–ಗಣಂಗೂರು ನಂಜೇಗೌಡ
ಶ್ರೀರಂಗಪಟ್ಟಣ: ಈ ಬಾರಿ ಶ್ರೀರಂಗಪಟ್ಟಣ ದಸರಾ ಉತ್ಸವ ಅ.16ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ದಸರಾ ಉತ್ಸವ ಆರಂಭವಾಗಲಿರುವ ಪಟ್ಟಣ ಸಮೀಪದ ದಸರಾ ಬನ್ನಿ ಮಂಟಪಕ್ಕೆ ಕಾಯಕಲ್ಪ ನೀಡುವ ಕಾರ್ಯ ಆರಂಭವಾಗಿದೆ.
‘ತಾಲ್ಲೂಕಿನ ಕಿರಂಗೂರು ವೃತ್ತದ ಬಳಿ ಇರುವ ಈ ಐತಿಹಾಸಿಕ ದಸರಾ ಬನ್ನಿ ಮಂಟಪದ ಸುತ್ತ ಸಿಮೆಂಟ್ ಕಲ್ಲಿನ ನೆಲಹಾಸು (ಇಂಟರ್‌ಲಾಕ್ ಸಿಸ್ಟಂ) ಹಾಕುವ ಕಾರ್ಯ ಭಾಗಶಃ ಮುಗಿದಿದೆ. ಕಲ್ಲು ಹಾಸಿನ ಜಾಗಕ್ಕೆ ಹೊಂದಿಕೊಂಡಂತೆ ಎರಡೂ ಬದಿಯಲ್ಲಿ ಹುಲ್ಲು ಹಾಸಿನ ಕಿರು ಉದ್ಯಾನ (ಲಾನ್) ನಿರ್ಮಾಣ ಕಾರ್ಯ ಆರಂಭವಾಗಿದೆ. ಹುಲ್ಲು ಹಾಸಿನ ಮಧ್ಯೆ ವಾಕ್‌ಪಾಥ್ ಕೂಡ ನಿರ್ಮಾಣವಾಗಲಿದೆ. ಉದ್ಯಾನದ ಸುತ್ತಲೂ ಸಂಗೀತ ಹೊಮ್ಮಿಸುವ ಅಲಂಕೃತ ವಿದ್ಯುತ್ ದೀಪಗಳನ್ನು ಜೋಡಿಸಲಾಗುವುದು’ ಎಂದು ಕಿರಂಗೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಶಾಂತ್‌ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬನ್ನಿ ಮಂಟಪದ ಈಶಾನ್ಯ ದಿಕ್ಕಿನಲ್ಲಿರುವ ಪುರಾತನ ಕಲ್ಯಾಣಿಗೆ ರಕ್ಷಣಾ ಗೋಡೆ ನಿರ್ಮಿಸಲಾಗುವುದು. ಕಲ್ಯಾಣಿಯ ಮಲಿನ ನೀರು ಖಾಲಿ ಮಾಡಿ ತಿಳಿ ನೀರು ನಿಲ್ಲುವಂತೆ ಕ್ರಮ ವಹಿಸಲಾಗುವುದು. ಬನ್ನಿ ಮಂಟಕ್ಕೆ ಸೇರಿದ 17 ಗುಂಟೆ ಜಾಗದ ಸುತ್ತ ಮೆಸ್ ಮಾದರಿಯ ತಂತಿ ಬೇಲಿಯನ್ನೂ ನಿರ್ಮಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆಯಡಿ, ₹12 ಲಕ್ಷ ವೆಚ್ಚದಲ್ಲಿ ದಸರಾ ಬನ್ನಿ ಮಂಟಪಕ್ಕೆ ಹೊಸ ರೂಪ ನೀಡಲಾಗುತ್ತದೆ’ ಎಂದು ಹೇಳಿದರು.
‘ದಸರಾ ಉತ್ಸವ ಆರಂಭವಾಗುವ ಬನ್ನಿ ಮಂಟಪ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಶಾಸಕ ರಮೇಶ ಬಂಡಿಸಿದ್ದೇಗೌಡ ಈಗಾಗಲೇ ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಮತ್ತು ಶಾಸಕರು ನೀಡಿದ ಸೂಚನೆಯಂತೆ ಈ ಮಂಟಪವನ್ನು ಆಕರ್ಷಣೆಯ ತಾಣವಾಗಿ ರೂಪಿಸಲಾಗುವುದು’ ಎಂದು ಪ್ರಶಾಂತ್‌ಬಾಬು ತಿಳಿಸಿದರು.
ಮೂರು ಆನೆಗಳು: ‘ಈ ಬಾರಿಯ ದಸರಾ ಉತ್ಸವದ ಜಂಬೂ ಸವಾರಿಗೆ ಮೈಸೂರಿನಿಂದ ಮೂರು ಆನೆಗಳನ್ನು ತರಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಮೈಸೂರು ದಸರಾ ಉತ್ಸವ ಆಚರಣಾ ಸಮಿತಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಬರ ಇರುವುದರಿಂದ ಸಾಂಪ್ರದಾಯಿಕ ಹಾಗೂ ಸರಳ ದಸರಾ ಆಚರಿಸಲಾಗುವುದು’ ಎಂದು ತಹಶೀಲ್ದಾರ್ ಜಿ. ಅಶ್ವಿನಿ ಹೇಳಿದ್ದಾರೆ.
‘ಅ.16ರಂದು ಮಧ್ಯಾಹ್ನ 2.15ಕ್ಕೆ ದಸರಾ ಬನ್ನಿ ಮಂಟಪದಿಂದ ಜಂಬೂ ಸವಾರಿ ಶುರುವಾಗಲಿದ್ದು, ಜಾನಪದ ಕಲಾ ತಂಡಗಳ ಸಹಿತ ನಡೆಯುವ ಉತ್ಸವ ಸಂಜೆ 6 ಗಂಟೆ ವೇಳೆಗೆ ಶ್ರೀರಂಗನಾಥಸ್ವಾಮಿ ದೇವಾಲಯ ತಲುಪಲಿದೆ. ದೇವಾಲಯ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವೇದಿಕೆ ನಿರ್ಮಿಸಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.