ಗುರುವಾರ , ಫೆಬ್ರವರಿ 25, 2021
18 °C
ಅಜ್ಜಿಗೆ ಬೇಕಿದೆ ನೆರವಿನ ಹಸ್ತ

10ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಕೀಲಾರದ ಸೂಲಗಿತ್ತಿ ಪಾರ್ವತಮ್ಮಗೆ ಸೂರಿಲ್ಲ

ಕೆ.ಆರ್.ಶಶಿಧರ Updated:

ಅಕ್ಷರ ಗಾತ್ರ : | |

ಕೆರಗೋಡು: ಆಸ್ಪತ್ರೆಗಳಿಲ್ಲದ ವೇಳೆ ಸಾವಿರಕ್ಕಿಂತಲೂ ಹೆಚ್ಚು ಹೆರಿಗೆ ಮಾಡಿಸಿದ, ಸೂಲಗಿತ್ತಿ ಕೀಲಾರ ಗ್ರಾಮದ ಪಾರ್ವತಮ್ಮ ಗ್ರಾಮೀಣ ಭಾಗದ ವೈದ್ಯೆಯಾಗಿ ಪ್ರಸಿದ್ಧವಾಗಿದ್ದರು.

ಮೂಲತಃ ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಗ್ರಾಮದವರಾದ ಪಾರ್ವತಮ್ಮ, ಗುಡ್ಡೆ ಮಾರಸಿಂಗನಹಳ್ಳಿ ಗ್ರಾಮದ ಸಿದ್ದಾಚಾರ್ ಜೊತೆ ವಿವಾಹವಾದ ಬಳಿಕ ಅಲ್ಲೇ ನೆಲೆಸಿದ್ದರು. ಬರಗಾಲದಿಂದಾಗಿ 50 ವರ್ಷಗಳ ಹಿಂದೆ ಕುಟುಂಬ ಸಮೇತ ಕೀಲಾರ ಗ್ರಾಮಕ್ಕೆ ಬಂದು ಆಲೆಮನೆಯಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡರು. ಕೀಲಾರ, ಈಚಗೆರೆ, ಚಿಕ್ಕಬಾಣಸವಾಡಿ, ದೊಡ್ಡಬಾಣಸವಾಡಿ, ಆಲಕೆರೆ, ಚಾಮಲಾಪುರ, ಹೊಡಾಘಟ್ಟ, ಉಮ್ಮಡಹಳ್ಳಿ, ಹುಲಿವಾನ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಯಾರದೇ ಮನೆಯಲ್ಲಿ ಹೆರಿಗೆ ಬೇನೆ ಬಂದರೆ ಪಾರ್ವತಮ್ಮನನ್ನು ಕರೆಸುತ್ತಿದ್ದರು. ಕೆಲವು ವೇಳೆ ಮಧ್ಯ ರಾತ್ರಿ, ಮಳೆ, ಚಳಿ ಎನ್ನದೇ ಗ್ರಾಮೀಣ ಭಾಗದಲ್ಲಿ ಸರಳ ಹೆರಿಗೆ ಮಾಡಿಸಿದ್ದಾರೆ.

ನನಗೆ ಗರ್ಭಿಣಿ ಮಹಿಳೆಯರ ನೋವು ತಡೆಯಲಾಗದೆ, ಅವರ ಹೆರಿಗೆ ನೋವು ಹಂಚಿಕೊಂಡು ಹೋಗಬೇಕು ಎಂಬ ಮನಸ್ಸಿನಿಂದ ಹೋಗುತ್ತಿದ್ದೆ. ಅಲ್ಲಿ ಹಳೆಯ ಸೂಲಗಿತ್ತಿಯರು ಮಾಡಿಸುತ್ತಿದ್ದ ಹೆರಿಗೆ ನೋಡಿ ನಾನೂ ಕಲಿತುಕೊಂಡೆ. ಪಾರ್ವತಮ್ಮ ಗರ್ಭಿಣಿ ಪರಿಸ್ಥಿತಿ ನೋಡಿಕೊಂಡು ಹೆರಿಗೆ ಮಾಡುತ್ತಿದ್ದೆ. ಈವರೆಗೂ ಎಲ್ಲವೂ ಉತ್ತಮ ರೀತಿಯಲ್ಲಿ ನಡೆದಿದ್ದು, ಕೆಲವೊಮ್ಮೆ ಹೆರಿಗೆ ಕ್ಲಿಷ್ಟ ಎನಿಸಿದರೆ ಜಿಲ್ಲಾಸ್ಪತ್ರೆಗೆ ಕಳಿಸಿದ್ದೇನೆ ಎಂದು ಪಾರ್ವತಮ್ಮ ನೆನಪು ಬಿಚ್ಚಿಡುತ್ತಾರೆ.

ಆಗೆಲ್ಲಾ ಹೆಣ್ಣು ಮಕ್ಕಳು ಉತ್ತಮ ಆಹಾರ ಸೇವನೆಯಿಂದಾಗಿ ದೇಹ ಸಫೂರವಾಗಿತ್ತು. ಇತ್ತೀಚಿನ ಹೆಣ್ಣು ಮಕ್ಕಳು ಪೌಷ್ಟಿಕ ಆಹಾರ ಕೊರತೆಯಿಂದ ಬಳಲಿದ್ದು, ಹೆರಿಗೆ ಬೇನೆ ತಾಳಲಾರದೇ ಆಪರೇಷನ್ ಮೊರೆ ಹೋಗುತ್ತಿದ್ದಾರೆ. ಹೆರಿಗೆ ಮಾಡಿಸಿದಾಗ ಮನೆಯವರು ಅಕ್ಕಿ, ಬೆಲ್ಲ, ಸಾಂಬಾರ್ ಪದಾರ್ಥಗಳು, ಸೀರೆ ಹಾಗೂ ಹಣ ನೀಡುತ್ತಿದ್ದರು. ಆಗ ನಾನು ಮಾಡಿಸಿದ ಸಾವಿರಕ್ಕೂ ಹೆರಿಗೆಗಳು ಪಾಸ್ ಆಗಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಕೀಲಾರದ ಹೆರಿಗೆ ವೈದ್ಯೆ ಇಳಿ ವಯಸ್ಸಿನಲ್ಲಿ ಸ್ವಂತ ಸೂರು ಇಲ್ಲದೆ ಜೀವನಕ್ಕೆ ಪರದಾಡುತ್ತಿದ್ದಾರೆ. ಸರ್ಕಾರ ನೀಡುವ ₹ 500 ವೃದ್ಧಾಪ್ಯ ವೇತನದಿಂದ ಇಳಿಯಂಚಿನ ಜೀವನವನ್ನು ಮಗಳ ಮನೆಯಲ್ಲಿ ಕಳೆಯುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ವಯೋ ಸಮಸ್ಯೆಯಿಂದಾಗಿ ಹೆರಿಗೆ ಮಾಡಲಾಗುತ್ತಿಲ್ಲ. ಈಗಲೂ ಆಗ ಹೆರಿಗೆ ಮಾಡಿಸಿದ ಗರ್ಭಿಣಿ ತಾಯಂದಿರು ಮಕ್ಕಳು, ಮೊಮ್ಮಕ್ಕಳ ಜತೆ ಬಂದು ಮಾತನಾಡಿಸುತ್ತಾರೆ ಎಂದರು.

ಸರ್ಕಾರ ಹಲವು ಮಂದಿಗೆ ಪ್ರಶಸ್ತಿ, ಸನ್ಮಾನ, ನಿವೇಶನಗಳನ್ನು ನೀಡಿ ಗೌರವಿಸುತ್ತಿವೆ. ಆದರೆ, ಸಾವಿರಗಟ್ಟಲೆ ನಿಸ್ವಾರ್ಥದಿಂದ ಹೆರಿಗೆ ಮಾಡಿಸಿ, ವೃದ್ಧಾಪ್ಯವನ್ನು ನೋವಿನಿಂದ ಕಳೆಯುತ್ತಿರುವ ಪಾರ್ವತಮ್ಮನಿಗೆ ನೆರವಿನ ಹಸ್ತ ನೀಡಬೇಕಾಗಿದೆ.

90 ವರ್ಷ ಕಳೆದಿರುವ ಅಜ್ಜಿ ಪಾರ್ವತಮ್ಮನಿಗೆ ರಕ್ತದೊತ್ತಡ, ಮಧುಮೇಹ ಯಾವುದೇ ಕಾಯಿಲೆಗಳಿಲ್ಲ. ಸುಸ್ತು, ಬಿಟ್ಟರೆ ಕಳೆದ ಒಂದು ವರ್ಷದಿಂದ ಓಡಾಡಲು ಆಗುತ್ತಿಲ್ಲ ಎಂದು ಮೊಮ್ಮಗ ಕೃಷ್ಣ ಹೇಳಿದರು. ಇವರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

ಪಾರ್ವತಮ್ಮನ ಸೇವೆ ಗೌರವಿಸಿ

ಪಾರ್ವತಮ್ಮ ನಮ್ಮ ಗ್ರಾಮ ಸೇರಿದಂತೆ ಸುತ್ತಲಿನ 20 ಹಳ್ಳಿಗಳಲ್ಲಿ 10 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ. ಜಿಲ್ಲಾಡಳಿತ ನಿವೇಶನ, ಆರ್ಥಿಕ ಸೌಲಭ್ಯ ನೀಡಿ ಗೌರವಿಸಬೇಕು. ರಾಜ್ಯ ಸರ್ಕಾರ ಇವರ ಸಮಕಾಲೀನರಾದ ತುಮಕೂರು ನರಸಮ್ಮಗೆ ಕರ್ನಾಟಕ ರತ್ನ, ಪದ್ಮಶ್ರೀ , ಗೌರವ ಡಾಕ್ಟರೇಟ್ ಸಿಕ್ಕಿದೆ. ಹಾಗೆಯೇ ಇವರನ್ನು ಗುರ್ತಿಸಿ ಗೌರವಿಸಬೇಕು ಎಂದು ಕೀಲಾರ ಗ್ರಾಮದ ಚಂದ್ರಶೇಖರ್ ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು