ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿಕ್ಕೇರಿ: ನಿರ್ವಹಣೆ ಕೊರತೆಯಿಂದ ಸೊರಗಿದ ಅಮಾನಿಕೆರೆ

ಕೆರೆ ಒತ್ತುವರಿ ತೆರವು, ದುರಸ್ತಿಗೆ ರೈತರ ಆಗ್ರಹ
Published 5 ಆಗಸ್ಟ್ 2024, 5:47 IST
Last Updated 5 ಆಗಸ್ಟ್ 2024, 5:47 IST
ಅಕ್ಷರ ಗಾತ್ರ

ಕಿಕ್ಕೇರಿ: ಇಲ್ಲಿನ ‘ಅಮಾನಿಕೆರೆ’(ಜೋಡಿಕೆರೆ)ಯ ನಿರ್ವಹಣೆ ಕೊರತೆಯಿಂದ ಅಲ್ಲಲ್ಲಿ ಕೋಡಿ ಕಲ್ಲುಗಳು ಕುಸಿಯುತ್ತಿದ್ದು, ಇದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.

ಹೌದು, ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ತವರೂರಿನ ಕಾವ್ಯಸ್ಫೂರ್ತಿ ಕೆರೆ(ಸಿರಿಗೆರೆ) ಕೋಡಿ ಅಪಾಯದಲ್ಲಿದೆ. ಸ.ನಂ.219 ರಲ್ಲಿ 222.22 ಎಕರೆ ಅಮಾನಿಕೆರೆ ಹಾಗೂ ಸ.ನಂ.29 ರಲ್ಲಿ 37.7 ಎಕರೆ ವಡಕೆಕಟ್ಟೆ ಕೆರೆ ಸೇರಿ ಜೋಡಿ ಕೆರೆ ಇದಾಗಿದ್ದು, ಬರೋಬ್ಬರಿ 257.09 ಎಕರೆ ವಿಸ್ತೀರ್ಣ ಹೊಂದಿದ್ದು, ದೊಡ್ಡ ಸರೋವರದಂತೆ ಕಾಣುತ್ತದೆ.

ಈ ಹಿಂದೆ ನಾಲೆಯ ಆಶ್ರಯವಿಲ್ಲದೆ ಮಳೆಗಾಲದಲ್ಲಿ ಜೋಡಿ ಕೆರೆ ತುಂಬುತ್ತಿತ್ತು. ಆದರೆ, ಈಗ ಹಳ್ಳ, ಕೊಳ್ಳ, ಒಡ್ಡುಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಈ ಜೋಡಿಕೆರೆಗೆ ಹೇಮಾವತಿ ನಾಲೆಯ ನೀರೇ ಗತಿ ಎಂಬಂತಾಗಿದೆ. ಒತ್ತುವರಿ ತೆರವು ಮಾಡಿಸುವಂತೆ ಹಲವು ವರ್ಷಗಳ ಕೂಗು ಹಾಗೆಯೇ ಇದೆ.

ಕೆರೆ ಕೋಡಿ ಸುಮಾರು 200ಮೀ. ಉದ್ದವಿದ್ದು, ಅಲ್ಲಲ್ಲಿ ಕೋಡಿ ಮೇಲ್ಭಾಗದಲ್ಲಿರುವ ಸಿಮೆಂಟಿನ ದಿಂಡು ಕಿತ್ತುಬಂದಿದೆ. 2 ಕಿ.ಮೀ. ವಿಸ್ತಾರದ ಏರಿಯಲ್ಲಿ ಗಿಡಗಂಟಿ ಬೆಳೆದು ನಿಂತಿವೆ. ಏರಿಯ ಮೇಲಿನ ತಡೆಗೋಡೆ ಕಲ್ಲುಗಳು ಅಲ್ಲೊಂದು ಇಲ್ಲೊಂದಿದ್ದು, ವಾಹನ ಸವಾರರು, ಪಾದಚಾರಿಗಳು, ವಿದ್ಯಾರ್ಥಿಗಳು ಹಾಗೂ ರೈತರ ಸಂಚಾರಕ್ಕೆ ಅಡ್ಡಿಯಾಗಿದೆ.

‘ಕುಂಭದ್ರೋಣ ಮಳೆಯಿಂದ 10 ವರ್ಷಗಳ ಹಿಂದೆ ರೈತರ ಜಮೀನುಗಳಿಗೆ ನೀರು ಬಿಡುವ ತೂಬು(ಮಡಬಾಯಿ) ಬಿರುಕು ಬಿಟ್ಟಿತ್ತು. ಆಗ ಅಧಿಕಾರಿಗಳು ದುರಸ್ತಿ ನೆಪಹೇಳಿಕೊಂಡು ತುಂಬಿದ ಕೆರೆ ಕೋಡಿ ಹೊಡೆದು ನೀರು ಹೊರ ಹರಿಸಿದ್ದರಿಂದ ರೈತರು ಬೆಳೆ ಬೆಳೆಯದಂತೆ ಮಾಡಿದ್ದರು. ಬರೋಬ್ಬರಿ ಒಂದು ವರ್ಷ ರೈತರು ಬೆಳೆ ಬೆಳೆದಿರಲಿಲ್ಲ. ಆದರೆ, ದುರಸ್ತಿಯನ್ನು ನೆಪ ಮಾತ್ರಕ್ಕೆ ಮಾಡಿದ್ದರು ಎಂಬುದಕ್ಕೆ ಇಲ್ಲಿನ ಚಪ್ಪಡಿ ಮತ್ತು ಕಲ್ಲುಗಳು ಮೇಲೇಳುತ್ತಿರುವುದೇ ಸಾಕ್ಷಿಯಾಗಿದೆ’ ಎಂದು ರೈತರು ಆರೋಪಿಸುತ್ತಾರೆ.

‘ಮಳೆ ಸುರಿದಾಗಲ್ಲೆಲ್ಲಾ ಕೆರೆಕೋಡಿ ಕಲ್ಲುಗಳು ಕಿತ್ತು ಬರುತ್ತವೆ. ಕೋಡಿಯ ಮೇಲೆ ನೀರು ಹರಿಯದೇ ಕೆಳಭಾಗದ ಕಲ್ಲಿನೊಳಗೆ ನೀರು ಹರಿಯುತ್ತದೆ. ಸಣ್ಣದಾಗಿ ಕಲ್ಲಿನ ಬಿರುಕುಗಳಲ್ಲಿ ಹರಿಯುತ್ತಿದ್ದ ನೀರು ನಂತರ ಕೆರೆ ಅರೆಬರೆ ತುಂಬಿದರೆ ಭಾರಿ ಪ್ರಮಾಣದಲ್ಲಿ ನೀರು ಹೊರ ಹೋಗುತ್ತದೆ. ಹಾಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ರೈತರಾದ ಉಮೇಶ, ಪ್ರದೀಪ ಹಾಗೂ ದೀಪು ಒತ್ತಾಯಿಸುತ್ತಾರೆ.

ಒತ್ತುವರಿ ತೆರವಿಗೆ ರೈತರ ಆಗ್ರಹ:

‘ಹೂಳು ತೆಗೆಯದೆ ಕೆರೆ ಆಟದ ಮೈದಾನದಂತಾಗಿದೆ. ಇದರಿಂದ ನೀರಿನ ಸಂಗ್ರಹಣೆ ಸಾಮರ್ಥ್ಯ ಕುಸಿದಿದೆ. ಬೂವಿನಹಳ್ಳಿ, ಮಾದಿಹಳ್ಳಿ, ಸೊಳ್ಳೇಪುರ ಭಾಗದ ಕೆರೆದಂಡೆಯಲ್ಲಿ ಒತ್ತುವರಿಯ ಪ್ರಮಾಣ ಹೆಚ್ಚಿದೆ. ಇದರಿಂದ ಈ ಭಾಗದ ರೈತರು ಕಬ್ಬು, ಭತ್ತ, ತೆಂಗು, ಅಡಿಕೆ ಸೇರಿದಂತೆ ಕೆಲವು ತೋಟಗಾರಿಕೆ ಬಳೆಗಳನ್ನು ಬೆಳೆಯುವುದಕ್ಕೆ ತೊಂದರೆಯಾಗುವುದನ್ನು ತಪ್ಪಿಸಬೇಕು ಎಂಬುದು’ ರೈತ ಗುರುಮೂರ್ತಿ ಅವರ ಆಗ್ರಹವಾಗಿದೆ.

ಕಿಕ್ಕೇರಿಯ ಅಮಾನಿಕೆರೆಯ ಕೋಡಿಯ ಮೇಲ್ಭಾಗದಲ್ಲಿ ಜಲ್ಲಿಕಲ್ಲು ಕಿತ್ತು ಬರುತ್ತಿರುವುದು
ಕಿಕ್ಕೇರಿಯ ಅಮಾನಿಕೆರೆಯ ಕೋಡಿಯ ಮೇಲ್ಭಾಗದಲ್ಲಿ ಜಲ್ಲಿಕಲ್ಲು ಕಿತ್ತು ಬರುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT