ಶನಿವಾರ, ಏಪ್ರಿಲ್ 1, 2023
23 °C
ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪ್ರಗತಿ ಪರಿಶೀಲನಾ ಸಭೆ: ದೇವಾಲಯದ ಆಸ್ತಿ ರಕ್ಷಣೆ, ಒತ್ತವರಿ ತೆರವಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಜಿಲ್ಲೆಯಲ್ಲಿ ಸರ್ಕಾರಿ ಅಧೀನ ದೇವಸ್ಥಾನಗಳ ವ್ಯಾಪ್ತಿಯ ಆಸ್ತಿ ಪಾಸ್ತಿ ರಕ್ಷಣೆ ಮಾಡಬೇಕು. ಭೂ ಒತ್ತುವರಿ ಬಗ್ಗೆ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು’ ಎಂದು ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ದೇವಸ್ಥಾನಗಳ ಸಮೀಕ್ಷೆ ನಡೆಸಿ ಆಡಳಿತಾಧಿಕಾರಿ ಇಲ್ಲದ ಕಡೆ ಆಡಳಿತ ಮಂಡಳಿ ರಚಿಸಬೇಕು. ಸಪ್ತಪದಿ ಕಾರ್ಯಕ್ರಮವನ್ನು ಪುನರ್ ಆರಂಭಿಸಿದ್ದು ಇನ್ನು ಮುಂದೆ ಮದುವೆ ಕಾರ್ಯಕ್ರಮಗಳು ಸರ್ಕಾರದಿಂದ ನಡೆಯಲಿವೆ. ಜಿಲ್ಲೆಯ ಬಿ ಮತ್ತು ಸಿ ದರ್ಜೆಯ ಸರ್ಕಾರದ ಅಧಿಸೂಚಿತ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಮಂಡಳಿ ರಚನೆಗೆ ಗಮನ ನೀಡಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿರುವ ಸರ್ಕಾರದ ಅಧಿಸೂಚಿತ ಬಿ ಮತ್ತು ಸಿ ದರ್ಜೆ ದೇವಸ್ಥಾನಗಳಿಗೆ ಈಗಾಗಲೇ ವ್ಯವಸ್ಥಾಪನಾ ಮಂಡಳಿ ರಚನೆಯಾಗಿ ಅವಧಿ ಮುಗಿದಿದ್ದರೆ ಅಂತಹ ವ್ಯವಸ್ಥಾಪನಾ ಮಂಡಳಿ ರಚನೆಗೆ ವಿಶೇಷ ಗಮನ ನೀಡಬೇಕು. ಅರ್ಚಕರ ಸಮಸ್ಯೆಗಳು, ದೇವಸ್ಥಾನಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಲ್ಪಿಸಲು ಆಡಳಿತ ಮಂಡಳಿಗಳ ರಚನೆಯ ಜೊತೆಗೆ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯನ್ನು ಪ್ರತಿ ತಿಂಗಳು ನಡೆಸಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ದೇವಸ್ಥಾನಗಳಿಗೆ ಬರುವಂತಹ ಕಾಣಿಕೆ ಮತ್ತು ಹುಂಡಿ ದೇವಸ್ಥಾನದ ಅಭಿವೃದ್ಧಿಗೆ ಬಳಸುವಂತಾಗಬೇಕು’ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ‘ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಮತ್ತು ನಂತರದ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯದ ಕೊರತೆ ಆಗದಂತೆ ನಿಗಾ ವಹಿಸಬೇಕು. ಶಾಲೆಗಳು ಮುಂಬರುವ ದಿನಗಳಲ್ಲಿ ಪ್ರಾರಂಭವಾಗುತ್ತಿದ್ದು , ಇಲಾಖಾ ವ್ಯಾಪ್ತಿಗೆ ಬರುವ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಸೂಕ್ತ ವ್ಯವಸ್ಥೆ ಗಳನ್ನ ಕಲ್ಪಿಸಬೇಕು’ ಎಂದರು.

ಮಳವಳ್ಳಿ ಮತ್ತು ಮಂಡ್ಯದಲ್ಲಿ ಹಿಂದುಳಿದ ವರ್ಗಗಳ ಮೊರಾರ್ಜಿ ಶಾಲೆ ಸ್ಥಾಪನೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹೆಚ್ಚುವರಿ ವಸತಿ ನಿಲಯಗಳನ್ನು ಗುರುತಿಸಲು, ವಾರ್ಷಿಕ ಆಧಾರದ ಮೇಲೆ ಬಾಡಿಗೆ ಕಟ್ಟಡ ಪಡೆಯಲು ವಾರ್ಷಿಕ ಆರ್ಥಿಕ ವ್ಯಯ ಸೇರಿದಂತೆ ಇನ್ನಿತರ ವರದಿಯನ್ನು ಸಿದ್ಧಪಡಿಸಬೇಕು. ಇಲಾಖಾ ವ್ಯಾಪ್ತಿಗೆ ಬರುವ ವಿದ್ಯಾರ್ಥಿ ನಿಲಯಗಳ ಕಾಮಗಾರಿ, ಸಮುದಾಯಗಳ ಉದ್ಘಾಟನೆ, ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಎಂ.ಶ್ರೀನಿವಾಸ್, ಡಿ.ಸಿ ತಮ್ಮಣ್ಣ, ಸಿ.ಎಸ್ ಪುಟ್ಟರಾಜು, ಅನ್ನದಾನಿ, ಕೆ.ಟಿ ಶ್ರೀಕಂಠೇಗೌಡ, ಎನ್‌.ಅಪ್ಪಾಜಿಗೌಡ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ ಸಿಇಒ ದಿವ್ಯಪ್ರಭು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್ ಇದ್ದರು.

ಅಧಿಕಾರಿ ವಿರುದ್ಧ ಆಕ್ರೋಶ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ವೇಳೆ ಸಭೆಗೆ ಗೈರಾಗಿದ್ದ ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬೋರೇಗೌಡ ವಿರುದ್ಧ ಸಚಿವ ಕೋಟ ಶ್ರೀನಿವಾಸಪೂಜಾರಿ ಕಿಡಿಕಾರಿದರು.

ನಿಗಮದಿಂದ ಅರ್ಹ ಫಲಾನುಭವಿಗಳಿಗೆ ನೀಡುವ ಬೈಕ್ ಯೋಜನೆ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ಬೋರೇಗೌಡ ಸಭೆಯಲ್ಲಿ ಇರಲಿಲ್ಲ. ‘ಈಗಲೇ ಸಭೆಗೆ ಕರೆಸಿ, ಇಲ್ಲದಿದ್ದರೆ ಆತನನ್ನು ಅಮಾನತು ಮಾಡಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು. ನಂತರ ಬೋರೇಗೌಡ ಸಭೆಗೆ ಹಾಜರಾದರು. ಸಭೆಗೆ ತಡವಾಗಿ ಬಂದಿದ್ದಕ್ಕೆ ತರಾಟೆಗೆ ತೆಗೆದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು