬಂತೆ ಬೆಳೆಗಳು ಹಾಳಾಗದಂತೆ ಒಂಟಿ ಎತ್ತನ್ನು ಬಳಸಿ ಉಳುಮೆ ಮಾಡುವ ವಿಧಾನ ಕಂಡುಕೊಂಡಿದ್ದಾರೆ. ಎರೆಹುಳು ಗೊಬ್ಬರದಿಂದ ಜೀವಾಮೃತ ಸಾವಯವ ಗೊಬ್ಬರ ತಯಾರು ಮಾಡಿಕೊಳ್ಳುತ್ತಾರೆ.

ತಾಲ್ಲೂಕಿನಲ್ಲಿ ಬಹುತೇಕ ರೈತರಿಗೆ ಪರಿಚಯವಿಲ್ಲದ ‘ಬಳ್ಳಿ ಆಲೂಗಡ್ಡೆ’ ಬೆಳೆದಿರುವುದು ವಿಶೇಷ ಪ್ರಯತ್ನವಾಗಿದೆ. ಈ ಬೆಳೆಯು ಔಷಧೀಯ ಗುಣವನ್ನು ಹೊಂದಿದ್ದು, ಮಧುಮೇಹ ರೋಗಿಗಳು ಹೆಚ್ಚಾಗಿ ಬೆಳಸಬಹುದಾಗಿದೆ.

ವರ್ಷಕ್ಕೆ 15 ಲಕ್ಷದವರೆಗೆ ಲಾಭ!

ಹೊಲದಲ್ಲಿ ಬೆಳೆಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ಕೃಷಿ ಹೊಂಡ ನಿರ್ಮಿಸಿರುವ ಜೊತೆಗೆ ಇರುವ ಕೊಳವೆ ಬಾವಿಗಳಲ್ಲಿ ನೀರು ಪೋಲಾಗದಂತೆ ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಕೃಷಿ ಚಟುವಟಿಕೆಗಳಿಂದ ವಾರ್ಷಿಕವಾಗಿ ಎಲ್ಲಾ ವೆಚ್ಚಗಳನ್ನು ಕಳೆದು ₹10 ರಿಂದ 15 ಲಕ್ಷ ಲಾಭ ಗಳಿಸುವ ಎಸ್‌.ಕವಿತಾ ಅವರ ಕೃಷಿ ಸಾಧನೆ ಗುರುತಿಸಿ ಹಲವು ಪ್ರಶಸ್ತಿಗಳು ಬಂದಿವೆ. 10 ಗುಂಟೆಯಲ್ಲಿ ಕಾಕಡ ಒಂದು ಎಕರೆಯಲ್ಲಿ ಸುಗಂಧರಾಜ 10 ಗುಂಟೆಯಲ್ಲಿ  ಕಾಡುಮಲ್ಲಿಗೆಯೊಂದಿಗೆ ಮಿಶ್ರಬೆಳೆಯಾಗಿ ಪನ್ನೀರ್ ಪತ್ರೆ 20 ಗುಂಟೆಯಲ್ಲಿ ಗುಂಡುಮಲ್ಲಿಗೆ ಸೇರಿದಂತೆ ಸಣ್ಣ ಪ್ರಮಾಣದಲ್ಲಿ ಕನಕಾಂಬರ ಸಂಪಿಗೆ ಗುಲಾಬಿ ಮೈಸೂರು‌ ಮಲ್ಲಿಗೆ ಹೂವುಗಳನ್ನು ವರ್ಷ ಪೂರ್ತಿ ಬೆಳೆಯುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ.

ಕೃಷಿ ಎಂದರೆ ನಷ್ಟ ಎಂಬ ಪೂರ್ವಗ್ರಹ ಯುವಕರಲ್ಲಿದೆ. ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದರೆ ಕೃಷಿಯಲ್ಲಿ ಖುಷಿ ಕಾಣಬಹುದು ಎಂಬುದಕ್ಕೆ ನಾನೇ ಉದಾಹರಣೆ.
ಎಸ್.ಕವಿತಾ, ರೈತ ಮಹಿಳೆ, ಬುರುಡುಗುಂಟೆ
ರೈತರು ಏಕ ಬೆಳೆ ಪದ್ಧತಿಗೆ ಜೋತುಬಿದ್ದು ನಷ್ಟ ಅನುಭವಿಸುತ್ತಿದ್ದಾರೆ. ಕವಿತಾ ಅವರು ಮಿಶ್ರ ಬೇಸಾಯ ಸಾಧನೆಗೆ ಅತ್ಯುತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಿದ್ದೇವೆ
ಯುವರಾಜ್, ಕೃಷಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT