ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾರ್ಗೋನಹಳ್ಳಿಯಲ್ಲಿ ಮಕ್ಕಳ ಸಂತೆ

Published 13 ಜನವರಿ 2024, 13:58 IST
Last Updated 13 ಜನವರಿ 2024, 13:58 IST
ಅಕ್ಷರ ಗಾತ್ರ

ಕಿಕ್ಕೇರಿ: ಮಕ್ಕಳ ಶಿಕ್ಷಣ ಜೊತೆ ವ್ಯಾವಹಾರಿಕ ಜ್ಞಾನವನ್ನು ರೂಪಿಸಿಕೊಳ್ಳಲು ಸಂತೆಯಂತಹ ವೇದಿಕೆ ಅನುಕೂಲವಾಗಲಿದೆ ಎಂದು ಗ್ರಾಮ ಮುಖಂಡ ಮಾರ್ಗೋನಹಳ್ಳಿ ಮಂಜುನಾಥ್ ಹೇಳಿದರು.

ಹೋಬಳಿಯ ಮಾರ್ಗೋನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಕ್ಕಳ ಸಂತೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಶಾಲೆ, ಸರ್ಕಾರಿ ಶಾಲೆಗಳು ಉಳಿಯಲು ಇಂತಹ ಹಲವಾರು ಕಾರ್ಯಕ್ರಮ ಶಿಕ್ಷಕರು ರೂಪಿಸಬೇಕಿದೆ. ಕೇವಲ ಪಠ್ಯ ಸಾಕು ಎನ್ನದೆ ಪಠ್ಯೇತರ ಚಟುವಟಿಕೆಗಳಿಗೆ ಗಮನವಿರಲಿ. ಖುಷಿಯಿಂದ ಶಾಲೆಗೆ ಬರಲು ಪಠ್ಯದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಮುಂದಾಗಬೇಕು ಎಂದರು.
ಮನೆಯಿಂದ ಪೋಷಕರ ಬಳಿ ಮಕ್ಕಳು ಬೋಂಡಾ, ವಡೆ, ಚಕ್ಕುಲಿ, ನಿಪ್ಪಟ್ಟಿನಂತಹ ವಿವಿಧ ತಿಂಡಿ ತಿನಿಸು ಮಾಡಿಸಿಕೊಂಡು ಆಗಮಿಸಿದ್ದರು. ಕೋಸು, ಬದನೆ, ತೆಂಗಿನಕಾಯಿ, ಪಪ್ಪಾಯಿ, ಕೊತ್ತಂಬರಿ, ವಿವಿಧ ತರಕಾರಿ, ಸೊಪ್ಪುಗಳನ್ನು ತಂದಿದ್ದರು. ಎಲ್ಲವನ್ನು ಅಚ್ಚುಕಟ್ಟಾಗಿ ಒಂದೆಡೆ ಜೋಡಿಸಿ ವ್ಯಾಪಾರಕ್ಕೆ ಇಳಿದರು. ವ್ಯಾಪಾರಿಗಳನ್ನು ಮೀರಿಸುವಂತೆ ಕೂಗಿಕೊಂಡು ತಮ್ಮದೆ ಆದ ಶೈಲಿಯಲ್ಲಿ ವ್ಯಾಪಾರದಲ್ಲಿ ಮಗ್ನರಾದರು.
ಗ್ರಾಹಕ ಪೋಷಕ, ಗ್ರಾಮಸ್ಥರೊಂದಿಗೆ ಚೌಕಾಸಿ ವ್ಯಾಪಾರಕ್ಕೆ ಇಳಿದು ವ್ಯಾಪಾರ ಕೌಶಲತೆ ಮೆರೆದರು. ತೂಕದ ಯಂತ್ರದಲ್ಲಿ ಕರಾರುವಕ್ಕಾಗಿ ಮಾರಾಟ ವಸ್ತುಗಳನ್ನು ತೂಗಿದರು. ಒಂದಕ್ಕೆ ಒಂದು ಉಚಿತ ಎಂದು ಹಲವರು ಗಿರಾಕಿ ಸೆಳೆಯಲು ವ್ಯಾಪಾರ ತಂತ್ರವನ್ನು ಬಳಸಿದರು. ಮನೆಯಿಂದಲೇ ಬಟ್ಟೆ ಬ್ಯಾಗ್ ತರಬೇಕು ಎನ್ನುವುದು ತಿಳಿಯುವುದಿಲ್ಲವೇ. ಪ್ಲಾಸ್ಟಿಕ್ ಹಾನಿಕಾರಕ. ಪರಿಸರ ಸ್ನೇಹಿಯಾಗಿ ಬದುಕಲು ಮುಂದಾಗಬೇಕು ಅಲ್ಲವೇ ಎಂದು ಪ್ರಶ್ನಿಸಿದರು. ಕೆಲವು ಗಂಟೆ ನಡೆದ ಮಿನಿ ವ್ಯಾಪಾರ ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳನ್ನು ಮಕ್ಕಳು ಮಾರಾಟ ಮಾಡಿ ಖುಷಿಪಟ್ಟರು.


ಗ್ರಾಮೀಣ ಪ್ರದೇಶದ ವ್ಯಾಪಾರ ಕರಾಮತ್ತಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿ‌ಆರ್‌ಪಿ ಶ್ರೀಕಾಂತರಾಜೇ ಅರಸ್, ಎಸ್‌ಡಿ‌ಎಂಸಿ ಅಧ್ಯಕ್ಷೆ ರೋಜಾ, ಮುಖ್ಯ ಶಿಕ್ಷಕಿ ಸವಿತಾ, ಗ್ರಾಪಂ. ಮಾಜಿ ಉಪಾಧ್ಯಕ್ಷ ಪುಟ್ಟೇಗೌಡ, ಮುಖಂಡರಾದ ಎಂ.ಕೆ. ನಾಗರಾಜು, ಲಕ್ಕಣ್ಣ, ಗಿರೀಶ್, ಶ್ರೀನಿವಾಸ್, ರಮೇಶ್, ಕಾಳೇಗೌಡ, ಶಿವಣ್ಣ, ರಾಜಣ್ಣ ಭಾಗವಹಿಸಿದ್ದರು,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT